ಭೂಮಿಯ ಮೇಲೆ ಸ್ಥಾಪನೆಯಾಗಲಿದೆ ಬ್ಯಾಕ್ಟೀರಿಯಾಗಳ ಸಾಮ್ರಾಜ್ಯ: ಮಾನವ, ಪ್ರಾಣಿ ಪಕ್ಷಿ, ಮರ ಗಿಡ ಎಲ್ಲವುಗಳ ವಿನಾಶ ಖಚಿತ!

ಭವಿಷ್ಯದಲ್ಲಿ ಭೂಮಿಯ ಮೇಲೆ ಲಭ್ಯವಿರುವ ಆಮ್ಲಜನಕದ ಪ್ರಮಾಣದಲ್ಲಿ ತೀವ್ರ ಕೊರತೆಯುಂಟಾಗಲಿದೆ. ಈ ಕಾರಣದಿಂದಾಗಿಯೇ ಭೂ ಗ್ರಹದ ಮೇಲೆ ವಾಸಿಸುತ್ತಿರುವ ಅನೇಕ ಜೀವಿಗಳು ಕೂಡಾ ಅಂತ್ಯವಾಗುತ್ತವೆ ಎನ್ನುವ ಒಂದು ಸತ್ಯವನ್ನು ಜಪಾನ್ ಮತ್ತು ಅಮೆರಿಕಾದ ವಿಜ್ಞಾನಿಗಳು ವಿಶ್ವದ ಮುಂದೆ ಬಿಚ್ಚಿಟ್ಟಿದ್ದಾರೆ. ಈ ವಿಜ್ಞಾನಿಗಳ ಪ್ರಕಾರ ಭೂಮಿಯ ಮೇಲೆ ನೂರು ಕೋಟಿ ವರ್ಷಗಳ ಕಾಲ ಕಳೆದ ಕೂಡಲೇ ಆಮ್ಲಜನಕದ ಪ್ರಮಾಣದಲ್ಲಿ ತೀವ್ರವಾದ ಕೊರತೆಯುಂಟಾಗುತ್ತದೆ. ಇದರಿಂದ ಏರೋಬಿಕ್ ಜೀವಿಗಳು ಹಾಗೂ ಫೋಟೋಸಿಂಟೆಥಿಕ್ ಜೀವಿಗಳ ಜೀವನ ಸಂಕಟಕ್ಕೆ ಸಿಲುಕಿ ಅವು ಅಳಿವನ್ನು ಹೊಂದುವ ಸಾಧ್ಯತೆಗಳು ಹೆಚ್ಚುತ್ತವೆ ಎನ್ನಲಾಗಿದೆ. ಭೂಮಿಯ ವಾಯುಮಂಡಲದಲ್ಲಿ ಆಕ್ಸಿಜನ್ ಪ್ರಮಾಣ 21% ನಷ್ಟಿದೆ. ಮಾನವನಂತ ಜೀವಿಗಳ ಉಸಿರಾಟಕ್ಕೆ ಆಕ್ಸಿಜನ್ ಅವಶ್ಯಕತೆ ಅನಿವಾರ್ಯವಾಗಿದೆ.‌

ಆದರೆ ಭೂಮಿಯು ಹುಟ್ಟಿಕೊಂಡಾಗ ಭೂಮಿಯ ವಾತಾವರಣದಲ್ಲಿ ಇಷ್ಟು ಪ್ರಮಾಣದ ಆಮ್ಲಜನಕ ಇರಲಿಲ್ಲ ಅದರ ಪ್ರಮಾಣ ಬಹಳ ಕಡಿಮೆ ಇತ್ತ. ಅಲ್ಲದೇ ನೂರು ಕೋಟಿ ವರ್ಷಗಳ ನಂತರ ಮತ್ತೆ ಅಂತಹುದೇ ಪರಿಸ್ಥಿತಿ ಭೂಮಿಯ ಮೇಲೆ ಉದ್ಭವಿಸಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಜಪಾನಿನ ಟೋಹೋ ವಿಶ್ವವಿದ್ಯಾಲಯದ ವಿಜ್ಞಾನಿ ಕಾಜುಮಿ ಓಜಾಕಿ ಮತ್ತು ಅಟ್ಲಾಂಟದ ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ರಿಸ್ ರೀನ್ ಹಾರ್ಡ್ ಅವರು ಭೂಮಿಯ ಹವಾಮಾನ, ಭೌತಿಕ ಹಾಗೂ ಜೈವಿಕ ವ್ಯವಸ್ಥೆಯ ಮಾದರಿಯೊಂದನ್ನು ಸಿದ್ದಪಡಿಸಿದ್ದಾರೆ. ಅದರ ಮೂಲಕ ಅವರು ಭವಿಷ್ಯದಲ್ಲಿ ಭೂಮಿಯ ವಾಯುಮಂಡಲದಲ್ಲಿ ಉಂಟಾಗುವ ಬದಲಾವಣೆಗಳನ್ನು ಕುರಿತಾಗಿ ಅಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇಬ್ಬರೂ ವಿಜ್ಞಾನಿಗಳ ಪ್ರಕಾರ ಮುಂಬರುವ ನೂರು ಕೋಟಿ ವರ್ಷಗಳವರೆಗೂ ಕೂಡಾ ಭೂಮಿಯ ಮೇಲೆ ಆಕ್ಸಿಜನ್ ನ ಪ್ರಮಾಣ ಪ್ರಸ್ತುತ ಇರುವಂತೆ ಇರಲಿದೆಯಂತೆ. ಆದರೆ ಅದರ ನಂತರ ಆಮ್ಲಜನಕದ ಪ್ರಮಾಣದಲ್ಲಿ ದೊಡ್ಡ ಪ್ರಮಾಣದ ಕೊರತೆಯು ಎದುರಾಗಲಿದೆ. ವಾಯುಮಂಡಲದಲ್ಲಿ ಆಮ್ಲಜನಕದ ಲಭ್ಯತೆಯು ಇರುವುದಿಲ್ಲ. ಇದಕ್ಕೆ ಪ್ರಮುಖವಾದ ಕಾರಣ ಎಂದರೆ ಸೂರ್ಯನ ಆಯುಷ್ಯ ಎನ್ನಲಾಗಿದೆ. ಸೂರ್ಯನ ಆಯುಷ್ಯ ಹೇಗೆ ಕಡಿಮೆಯಾಗುತ್ತಾ ಸಾಗುತ್ತದೆಯೋ ಅದರ ಶಾಖ ಹಾಗೂ ಉಷ್ಣತೆಯು ಹೆಚ್ಚುತ್ತಾ ಸಾಗುತ್ತದೆ ಎನ್ನಲಾಗಿದೆ. ಸೂರ್ಯನಲ್ಲಿ ಉಷ್ಣಾಂಶವು ಹೆಚ್ಚುವುದರ ಪರಿಣಾಮವು ಭೂಮಿಯಲ್ಲಿ ಇರುವ ಕಾರ್ಬನ್ ಡೈ ಆಕ್ಸೈಡ್ ನ ಮೇಲೆ ಪರಿಣಾಮ ಬೀರುವುದು.

ಕಾರ್ಬನ್ ಡೈ ಆಕ್ಸೈಡ್ ನ ಕೊರತೆ ಉಂಟಾಗುವದು. ಇದರಿಂದ ಭೂಮಿಗೆ ಸೂರ್ಯನ ಶಾಖವನ್ನು ಹೀರಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಇದರ ನಂತರ ಭೂಮಿಯ ವಾಯುಮಂಡಲದಲ್ಲಿ ಬದಲಾವಣೆಗಳು ಸಂಭವಿಸುವುದು. ಕಾರ್ಬನ್ ಡೈ ಆಕ್ಸೈಡ್ ನಲ್ಲಿ ಕೊರತೆಯುಂಟಾಗುವ ಪರಿಣಾಮ ಫೋಟೋ ಸಿಂತೆಸಿಸ್ ಅಥವಾ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಭಾಗವಹಿಸುವ ಜೀವಿಗಳು ಅಂದರೆ ಮರ ಗಿಡಗಳು ನಾಶವಾಗುತ್ತವೆ. ಮರ ಗಿಡಗಳ ನಾಶದಿಂದ ಸಹಜವಾಗಿಯೇ ಆಕ್ಸಿಜನ್ ಉತ್ಪಾದನೆ ನಡೆಯದೇ ಅದರ ಪ್ರಮಾಣ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಆಕ್ಸಿಜನ್ ನ ಕೊರತೆ ಬಹಳ ಭಯಾನಕವಾಗಿರಲಿದೆ ಎಂದು ಕೂಡಾ ಹೇಳಿದ್ದಾರೆ ವಿಜ್ಞಾನಿ ಕ್ರಿಸ್ ರೀನ್ ಅವರು.

ಪ್ರಸ್ತುತ ಪ್ರಮಾಣಕ್ಕಿಂತ ಲಕ್ಷ ಪಟ್ಟು ಆಕ್ಸಿಜನ್ ಕೊರತೆ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಇಬ್ಬರೂ ವಿಜ್ಞಾನಿ ಗಳು ಕೂಡಾ ಈ ವೇಳೆಗೆ ವಾಯುಮಂಡಲದಲ್ಲಿ ಮಿಥೇನ್ ನ ಪ್ರಮಾಣ 10 ಸಾವಿರ ಪಟ್ಟು ಹೆಚ್ಚಾಗುತ್ತದೆ.‌ ಇಲ್ಲಿಂದ ವಾಯುಮಂಡಲದಲ್ಲಿ ಬದಲಾವಣೆ ಆರಂಭವಾಗಿ ಹತ್ತು ಸಾವಿರ ವರ್ಷಗಳ ನಂತರ ಆಕ್ಸಿಜನ್ ಸಂಪೂರ್ಣವಾಗಿ ಇಲ್ಲದಂತಾಗುತ್ತದೆ.‌ ಕಾಜುಮಿ ಒಜೋಕಿ ಅವರು ಈ ವೇಳೆಯಲ್ಲಿ ಭೂಮಿಯ ಮೇಲಾಗುವ ಬದಲಾವಣೆಯನ್ನು ಭೂಮಿ ಸಹಿಸುವುದು ಕಠಿಣವಾಗುತ್ತದೆ. ಭೂಮಿಯ ಮೇಲೆ ಕೇವಲ ಸೂಕ್ಷ್ಮ ಜೀವಿಗಳು ಮಾತ್ರವೇ ಬದುಕಿ ಉಳಿಯುತ್ತವೆ.

ಏರೋಬಿಕ್ ಅಲ್ಲದ ಹಾಗೂ ಪ್ರಾಚೀನ ಬ್ಯಾಕ್ಟೀರಿಯಾ ಗಳು ಮತ್ತೊಮ್ಮೆ ತಮ್ಮ ರಾಜ್ಯಭಾರವನ್ನು ಆರಂಭಿಸುತ್ತವೆ. ಭೂಮಿಯ ಮೇಲಿನ ಹಾಗೂ ಸಮುದ್ರದೊಳಗಿರುವ ಜಟಿಲ ಜೀವಿಗಳ ಅಂತ್ಯ ಕೂಡಾ ಆರಂಭವಾಗುತ್ತದೆ. ಆಕ್ಸಿಜನ್ ಕೊರತೆ, ಓಜೋನ್ ಪದರದ ನಾಶದಿಂದ ಭೂಮಿ ಹಾಗೂ ಸಾಗರಗಳು ಸೂರ್ಯನ ನೇರಳಾತೀತ ಕಿರಣಗಳ ಪ್ರಭಾವಕ್ಕೆ ಒಳಗಾಗಿ ಅವುಗಳ ಮೇಲೆ ಕೂಡಾ ದುಷ್ಪರಿಣಾಮ ಉಂಟಾಗುತ್ತದೆ. ಈ ಬಗ್ಗೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿ ನಟಾಲಿಯಾ ಅವರು ಭೂಮಿಯ ಮೇಲೆ ಆಮ್ಲಜನಕವು ಅನೇಕ ವಿಧಗಳಲ್ಲಿ ಅಸ್ತಿತ್ವದಲ್ಲಿದೆ, ಅದು ಜೀವನ ಪ್ರಾರಂಭವಾದಾಗಿನಿಂದ ಭೂಮಿಯಲ್ಲಿದೆ ಎಂದಿದ್ದಾರೆ.

ಅಲ್ಲದೇ ಹೊಸ ಅಧ್ಯಯನದ ಪ್ರಕಾರ, ಭೂಮಿಯಲ್ಲಿ ಆಮ್ಲಜನಕದ ಮಟ್ಟವು ಮುಂದೆ ಕಡಿಮೆ ಆಗಬಹುದು ಏಕೆಂದರೆ ಅದರ ಹಿಂದೆ ಅನೇಕ ಪರಿಸರ, ಬಾಹ್ಯಾಕಾಶ ಸಂಬಂಧಿತ ಕಾರಣಗಳನ್ನು ನೀಡಲಾಗುತ್ತಿದೆ ಹಾಗೂ ಭೂಮಿ ವಾಸಿಸಲು ಯೋಗ್ಯವಾದ ಗ್ರಹವಾಗಿ ಉಳಿಯುವುದು ಸಾಧ್ಯವಿಲ್ಲ ಎಂದು ಹೇಳಲಾಗಿದೆ.