ಇಲಿಯ ಅದೃಷ್ಟವೋ, ಹಾವಿನ ಅನಾಸಕ್ತಿಯೋ ಗೊತ್ತಿಲ್ಲ; ಇಲಿ ಮುಂದಿದ್ದರೂ ತಿನ್ನದೇ ವಾಪಸ ಹೋದ ಬ್ಲಾಕ್ ಮಾಂಬಾ! Video ಸಖತ್ ವೈರಲ್
ಕೆಲವೊಮ್ಮೆ ಕೆಲವು ಘಟನೆಗಳನ್ನು, ಕೆಲವು ದೃಶ್ಯಗಳನ್ನು ನೋಡಿದಾಗ ಇದು ಸಾಮಾನ್ಯಕ್ಕಿಂತ ಭಿನ್ನ ಎನಿಸುವುದು, ಅವುಗಳನ್ನು ನೋಡುತ್ತಾ ಆನಂದ ಪಡುತ್ತೇವೆ, ಅಂತಹ ವಿಚಿತ್ರ ಸನ್ನಿವೇಶಗಳ ಕುರಿತಾದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತೇವೆ. ಈಗಂತೂ ಸೋಶಿಯಲ್ ಮೀಡಿಯಾಗಳು ಇರುವ ಕಾರಣ ಇಂತಹ ಅಸಹಜ ಅಥವಾ ಸಾಮಾನ್ಯ ಎನಿಸದ ಘಟನೆಗಳ ದೃಶ್ಯಾವಳಿಗಳು ಬಹಳ ಬೇಗ ವೈರಲ್ ಕೂಡಾ ಆಗಿ ಬಿಡುತ್ತವೆ. ಸಾಮಾನ್ಯವಾಗಿ ಹಾವುಗಳು ತಮ್ಮ ಬೇಟೆಯಾಗಿ ಅಥವಾ ತಮ್ಮ ಆಹಾರವಾಗಿ ಇಲಿಗಳನ್ನು ಕೂಡಾ ಹಿಡಿಯುತ್ತವೆ ಎನ್ನುವ ವಿಚಾರವನ್ನು ಕೇಳಿದ್ದೇವೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವವರು ಇಂತಹ ದೃಶ್ಯಗಳ ವೀಡಿಯೋ ಗಳನ್ನು ಕೂಡಾ ನೋಡಿರುತ್ತಾರೆ. ಅಲ್ಲದೆ ಹಾವಿನ ಮುಂದೆ ಇಲಿ ಬಂದಾಗ ಅದರ ಕಥೆ ಮುಗಿಯಿತೆಂದೇ ಹೇಳುತ್ತೇವೆ. ಇಲಿಗಳು ಹಾವಿನ ಕೈಗೆ ಸಿಕ್ಕರೆ ತಪ್ಪಿಸಿಕೊಳ್ಳುವುದು ಸುಲಭದ ಮಾತಂತೂ ಅಲ್ಲ.
ಆದರೆ ಇದಕ್ಕೆ ಭಿನ್ನವಾದ ಬಂದು ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿದ್ದು, ಈ ಮೂಲಕ ಇದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ವೀಡಿಯೋದಲ್ಲಿ ಒಂದು ಎತ್ತರವಾದ ಮರದ ಮೇಲೆ ಒಂದು ವಿಷಕಾರಿ ಸರ್ಪ ಹಾಗೂ ಒಂದು ಪುಟ್ಟ ಇಲಿಯನ್ನು ನಾವು ನೋಡಬಹುದು. ಇದರಲ್ಲಿರುವುದು ಆಫ್ರಿಕಾದ ವಿಷಸರ್ಪಗಳ ಜಾತಿಯಲ್ಲಿ ತನ್ನ ವಿಷಕ್ಕೆ ಹೆಸರಾದ ಬ್ಲಾಕ್ ಮಾಂಬ ಹಾವು. ಈ ವಿಡಿಯೋ ನೋಡಿದ ತಕ್ಷಣ ಹಾವು ಆ ಇಲಿಯನ್ನು ಹಿಡಿದು ನುಂಗಿ ಬಿಡುತ್ತದೆಯೇನೋ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಈ ವಿಡಿಯೋದಲ್ಲಿ ಬ್ಲಾಕ್ ಮಾಂಬದ ಇನ್ನೊಂದು ಗುಣ, ನಮಗೆ ತಿಳಿಯದ ಹೊಸ ವಿಷಯವನ್ನು ವಿವರಿಸುವ ವಿಡಿಯೋ ಇದಾಗಿದೆ.
ಬ್ಲಾಕ್ ಮಾಂಬ ಹಾವುಗಳು ಹಸಿವು ಇಲ್ಲದೇ ಹೋದರೆ, ಅವು ತಮ್ಮ ಬೇಟೆಯನ್ನು ನೋಡಿದರೂ ಕೂಡ ಅವನ್ನು ಹಿಡಿಯುವುದಿಲ್ಲ, ಬದಲಾಗಿ ಅವುಗಳ ಸುತ್ತಲಿನ ಪ್ರದೇಶವನ್ನು ಬಹಳ ಕುತೂಹಲದಿಂದ ನಿಗಾ ಇಡುತ್ತದೆ. ಈ ವಿಡಿಯೋದಲ್ಲಿ ಕೂಡ ಕಣ್ಮುಂದೆ ತನ್ನ ಆಹಾರವಾಗುವ ಇಲಿ ಅಲ್ಲೇ ಇದ್ದರೂ ಕೂಡಾ ಬ್ಲಾಕ್ ಮಾಂಬ ಅದನ್ನು ಹಿಡಿಯುವುದಿಲ್ಲ. ಬದಲಿಗೆ ಇಲಿಯನ್ನು ಹಿಂಬಾಲಿಸುತ್ತಾ ಸಾಗುತ್ತದೆ, ಪುಟ್ಟ ಇಲಿಗೆ ತನ್ನ ಹಿಂದೆ ಇರುವ ಅಪಾಯದ ಅರಿವು ಇಲ್ಲದೆ ಅದು ಸಾಮಾನ್ಯವಾಗಿ ತನ್ನ ಚಟುವಟಿಕೆಯನ್ನು ನಡೆಸುತ್ತದೆ. ಅದು ನೆಗೆಯುತ್ತ ಮರದಲ್ಲಿ ಇನ್ನೂ ಎತ್ತರಕ್ಕೆ ಹೋಗುತ್ತದೆ, ಬ್ಲಾಕ್ ಮಾಂಬಾ ಕೂಡ ತೀವ್ರವಾದ ಕುತೂಹಲದಿಂದ ಇಲಿಯನ್ನು ಹಿಂಬಾಲಿಸುತ್ತದೆ.
ತನ್ನ ಕುತೂಹಲಕ್ಕೊಂದು ತೃಪ್ತಿ ಸಿಕ್ಕಿದ ಮೇಲೆ ಬ್ಲಾಕ್ ಮಾಂಬ ಇಲಿಯ ಮೇಲೆ ಆಕ್ರಮಣವನ್ನು ಮಾಡದೆ ತನ್ನ ಪಾಡಿಗೆ ತಾನು ಮರದಿಂದ ಇಳಿದು ಅಲ್ಲಿಂದ ಹರಿದುಕೊಂಡು ಹೊರಟು ಹೋಗುತ್ತದೆ. ಇಲಿ ಕೂಡಾ ಹಾವು ಹರಿದು ಹೋಗುತ್ತಿರುವುದನ್ನು ಬಹಳ ಆಸಕ್ತಿಯಿಂದ ನೋಡುತ್ತಿರುತ್ತದೆ. ಬ್ಲಾಕ್ ಮಾಂಬಾಗಳು ಸಾಮಾನ್ಯವಾಗಿ ಬೆಚ್ಚಗಿನ ರಕ್ತದ ಸಸ್ತನಿಗಳನ್ನು ಆಹಾರವನ್ನಾಗಿ ಬಳಸುತ್ತವೆ. ಹಾರುವ ಹಕ್ಕಿಗಳನ್ನು ಹಾಗೂ ಬಾವಲಿಗಳನ್ನು ಕೂಡಾ ಹೊಂಚು ಹಾಕಿ ಹಿಡಿಯುವ ಸಾಮರ್ಥ್ಯವನ್ನು ಇವು ಹೊಂದಿರುತ್ತವೆ. ಕೆಲವು ಸಂದರ್ಭಗಳಲ್ಲಿ ಹಲ್ಲಿಗಳು ಹಾಗೂ ನಾಗರಹಾವು ಗಳಿಗೆ ಕೂಡ ಬ್ಲಾಕ್ ಮಾಂಬ ಗಳು ಆಹಾರವನ್ನು ಒದಗಿಸುವ ಕೆಲಸ ಮಾಡುತ್ತವೆ.
ವಿಡಿಯೋ ನೋಡಿ
ಆಹಾರವನ್ನು ನುಂಗಿದ ನಂತರ ಇವುಗಳ ದೇಹದಲ್ಲಿ ಉತ್ಪತ್ತಿಯಾಗುವ ಪ್ರಬಲ್ ಆಸಿಡ್ ಗಳು ಬೇಟೆಯನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ತಾಪಮಾನಕ್ಕನುಗುಣವಾಗಿ ಎಂಟರಿಂದ ಹನ್ನೆರಡು ಗಂಟೆಯೊಳಗೆ ಅವುಗಳ ಜೀರ್ಣಕ್ರಿಯೆ ನಡೆಯುತ್ತದೆ.
ಇನ್ನು ಈ ವೈರಲ್ ವೀಡಿಯೋ ವನ್ನು ಈಗಾಗಲೇ ಆರೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರು ಹಾವುಗಳು ಮನುಷ್ಯರಿಗಿಂತ ಒಳ್ಳೆಯವು ಏಕೆಂದರೆ ಅವು ಹಸಿವಾದಾಗ ಮಾತ್ರ ಬೇಟೆಯಾಡುತ್ತವೆ, ಆದರೆ ಮನುಷ್ಯ ಹಾಗಲ್ಲ ಎಂದಿದ್ದಾರೆ. ಇನ್ನೊಂದಿಬ್ಬರು ಇಲಿಗೆ ಒಬ್ಬ ಹೊಸ ಗೆಳೆಯ ಸಿಕ್ಕಿದ ಎಂದು ವ್ಯಂಗ್ಯವಾಡಿದ್ದಾರೆ.