ತನ್ನ ಸ್ವಂತ ತಂದೆ ತಾಯಿ ಮೇಲೆಯೇ ಮೊಕದ್ದಮೆ ಹೂಡಿದ 41 ವರ್ಷದ ಮಗ; ಕಾರಣ ಕೇಳಿ ತಲೆಗೆ ಕೈ ಹಚ್ಚಿ ಕುಳಿತ ಜಡ್ಜ್!

ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮಕ್ಕಳದ್ದೇ ಆಗಿರುತ್ತದೆ. ಇದು ಬಹಳ ಹಿಂದಿನಿಂದಲೂ ಬಂದಿರುವ ಸಂಪ್ರದಾಯವಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿ ಇದು ಒಂದು ಪ್ರಮುಖ ಜವಾಬ್ದಾರಿ ಕೂಡಾ ಆಗಿರುತ್ತದೆ. ಮಕ್ಕಳಾಗಿದ್ದಾಗ ನಮ್ಮನ್ನು ಬಹಳ ಪ್ರೀತಿಯಿಂದ ಸಾಕಿ ಸಲುಹಿದ ತಂದೆ ತಾಯಿಯನ್ನು ಅವರ ಇಳಿ ವಯಸ್ಸಿನಲ್ಲಿ ಬಹಳ ಪ್ರೀತಿಯಿಂದ ಆರೈಕೆ ಮಾಡಬೇಕಾದದ್ದು, ಅವರನ್ನು ಪೋಷಣೆ ಮಾಡಬೇಕಾದದ್ದು ಅವರ ಮಕ್ಕಳ ಧರ್ಮ. ಆದರೆ ಇಲ್ಲೊಂದು ವಿಚಿತ್ರ ಘಟನೆಯಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಕಳೆದ ಕೆಲವು ವರ್ಷಗಳಿಂದಲೂ  ನಿರುದ್ಯೋಗಿಯಾಗಿದ್ದು, ಈಗ ತನ್ನ ಹೆತ್ತವರ ವಿರುದ್ಧ ಕೋರ್ಟ್ ನಲ್ಲಿ ಮೊಕದ್ದಮೆಯನ್ನು ಹೂಡಿ, ತನ್ನ ಜೀವನ ನಿರ್ವಹಣೆಗೆ ತಂದೆ ತಾಯಿಯೇ ಆರ್ಥಿಕ ನೆರವನ್ನು ನೀಡಬೇಕು ಎನ್ನುವ ಬೇಡಿಕೆಯೊಂದನ್ನು ಇಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಈ ವ್ಯಕ್ತಿಯು ಆಕ್ಸ್‌ಫರ್ಡ್ ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದರೂ, ಕಳೆದ ಒಂದು ದಶಕದಿಂದಲೂ ನಿರುದ್ಯೋಗಿಯಾಗಿದ್ದಾನೆ. ಹೀಗೆ ನಿರುದ್ಯೋಗಿಯಾಗಿರುವ ಈತನ ಹೆಸರು ಫೈಜ್ ಸಿದ್ದಿಕಿ ಎನ್ನಲಾಗಿದ್ದು, ತನ್ನ ಜೀವನ ನಿರ್ವಹಣೆಗೆ ತನ್ನ ತಂದೆ ತಾಯಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದಾನೆ. ಫೈಜ್ ಸಿದ್ದಿಕಿ ಉತ್ತಮವಾದ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ, ಆತ ವಕಾಲತ್ತಿನ ತರಬೇತಿಯನ್ನು ಕೂಡ ಪಡೆದಿದ್ದಾರೆ. ಆದರೆ ಇಷ್ಟಾದರೂ ಆತ ಯಾವುದೇ ಉದ್ಯೋಗವನ್ನೂ ಮಾಡದೆ ತಂದೆ ತಾಯಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ಈಗ ಅವರು ತನ್ನ ಜೀವನ ನಿರ್ವಹಣೆಗೆ ಆರ್ಥಿಕ ಬೆಂಬಲ ನೀಡಬೇಕೆಂದು ಕೋರ್ಟ್ ಮೆಟ್ಟಿಲನ್ನೂ ಹೇರಿದ್ದಾನೆ.

ಸಿದ್ದಿಕಿ ತಂದೆ-ತಾಯಿ ಇಬ್ಬರು ದುಬೈನಲ್ಲಿ ನೆಲೆಸಿದ್ದಾರೆ. ಅವರಿಗೆ ಲಂಡನ್ ನಲ್ಲಿ ಒಂದು ಫ್ಲಾಟ್ ಇದ್ದು, ಪೈಜ್ ಸಿದ್ದಿಕಿ ಇದೇ ಪ್ಲಾಟ್ ನಲ್ಲಿ ಕಳೆದ 20 ವರ್ಷಗಳಿಂದಲೂ ನೆಲೆಸಿದ್ದು, ಅದಕ್ಕೆ ಯಾವುದೇ ಬಾಡಿಗೆಯನ್ನು ಪಾವತಿ ಮಾಡುವಂತಿಲ್ಲ. ಲಂಡನ್ನಿನ ಹೈಡ್ ಪಾರ್ಕಿನಲ್ಲಿರುವ ಈ ಪ್ಲಾಟಿನ ಮೌಲ್ಯ ಒಂದು ಮಿಲಿಯನ್ ಪೌಂಡ್ ಗಳಿಗಿಂತ ಅಧಿಕ ಎನ್ನಲಾಗಿದೆ. ಪೈಜ್ ನ ತಾಯಿ ರಕ್ಷಂಧ ಅವರಿಗೆ 69 ವರ್ಷ ವಯಸ್ಸಾಗಿದ್ದರೆ, ಅವರ ತಂದೆ ಜಾವೇದ್ ಅವರಿಗೆ 71 ವರ್ಷ ವಯಸ್ಸಾಗಿದೆ. ಪ್ರಸ್ತುತ ಅವರು ತಮ್ಮ ಮಗನ ಖರ್ಚು ವೆಚ್ಚಗಳಿಗಾಗಿ ಪ್ರತಿವಾರ ನಾನೂರು ಪೌಂಡ್ ಗಳನ್ನು ಅಂದರೆ ನಲ್ವತ್ತು ಸಾವಿರ ರೂಪಾಯಿಗಳು, ತಿಂಗಳಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಮಗನ ಖರ್ಚಿಗಾಗಿ ನೀಡುತ್ತಿದ್ದು , ಇದಲ್ಲದೇ ಮಗನ ಇನ್ನಿತರ ಬಿಲ್ ಗಳನ್ನೂ ಅವರೇ ಪಾವತಿ ಮಾಡುತ್ತಿದ್ದಾರೆ.

ಇದೆಲ್ಲದರ ಹೊರತಾಗಿ ಫೈಜ್ ಹಾಗೂ ಆತನ ತಂದೆ ತಾಯಿಯ ನಡುವೆ ನಡೆದಂತಹ ಜಗಳದಿಂದಾಗಿ ಈಗ ಆತನ ತಂದೆ ತಾಯಿ ಮಗನ ಖರ್ಚುಗಳಿಗೆ ಹಣವನ್ನು ನೀಡಲು ನಿರಾಕರಣೆ ಮಾಡಿದ್ದಾರೆ. ಫೈಜ್ ಈ ವಿಚಾರವಾಗಿ ತಾನು ಬಾಲ್ಯದಿಂದಲೂ ಕೂಡ ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ತನ್ನ ಜೀವನವು ಹಾಳಾಗಿದೆ. ಆದ್ದರಿಂದ ತನ್ನ ತಂದೆ-ತಾಯಿ ತಮಗೆ ಜೀವನ ಪರ್ಯಂತ ಖರ್ಚು ವೆಚ್ಚಗಳ ನಿರ್ವಹಣೆಗೆ ಆರ್ಥಿಕ ಸಹಾಯವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ರಕ್ಷಂದ ಹಾಗೂ ಜಾವೇದ್ ಅವರ ವಕೀಲ ಜಸ್ಟಿನ್ ಅವರು ಸಿದ್ದಿಕಿ ತಂದೆ-ತಾಯಿ ಬಹಳ ವರ್ಷಗಳಿಂದ ಆತನ ಜವಾಬ್ದಾರಿಯನ್ನು ಹೊತ್ತಿದ್ದು, ಇನ್ನು ಅವರಿಂದ ಅದು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

2018ರಲ್ಲಿ ಇದೇ ಫೈಜ್ ಸಿದ್ದಿಕಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ತನಗೆ ಉತ್ತಮ ದರ್ಜೆಯಲ್ಲಿ ಫಲಿತಾಂಶ ಸಿಗಲಿಲ್ಲವೆಂದು, ಆಕ್ಸ್‌ಫರ್ಡ್‌ ನಲ್ಲಿನ ಶಿಕ್ಷಣದ ಗುಣಮಟ್ಟ ಸರಿಯಿಲ್ಲವೆಂದು, ವಿಶ್ವವಿದ್ಯಾಲಯ ತನಗೆ ಪರಿಹಾರ ನೀಡಬೇಕೆಂದು ಕೂಡಾ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಆದರೆ ಅದನ್ನು ಕೋರ್ಟ್ ತಿರಸ್ಕರಿಸಿತ್ತು, ಇದೇ ಕಾರಣದಿಂದ ಅಮೆರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣದ ಅವಕಾಶದಿಂದ ವಂಚಿತರಾಗಿದ್ದರು ಸಿದ್ದಿಕಿ. ಈಗ ತಂದೆ ತಾಯಿಯನ್ನು ತಾನು ನೋಡಿಕೊಳ್ಳಬೇಕಾದ ಕಾಲದಲ್ಲಿ ಅವರೇ ತನ್ನ ಜೀವನ ನಿರ್ವಹಣೆಗೆ ಆರ್ಥಿಕ ನೆರವನ್ನು ನೀಡಬೇಕೆಂಬ ಒಂದು ಬಹಳ ವಿಲಕ್ಷಣವಾದ ಕೋರಿಕೆಯನ್ನು ಮುಂದಿಟ್ಟಿದ್ದಾನೆ.