ಕೃಷಿಯಲ್ಲಿ ಮಾಡಿದ ಒಂದು ವಿಶಿಷ್ಟ ಪ್ರಯೋಗ, ಕೇವಲ ಹತ್ತು ಗುಂಟೆ ಜಾಗದಲ್ಲಿ ಬಂತು 1.30 ಲಕ್ಷ ಆದಾಯ!
ಪ್ರತಿಯೊಬ್ಬ ರೈತರ ಕೆಲಸ ಮಾಡುವ ವಿಧಾನ, ಪದ್ಧತಿ ಮತ್ತು ವಿಚಾರ ಬೇರೆ ಬೇರೆಯಾಗಿರುತ್ತದೆ. ಸಾವಯವ ಕೃಷಿಯನ್ನು ಅನೇಕ ರೈತರು ತುಂಬಾ ದುಬಾರಿಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅದರ ಬದಲಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ತಮ್ಮ ತೋಟಗಳನ್ನು ಬಂಜರ ಮಾಡಿಕೊಳ್ಳುತ್ತಾರೆ.
ಇಷ್ಟಾದರೂ ಕೆಲವು ರೈತರು ಸಾವಯವ ಕೃಷಿ ಅನುಸರಿಸುವ ಮೂಲಕ ಹೆಚ್ಚಿನ ಹಣವನ್ನು ಗಳಿಸಿಕೊಳ್ಳುತ್ತಾರೆ. ಕೃಷಿ ವ್ಯವಸಾಯಕ್ಕೆ ಕಷ್ಟದ ಜೊತೆಗೆ ಕೌಶಲ್ಯವನ್ನು ಕೂಡಿಸಿದರೆ ಇದರಂಥ ವ್ಯವಸಾಯ ಬೇರೆ ಇಲ್ಲ. ಇದರ ಉತ್ತಮ ಉದಾಹರಣೆಯನ್ನು ಇಂದು ಈ ಲೇಖನದಲ್ಲಿ ನೋಡುವ. ಮಹಾರಾಷ್ಟ್ರದ ಐನಾಪುರ ಊರಿನ ತಾನಾಜಿ ಚೌಗುಲೆ ಹೆಸರಿನ ತರುಣನೊಬ್ಬ ಸಾವಯವ ಕೃಷಿಯನ್ನು ಅನುಸರಿಸಿ ಸಾಕಷ್ಟು ಹಣಗಳಿಸಿದ್ದಾನೆ. ರಾಸಾಯನಿಕ ಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರವನ್ನು ಉಪಯೋಗಿಸಿ ಕಾಯಿಪಲ್ಯಗಳ ದಾಖಲೆ ಉತ್ಪಾದನೆಯನ್ನು ತೆಗೆದುಕೊಂಡಿದ್ದಾನೆ. ಇದರಿಂದ ಎಲ್ಲರ ಗಮನ ತನ್ನತ್ತ ಸೆಳೆದು ಕೊಳ್ಳುವಲ್ಲಿ ತಾನಾಜಿ ಯಶಸ್ವಿಯಾಗಿದ್ದಾರೆ. ಅವರ ಈ ಯಶಸ್ವಿಯಾದ ಪ್ರಯೋಗವನ್ನು ನೋಡಲು ಮತ್ತು ಇದರ ಬಗ್ಗೆ ತಿಳಿದುಕೊಳ್ಳಲು ಉಳಿದ ಸುತ್ತ ಮುತ್ತಲ ರೈತರು ತನಾಜಿಯ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ.
ತಾನಾಜಿಯು ಒಂದು ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. ಊರಲ್ಲಿ ಮನೆಗಳನ್ನು ಕಟ್ಟುವ ವ್ಯವಸಾಯದ ಜೊತೆಗೆ ಕೃಷಿಯ ಅಭಿರುಚಿಯನ್ನು ಇಟ್ಟುಕೊಂಡವರು. ಕಳೆದ ಅನೇಕ ವರ್ಷಗಳಿಂದ ಭತ್ತ ಮತ್ತು ಕಬ್ಬು ಹೀಗೆ ಪರಂಪರಾಗತವಾಗಿ ಬಂದ ಬೆಳೆಗಳನ್ನೇ ಬೆಳೆಯುತ್ತಿದ್ದರು.

ಆನಂತರ ಕೃಷಿಯಲ್ಲಿ ಏನಾದರೂ ಬದಲಾವಣೆಯನ್ನು ಮಾಡಿ ಬೆಳೆ ಬೆಳೆಯಬೇಕು ಎಂದು ಯೋಚಿಸಿದರು. ಅದಕ್ಕನುಸಾರವಾಗಿ ಅವರು ಮೊದಲು ಸಾವಯವ ಕೃಷಿಯ ಬಗ್ಗೆ ಟ್ರೇನಿಂಗ್ ತೆಗೆದುಕೊಂಡರು. ಆ ಪ್ರಕಾರ ಮೊದಲು 10 ಗುಂಟೆ ಭೂಮಿಯಲ್ಲಿ ವಿವಿಧ ಪ್ರಕಾರದ ತರಕಾರಿ ಬೆಳೆಯಲು ಯತ್ನಿಸಿದರು. ಈ ಪ್ರಯೋಗ ಅವರು ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಸಫಲವಾಯಿತು. ಬರೀ ಹತ್ತೇ ಗುಂಟೆ ಜಾಗದಲ್ಲಿ 1 ಲಕ್ಷ 30 ಸಾವಿರ ₹ ಗಳ ಲಾಭ ಪಡೆದರು. ಇಲ್ಲಿಂದಲೇ ಅವರು ಸಾವಯವ ಕೃಷಿಯ ಲಾಭದ ಬಗ್ಗೆ ತಿಳಿದರು. ಮತ್ತು ಇದರಿಂದ ಪ್ರೇರಿತರಾಗಿ ಮತ್ತೆ 10 ಗುಂಟೆ ಜಾಗದಲ್ಲಿ ಟೊಮ್ಯಾಟೋ, ಬದನೆ, ಚೌಳಿಕಾಯಿ, ಮೇನಸಿಕಾಯಿ, ಕ್ಯಾಬಿಜ್ ಹೀಗೆ ಅನೇಕ ಪ್ರಕಾರದ ತರಕಾರಿ ಗಳನ್ನು ಚೆನ್ನಾಗಿ ಬೆಳೆದರು. ತರಕಾರಿಗಳ ಮೇಲೆ ಸಿಂಪಡಿಸುವ ಔಷಧವನ್ನು ಅವರು ತಮ್ಮ ಮನೆಯಲ್ಲಿಯೇ ತಯಾರಿಸುತ್ತಾರೆ.
ಎರೆಹುಳು ಗೊಬ್ಬರ, ಮೀನು ಮತ್ತು ಬೆಲ್ಲದಿಂದ ಸಾರಜನಕ ಹಾಗೂ ನಿಂಬೆ ಮಿಶ್ರಿತ ರಸಾಯನ ಹೀಗೆ ವಿವಿಧ ಪ್ರಕಾರದ ಸಾವಯವ ಗೊಬ್ಬರ ತಾವೇ ತಯಾರಿಸಿಕೊಳ್ಳುತ್ತಾರೆ. ಜೊತೆಗೆ ಹನಿ ನೀರಾವರಿಯೂ ಸಹಿತ ಉತ್ಪಾದನೆ ಹೆಚ್ಚಾಗಲು ಸಹಾಯ ಮಾಡಿದೆ. ದಿನಂಪ್ರತಿ 3 ರಿಂದ 4 ಗಂಟೆಗಳ ವರೆಗೆ ಸಮಯ ಕೃಷಿಗಾಗಿ ನೀಡುತ್ತಾರೆ.
ಅನೇಕ ರೈತರು ಹೇಳುವ ಹಾಗೆ ಸಾವಯವ ಕೃಷಿ ಪದ್ಧತಿ ತುಂಬಾ ದುಬಾರಿಯಾಗಿದೆ ಎಂಬ ಅಳಲನ್ನು ಅವರು ಸುಳ್ಳು ಮಾಡಿದ್ದಾರೆ. ಸದ್ಯ ಅವರ ಸುತ್ತಮುತ್ತಲಿನ ಊರೇಕೆ ಇಡೀ ಮಹಾರಾಷ್ಟ್ರದಲ್ಲಿ ಅವರದೇ ಚರ್ಚೆಯಾಗುತ್ತಿದೆ. ಅವರು ತಯಾರಿಸುವ ಸಾವಯವ ಗೊಬ್ಬರವನ್ನು ಖರೀದಿಸುವ ಸಲುವಾಗಿಯೂ ರೈತರು ಭೇಟಿ ಕೊಡುತ್ತಿದ್ದಾರೆ. ಅವರ ಈ ಪ್ರಯೋಗದಿಂದ ಎಷ್ಟೋ ರೈತರು ಸಾವಯವ ಕೃಷಿಯ ಕಡೆಗೆ ಹೊರಳಿದ್ದಾರೆ.