ಗೃಹಿಣಿಯರು ಮೊದಲು ತಮ್ಮ ಈ ಐದು ಅಭ್ಯಾಸಗಳನ್ನು ಬಿಡಬೇಕಾದ ಅವಶ್ಯಕತೆ ಇದೆ! ಇಲ್ಲದಿದ್ದರೆ…
ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಅವರವರ ಕೆಲಸಗಳೇ ಹೆಚ್ಚು ಕಠಿಣ ಎನಿಸುತ್ತದೆ. ಮಕ್ಕಳಿಗೆ ಅವರ ಓದು ಕಠಿಣ ಎನಿಸಿದರೆ, ಗಂಡಸರಿಗೆ ತಮ್ಮ ಒಂಬತ್ತರಿಂದ ಐದರವರೆಗಿನ ಕೆಲಸವು ಹೆಚ್ಚು ಎನಿಸುತ್ತದೆ. ಆದರೆ ಇದೆಲ್ಲದರ ನಡುವೆ ಕುಟುಂಬವೊಂದರಲ್ಲಿ ಮನೆಯ ನಿರ್ವಹಣೆ ಮಾಡುವ ಮಹಿಳೆಯ ಕಡೆಗೆ ಮಾತ್ರ ಯಾರ ಗಮನವೂ ಕೂಡಾ ಹರಿಯುವುದೇ ಇಲ್ಲ. ಹಾಗೇನಾದರೂ ಹರಿದರೂ ಕೂಡಾ ಮನೆಯಲ್ಲಿ ಮಹಿಳೆಯರು ಅಡುಗೆ ಮಾಡುವುದು,ತಿನ್ನುವುದು, ಮಕ್ಕಳ ಆರೈಕೆ, ಟಿವಿ ನೋಡುವುದು ಮಾಡುತ್ತಾರೆ ಎಂದು ಕೊಳ್ಳುತ್ತಾರೆ ಜನರು. ಆದರೆ ನಿಜಕ್ಕೂ ಮಹಿಳೆಯರ ಕೆಲಸ ಇಷ್ಟೇ ನಾ ಎಂದು ಆಲೋಚಿಸಿದರೆ ಇದು ತಪ್ಪು ಎನಿಸುತ್ತದೆ. ಏಕೆಂದರೆ ಮಹಿಳೆಗೆ ಮನೆ, ಮಕ್ಕಳು , ಪತಿ, ಅತ್ತೆ ಮಾವನ ಕೆಲಸಗಳ ಜೊತೆಗೆ ಮನೆಯನ್ನು ಗುಡಿಸಿ, ಒರೆಸಿ ಸ್ವಚ್ಚ ಮಾಡುವ, ಎಲ್ಲರ ಯೋಗ ಕ್ಷೇಮ ನೋಡುವ, ಸರಿಯಾದ ವೇಳೆಗೆ ಅಡುಗೆ ಮಾಡುವ, ಮನೆಗೆ ಬರುವ ಪ್ರತಿಯೊಬ್ಬ ಅತಿಥಿಗೂ ಆರೈಕೆ ಮಾಡುವ, ಮನೆಯ ಮುಂದಿನ ಗಿಡಗಳಿಗೆ ನೀರುಣಿಸುವ, ಆಗಾಗ ಮನೆ ಸ್ವಚ್ಛ ಮಾಡುವ ಹೀಗೆ ಹೇಳುತ್ತಾ ಹೋದರೆ ಅವರ ಕೆಲಸಗಳಿಗೊಂದು ಕೊನೆಯೇ ಇಲ್ಲವೇನೋ ಎನಿಸಿ ಬಿಡುತ್ತದೆ.
ಗೃಹಿಣಿಯರಿಗೆ ಅನೇಕ ಸಂದರ್ಭದಲ್ಲಿ ಸ್ವಂತ ಪರಿಚಯ ಎನ್ನೋದೆ ಇರುವುದಿಲ್ಲ. ರಾಧ ಅವರ ಅಮ್ಮ, ಕೃಷ್ಣ ಅವರ ಪತ್ನಿ, ಇನ್ಯಾರದೋ ಅಜ್ಜಿ ಹೀಗೆ ಗುರುತಿಸಲಾಗುತ್ತೆ. ಇನ್ನು ಮನೇಲಿ ಅವರು ತನಗೆ ಬಿಡುವಿಲ್ಲ ಎಂದಾಗ ಗಂಡ ಆದವನು ಮನೇಲಿ ನೀನು ಕಡಿದು ಕಟ್ಟೆ ಹಾಕೋದಾದ್ರೂ ಏನು ಅಂತಾರೆ. ಆದರೆ ಅದೇ ಗೃಹಿಣಿ ಒಂದು ದಿನ ಹಾಸಿಗೆ ಹಿಡಿದ್ರೆ ಮನೇಲಿ ಎಲ್ಲಾ ಕೆಲಸಗಳು ನಿಂತು ಹೋಗುತ್ತೆ. ಆದರೆ ಮನೆಗೆಲಸಗಳಲ್ಲಿ ಸದಾ ತೊಡಗಿಕೊಂಡಿರುವ ಅದೆಷ್ಟೋ ಮಂದಿ ಗೃಹಿಣಿಯರು ಕೆಲಸದಲ್ಲಿ ತೊಡಗಿ ತಮ್ಮ ಆರೋಗ್ಯವನ್ನೇ ಕಡೆಗಣಿಸಿಬಿಡುತ್ತಾರೆ. ಆದ್ದರಿಂದಲೇ ಮಹಿಳೆಯರು ವಿಶೇಷವಾಗಿ ಗೃಹಿಣಿಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಕೆಲವು ಅಭ್ಯಾಸಗಳನ್ನು ಅವರು ದೂರ ಮಾಡಬೇಕಿದೆ.
೧. ಎಲ್ಲರದ್ದೂ ಮುಗಿದ ಮೇಲೆ ಕೊನೆಯಲ್ಲಿ ತಿನ್ನುವುದು: ಮಹಿಳೆಯರು ಸಾಮಾನ್ಯವಾಗಿ ಮನೆಯಲ್ಲಿ ಅಡುಗೆ ಮಾಡಿ ಎಲ್ಲರಿಗೂ ಬಿಸಿ ಬಿಸಿ ಬಡಿಸಿ ತಾನು ಮಾತ್ರ ಕೊನೆಯಲ್ಲಿ ತಿನ್ನುವುದು ವಾಡಿಕೆ. ಕೆಲವೊಂದು ಸಂದರ್ಭಗಳಲ್ಲಿ ಊಟ ಅಥವಾ ತಿಂಡಿ ಕಡಿಮೆಯಿದ್ದರೆ ತನಗಾಗಿ ಸ್ವಲ್ಪ ಹೊಸದಾಗಿ ಮಾಡಿಕೊಳ್ಳುವ ಬದಲು ಗೃಹಿಣಿಯರು ಇರುವುದನ್ನೇ ತಿಂದು ಸುಮ್ಮನಾಗಿಬಿಡುವರು. ಅವರು ಇಂತಹ ಅಭ್ಯಾಸವನ್ನು ಬಿಡಬೇಕಾಗಿದೆ. ಮೊದಲು ತಾವು ತಿನ್ನಬೇಕು. ಮನೆಯವರು ಏಕೆಂದು ಪ್ರಶ್ನೆ ಮಾಡಿದರೆ ಅದು ತನ್ನ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ ಎಂಬುದನ್ನು ಅವರಿಗೆ ತಿಳಿಸಿ ಹೇಳಬೇಕು.

೨. ಉಳಿದು ತಣ್ಣಗಾದ ಊಟದ ಸೇವನೆ: ಅನೇಕ ಸಂದರ್ಭಗಳಲ್ಲಿ ಮಹಿಳೆಯರು ಮನೆಯಲ್ಲಿ ಹೆಚ್ಚಾಗಿ ಉಳಿದ ಆಹಾರ ಅಥವಾ ತಣ್ಣಗಿನ ಆಹಾರವನ್ನು ತಿಂದು ಬಿಡುತ್ತಾರೆ. ಎಲ್ಲರಿಗೂ ಬಿಸಿ ಬಿಸಿ ಆಹಾರ ಸಿದ್ದ ಮಾಡಿ ತಾನು ಮಾತ್ರ ಉಳಿದಿದ್ದನ್ನು ಏಕೆ ಎಸೆಯುವುದು ಎಂದು ತಿನ್ನುತ್ತಾರೆ. ಮಹಿಳೆಯರು ಮೊದಲು ಇಂತಹ ಅಭ್ಯಾಸವನ್ನು ಬಿಡಬೇಕಿದೆ. ಏಕೆಂದರೆ ಅದು ನಿಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ ದೇಹಕ್ಕೆ ವಿಟಮಿನ್ ಅವಶ್ಯಕತೆ ಬಹಳಷ್ಟಿದೆ. ಆದ್ದರಿಂದ ಉಳಿದ ಆಹಾರ ಎಸೆಯುವ ಇಷ್ಟವಿಲ್ಲವೆಂದರೆ ಎಲ್ಲರೂ ಹಂಚಿಕೊಂಡು ತಿನ್ನಿ. ಅದರ ಬದಲಾಗಿ ನಿಮ್ಮ ಆರೋಗ್ಯ ಕೆಡುವ ಹಾಗೆ ಹಳಸಿದ ಆಹಾರವನ್ನು ತಿನ್ನಬೇಡಿ.
೩. ಮನೆಯ ಎಲ್ಲಾ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊರುವುದು: ಮನೆಯಲ್ಲಿ ನಿಮ್ಮ ಜವಾಬ್ದಾರಿಯನ್ನು ಇತರರ ಜೊತೆಗೆ ಹಂಚಿಕೊಂಡರೆ ನಿಮಗೆ ಖಂಡಿತ ಅವಮಾನವಾಗುವುದಿಲ್ಲ ನಿಮ್ಮ ಹಿರಿತನಕ್ಕೆ ಕೂಡಾ ಧಕ್ಕೆಯಾಗುವುದಿಲ್ಲ. ಕುಟುಂಬದಲ್ಲಿ ಮಾರ್ಕೆಟ್ ಗೆ ಹೋಗಿ ಬರುವುದರಿಂದ ಹಿಡಿದು ಅಡುಗೆ, ಮಕ್ಕಳ ಆರೈಕೆ, ಅತ್ತೆ ಮಾವನನ್ನು ನೋಡಿಕೊಳ್ಳುವುದು , ವಿಶೇಷ ದಿನಗಳಲ್ಲಿ ಹೆಚ್ಚಿನ ಕೆಲಸ ಹೀಗೆ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸುವುದು ಕಷ್ಟ ಎನಿಸಿದಾಗ ಅದನ್ನು ಪತಿಯ ಜೊತೆಗೆ ಹಂಚಿಕೊಳ್ಳಿ. ಸಣ್ಣ ಪುಟ್ಟ ಕೆಲಸಗಳಿಗೆ ಇತರರ ಸಹಾಯವನ್ನು ಪಡೆದುಕೊಳ್ಳಲು ಹಿಂಜರಿಯಬೇಡಿ.
೪. ಮನೆಯ ಕೆಲಸಗಳಲ್ಲೇ ಮುಳುಗಿ ಹೊಸದೇನೂ ಮಾಡದೇ ಇರುವುದು: ಮನೆಯ ಎಲ್ಲಾ ಜವಾಬ್ದಾರಿಯನ್ನು ಗೃಹಿಣಿಯೇ ಹೊತ್ತಿದ್ದರೂ ಕೂಡಾ ಇಂದಿಗೂ ಅವರು ತಮ್ಮ ಮೊಬೈಲ್ ರೀಚಾರ್ಜ್ ಗೆ ತಮ್ಮ ಪತಿಯನ್ನೇ ಅವಲಂಬಿಸಿರುತ್ತಾರೆ. ಅವರಿಗೆ ಆನ್ಲೈನ್ ಟ್ರಾನ್ಸಾಕ್ಷನ್, ಸ್ಮಾರ್ಟ್ ಫೋನ್ ಗಳಕೆ, ಲ್ಯಾಪ್ ಟಾಪ್ ಉಪಯೋಗ ಇದಾವುದೂ ತಿಳಿದಿಲ್ಲ. ಆದ್ದರಿಂದ ಕನಿಷ್ಠ ಪಕ್ಷ ಮಹಿಳೆಯರು ಮನೆಯ ಕೆಲಸಗಳಲ್ಲೇ ಮುಳುಗಿ ಹೋಗುವ ಬದಲು ಇಂತಹ ಹೊಸ ವಿಷಯಗಳನ್ನು ಕಲಿಯುವ ಕಡೆಗೆ ಗಮನ ನೀಡುವ ಅವಶ್ಯಕತೆ ಇದೆ.
೫. ರಾತ್ರಿ ತಡವಾಗಿ ಮಲಗಿ ಮುಂಜಾನೆ ಬೇಗ ಏಳುವುದು: ಮಹಿಳೆಯರು ರಾತ್ರಿ ಎಲ್ಲಾ ಕೆಲಸ ಮುಗಿಸಿ ತಡರಾತ್ರಿ ಮಲಗುತ್ತಾರೆ. ಆದರೆ ಮುಂಜಾನೆ ಮತ್ತೆ ಬೇಗ ಎದ್ದು ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬಿಡುತ್ತಾರೆ. ಆದರೆ ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಮಹಿಳೆಯರು ರಾತ್ರಿ ವೇಳೆ ತಮ್ಮ ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಂಡು ಬೇಗ ಮಲಗುವುದು ಅವರಿಗೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಇಲ್ಲದೇ ಹೋದರೆ ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು. ಅಲ್ಲದೇ ಮಹಿಳೆಯರು ಆರೋಗ್ಯದ ಮೇಲೆ ಪರಿಣಾಮ ಆದರೆ
ಅವರು ವೈದ್ಯರ ಬಳಿ ಹೋಗಲು ಹಿಂದೇಟು ಹಾಕಿ ಮನೆ ಮದ್ದನ್ನು ನೋಡುತ್ತಾರೆ.