ಹೊಸ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಏರ್ ಬ್ಯಾಗ್ ಕಡ್ಡಾಯ: ಏರ್ ಬ್ಯಾಗ್ ಗಳಲ್ಲಿ ಎಷ್ಟು ಪ್ರಕಾರಗಳು ಮತ್ತು ಹೇಗೆ ಕೆಲಸ ಮಾಡುತ್ತವೆ ಗೊತ್ತಾ?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ಕಾರುಗಳಲ್ಲಿ ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದ್ದು, ಈ ನಿಯಮವು ಏಪ್ರಿಲ್ 1, 2021 ರಿಂದ ಇಡೀ ದೇಶದಲ್ಲಿ ಅನ್ವಯವಾಗಲಿದೆ ಎಂದು ಸೂಚನೆ ನೀಡಲಾಗಿದೆ. ಆದ್ದರಿಂದಲೇ ಹೊಸ ನಿಯಮದ ಅನುಸಾರ ಏಪ್ರಿಲ್ ಒಂದರ ನಂತರ ಜನಪ್ರಿಯ ಕಾರು ತಯಾರಕರಾದ ಮಾರುತಿ, ಮಹೀಂದ್ರಾ, ಟಾಟಾ, ಹ್ಯುಂಡೈ, ಕಿಯಾ, ರೆನಾಲ್ಟ್, ಹೋಂಡಾ ಮತ್ತು ಎಂಜಿ ಮೋಟಾರ್ಸ್ ಗಳು ತಮ್ಮ ಎಲ್ಲಾ ಕಾರುಗಳಲ್ಲಿ ಚಾಲಕ ಮತ್ತು ಮುಂಭಾಗದ ಆಸನ ಪ್ರಯಾಣಿಕರಿಗೆ ಏರ್ಬ್ಯಾಗ್ಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ. ಸಚಿವಾಲಯದ ವರದಿಯ ಪ್ರಕಾರ ದೇಶದಲ್ಲಿ ಪ್ರತಿ ವರ್ಷವೊಂದಕ್ಕೆ ರಸ್ತೆ ಅಪಘಾತಗಳಲ್ಲಿ 80 ಸಾವಿರ ಜನರು ಸಾ ವನ್ನಪ್ಪುತ್ತಿದ್ದಾರೆ. ಇದು ವಿಶ್ವದ ರಸ್ತೆ ಅಪಘಾತಗಳಲ್ಲಿ 13% ಇದೆ ಎನ್ನಲಾಗಿದೆ.
ಹೀಗೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗಿರಲು ಪ್ರಮುಖ ಕಾರಣವೆಂದರೆ ಕಾರುಗಳಲ್ಲಿ ಸುರಕ್ಷತಾ ವೈಶಿಷ್ಟ್ಯತೆಗಳ ಕೊರತೆ ಎಂದು ಹೇಳಿದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ. ಆದ್ದರಿಂದಲೇ ಬರುವ ಏಪ್ರಿಲ್ 1 ರಿಂದ ಕಾರುಗಳಲ್ಲಿ ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸಲಾಗಿದೆ. ಭಾರತದಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಕಾರುಗಳಲ್ಲಿ ಕೂಡಾ ಆಗಸ್ಟ್ ಒಂದರ ಒಳಗಾಗಿ ಅಗತ್ಯ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗಿದೆ. ಹಾಗಿದ್ದರೆ ಏರ್ ಬ್ಯಾಗ್ ಗಳ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ. ಏರ್ ಬ್ಯಾಗ್ ಗಳೆಂದರೇನು ಎನ್ನುವುದನ್ನು ಮೊದಲಿಗೆ ನಾವು ತಿಳಿದುಕೊಳ್ಳೋಣ.
ಕಾರುಗಳಲ್ಲಿ ನೀಡಲಾಗುವ ಏರ್ ಬ್ಯಾಗ್ ಗಳನ್ನು ನೈಲಾನ್ ಬಟ್ಟೆಯಿಂದ ಮಾಡಲಾಗಿರುತ್ತದೆ. ಇವುಗಳನ್ನು ಕಾರುಗಳಲ್ಲಿ ವಿವಿಧ ಕಡೆಗಳಲ್ಲಿ ಅಗತ್ಯಾನುಸಾರವಾಗಿ ಅಳವಡಿಸಲಾಗಿರುತ್ತದೆ. ಇವು ಅಪಘಾತದ ವೇಳೆಯಲ್ಲಿ ವಾಹನದಲ್ಲಿ ಇರುವವರ ರಕ್ಷಣೆಗೆ ನೆರವಾಗುತ್ತದೆ. ಈ ಏರ್ ಬ್ಯಾಗ್ ಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವ ವಿಚಾರಕ್ಕೆ ಬಂದರೆ ಇವುಗಳನ್ನು ಸೆನ್ಸರ್ ಗಳೊಂದಿಗೆ ಜೋಡಿಸಲಾಗಿರುತ್ತದೆ. ಸೆನ್ಸರ್ ಗೆ ಅ ಪ ಘಾ ತ ಸಂಭವಿಸುವ ಸೂಚನೆ ದೊರಕಿದ ಕೂಡಲೇ ಏರ್ ಬ್ಯಾಗ್ ನಲ್ಲಿ ಗಾಳಿ ತುಂಬಿಕೊಂಡು ಇದು ಡ್ರೈವರ್, ಪ್ಯಾಸೆಂಜರ್ ಹಾಗೂ ಕಾರಿನ ನಡುವೆ ಒಂದು ಕುಷನ್ ನ ರೀತಿಯಲ್ಲಿ ದೊಡ್ಡ ಬಲೂನಿನ ಹಾಗೆ ಹರಡಿಕೊಳ್ಳುತ್ತದೆ. ಇದರಿಂದ ಅ ಪ ಘಾತದ ವೇಳೆಯಲ್ಲಿ ಕಾರಿನ ಡ್ರೈವರ್ ಮತ್ತು ಪ್ಯಾಸೆಂಜರ್ ಶರೀರವು ಕಾರಿಗೆ ಬಡಿಯುವುದಿಲ್ಲ ಹಾಗೂ ಗಂಭೀರವಾದ ಗಾಯಗಳು ಆಗುವುದಿಲ್ಲ.
ಡ್ರೈವರ್ ಏರ್ ಬ್ಯಾಗ್: ಇದನ್ನು ಏ ಸ್ಟೀರಿಂಗ್ ವೀಲ್ ನ ಹಾರ್ನ್ ಪ್ಯಾಡ್ ಗೆ ಅಳವಡಿಸಲಾಗಿರುತ್ತದೆ. ಇದು ಅಪಘಾತದ ಸಂದರ್ಭದಲ್ಲಿ ಚಾಲಕನ ತಲೆ ಸ್ಟೀರಿಂಗ್ ಚಕ್ರಕ್ಕೆ ಹೊಡೆಯುವುದನ್ನು ತಡೆಯುತ್ತದೆ ಹಾಗೂ ಆತನ ರಕ್ಷಣೆಯನ್ನು ಮಾಡುತ್ತದೆ.

ಮುಂದಿನ ಪ್ಯಾಸೆಂಜರ್ ಏರ್ ಬ್ಯಾಗ್: ಇದನ್ನು ಡ್ಯಾಶ್ ಬೋರ್ಡ್ ನ ಹಿಂದೆ ಅಳವಡಿಸಲಾಗಿದ್ದು, ಕಾರಿನಲ್ಲಿ ಮುಂದೆ ಕುಳಿತಿರುವ ಪ್ರಯಾಣಿಕನ ತಲೆಯು ಡ್ಯಾಶ್ ಬೋರ್ಡ್ ಗೆ ತಗುಲದಂತೆ ರಕ್ಷಣೆಯನ್ನು ನೀಡುತ್ತದೆ. ಡ್ರೈವರ್ ಏರ್ ಬ್ಯಾಗ್ ಗೆ ಹೋಲಿಕೆ ಮಾಡಿದರೆ ಇದು ಅದಕ್ಕಿಂತ ದೊಡ್ಡದಾಗಿರುತ್ತದೆ.
ಸೈಡ್ ಟಾರ್ಸೋ ಏರ್ ಬ್ಯಾಗ್: ಈ ಏರ್ಬ್ಯಾಗ್ ಅನ್ನು ಮುಂಭಾಗದ ಆಸನ ಮತ್ತು ಹಿಂಭಾಗದ ಆಸನಗಳ ಹೊರ ಭಾಗದಲ್ಲಿ ಅಳವಡಿಸಲಾಗಿರುತ್ತದೆ. ಈ ಏರ್ಬ್ಯಾಗ್ ಪ್ರಯಾಣಿಕರ ದೇಹವನ್ನು ಕಾರಿನ ಪ್ಯಾನೆಲ್ ಗೆ ಬಡಿಯದಂತೆ ತಡೆದು ರಕ್ಷಣೆಯನ್ನು ನೀಡುವುದು.
ಸೈಡ್ ಕರ್ಟೈನ್ ಏರ್ ಬ್ಯಾಗ್ : ಈ ಏರ್ಬ್ಯಾಗ್ ಪ್ರಯಾಣಿಕರ ತಲೆಯನ್ನು ಕಾರಿನ ಮೇಲ್ಛಾವಣಿಗೆ, ಕಾರಿನ ಬಾಗಿಲಿನ ಫ್ರೇಮ್ ಮತ್ತು ಕಿಟಕಿಗಳಿಗೆ ಬಡಿಯದಂತೆ ರಕ್ಷಿಸುತ್ತದೆ. ಈ ಏರ್ಬ್ಯಾಗ್ ಅನ್ನು ಕಾರಿನ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿರುತ್ತದೆ.