ಪಾರದರ್ಶಕ ಸಾರ್ವಜನಿಕ ಶೌಚಾಲಯ ನಿರ್ಮಿಸಿದ ಜಪಾನ್, ಆದರೆ ಇದನ್ನ ಬಳಸುವುದು ಹೇಗೆ? ಅಚ್ಚರಿ ಪಡುವಿರಿ!

ಮಾನವನ ನಿತ್ಯ ಕರ್ಮಗಳಲ್ಲಿ ಒಂದು ಬಹಿರ್ದೆಸೆಗೆ ಹೋಗುವುದು ಕೂಡಾ ಸೇರಿದೆ. ಹೊರಗೆ ಎಲ್ಲಾದರೂ ಹೋದಾಗ, ಅಂದರೆ ಅದು ಪ್ರವಾಸವೇ ಇರಬಹುದು ಅಥವಾ ಇನ್ನೇನಾದರೂ ಕೆಲಸದ ಮೇಲೆ ಬೇರೆ ಊರಿಗೆ ಹೋದಾಗ, ಬಹಿರ್ದೆಸೆಗೆ ಹೋಗಬೇಕಾದಾಗ ಜನರಿಗೆ ಲಭ್ಯವಿರುವುದು ಸಾರ್ವಜನಿಕ ಶೌಚಾಲಯ ಗಳು ( ಪಬ್ಲಿಕ್ ಟಾಯ್ಲೆಟ್ ) ಆದರೆ ವಿಪರ್ಯಾಸ ಏನೆಂದರೆ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಸ್ವಚ್ಚವಾಗಿರುವುದಿಲ್ಲ. ಅವುಗಳನ್ನು ನೋಡಿದರೆ ಭಯ ಹುಟ್ಟಿಸುವಂತೆ ಇರುತ್ತದೆ. ಒಳಗೆ ಹೆಜ್ಜೆ ಕೂಡಾ ಇಡಬಾರದು ಎನಿಸುತ್ತದೆ. ಆದರೆ ವಿಧಿಯಿಲ್ಲದೇ ಹೋದರೂ ಅದನ್ನು ಬಳಸಲೇಬೇಕಾದ ಅನಿವಾರ್ಯತೆ ಕೂಡಾ ಕೆಲವೊಮ್ಮೆ ಎದುರಾಗುವುದು ಕೂಡಾ ಸಹಜ. ಅಲ್ಲದೇ ಅನೇಕ ಸಂದರ್ಭಗಳಲ್ಲಿ ನಾವು ಒಳಗೆ ಹೋಗುವವರೆಗೂ ಕೂಡಾ ಶೌಚಾಲಯವು ಹೇಗಿದೆ ಎನ್ನುವುದನ್ನು ನೋಡಲು ಸಾಧ್ಯವಿಲ್ಲ‌. ಹಾಗೇನಾದ್ರೂ ಸಾಧ್ಯವಿದ್ದಿದ್ದರೆ ಹೊರಗಿನಿಂದಲೇ ನೋಡಿ ವಾಪಸಾಗುತ್ತಿದ್ದರು ಜನರು.

ನಮ್ಮ ದೇಶದಲ್ಲಿ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯ ಗಳ ನಿರ್ವಹಣೆಗೆ ಸೂಕ್ತ ಸಿಬ್ಬಂದಿಯೇ ಇಲ್ಲ. ಅಲ್ಲದೇ ಅದನ್ನು ಬಳಸುವ ಜನರು ಕೂಡಾ ಅದನ್ನು ಸ್ವಚ್ಛವಾಗಿಡುವುದು ತಮ್ಮ ಜವಾಬ್ದಾರಿ ಎಂದು ಆಲೋಚನೆ ಮಾಡುವುದಿಲ್ಲ. ಹೇಗೋ ತಮ್ಮ ಉಪಯೋಗಕ್ಕೆ ಬಂದರೆ ಸಾಕೆಂದು, ಬಳಸಿದ ನಂತರ ಅದನ್ನು ಹೇಗೆಂದರೆ ಹಾಗೆ ಬಿಟ್ಟು ಹೋಗುತ್ತಾರೆ. ಸಾರ್ವಜನಿಕ ಶೌಚಾಲಯ ಎಂದ ಕೂಡಲೇ ಮೂಗಿಗೆ ಬಡಿಯುವ ದುರ್ನಾತ, ನೆಲದ ಮೇಲೆಲ್ಲ ನೀರು ಹರಿದು ಆಗಿರುವ ತೇವ ಇದೇ ನೆನಪಿಗೆ ಬಂದು ಅನೇಕರು ಸಾರ್ವಜನಿಕ ಶೌಚಾಲಯಗಳನ್ನು ಬಳಸಲು ಹಿಂದೇಟು ಕೂಡಾ ಹಾಕುವುದನ್ನು ಕೂಡಾ ನಾವು ಈಗಾಗಲೇ ಗಮನಿಸಿದ್ದೇವೆ.

ಜಪಾನ್ ದೇಶದಲ್ಲಿ ಇಂತಹ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಅಂದರೆ ಇಲ್ಲಿ ಶೌಚಾಲಯವನ್ನು ಪ್ರವೇಶ ಮಾಡುವ ಮೊದಲೇ ಹೊರಗಿನಿಂದ ನೋಡಿ, ಒಳಗೆ ಶೌಚಾಲಯ ವು ಶುದ್ಧವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಅರೆರೆ ಇದು ಹೇಗೆ ಸಾಧ್ಯ ಎನ್ನುವಿರಾ?? ಖಂಡಿತ ಸಾಧ್ಯವಾಗಿದೆ. ಜಪಾನ್ ನಿರ್ಮಾಣ ಮಾಡಿರುವ ಈ ಹೊಸ ಪಬ್ಲಿಕ್ ಟಾಯ್ಲೆಟ್ ಪಾರದರ್ಶಕ ಗೋಡೆಗಳನ್ನು ಹೊಂದಿರುತ್ತದೆ. ಆದ್ದರಿಂದ ಹೊರಗಿನಿಂದಲೇ ಟಾಯ್ಲೆಟ್ ಒಳಗೆ ಸ್ವಚ್ಛವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಸಾಧ್ಯವಿದೆ.

ಈಗ ಸಹಜವಾಗಿಯೇ ಇನ್ನೊಂದು ಪ್ರಶ್ನೆ ಎಂದರೆ ಇಂತಹ ಟ್ರಾನ್ಸ್ಪರೆಂಟ್ ಅಥವಾ ಪಾರದರ್ಶಕ ಗೋಡೆಗಳನ್ನು ಉಳ್ಳ ಶೌಚಾಲಯ ಬಳಸುವುದಾದರೂ ಹೇಗೆ? ಸುತ್ತಲೂ ಪಾರದರ್ಶಕ ಗೋಡೆಗಳೇ ಇರುವ ಶೌಚಾಲಯವನ್ನು ಬಳಸುವವರು ಕೂಡಾ ಹೊರಗಿನವರಿಗೆ ಕಾಣುವುದಿಲ್ಲವೇ? ಎನ್ನುವ ಪ್ರಶ್ನೆ. ಆದರೆ ಅಲ್ಲಿ ಇದಕ್ಕೂ ಕೂಡಾ ಉತ್ತರವಿದೆ. ಹೊರಗಿನಿಂದ ನೀವು ಟಾಯ್ಲೆಟ್ ಸ್ವಚ್ಚವಾಗಿದೆ ಎಂದು ಖಾತರಿ ಪಡಿಸಿಕೊಂಡ ಮೇಲೆ, ನೀವು ಬಾಗಿಲನ್ನು ತೆರೆದು ಒಳಗೆ ಹೋದ ಮೇಲೆ, ಅಲ್ಲಿ ಅಳವಡಿಸಲಾಗಿರುವ ಒಂದು ಬಟನ್ ಒತ್ತಿದ ಕೂಡಲೇ ಇಡೀ ಪಾರದರ್ಶಕ ಟಾಯ್ಲೆಟ್ ಅಪಾರದರ್ಶಕವಾಗಿ ಬಿಡುತ್ತದೆ.

ಹೀಗೆ ಪಾರದರ್ಶಕ ಗೋಡೆಗಳು ಆ ಟಾಯ್ಲೆಟ್ ನಲ್ಲಿ ಅಳವಡಿಸಲಾದ ತಂತ್ರಜ್ಞಾನದ ಸಹಾಯದಿಂದ ಅಪಾರದರ್ಶಕ ಆಗುವುದರಿಂದ ಒಳಗೆ ಇರುವವರು ಹೊರಗೆ ಕಾಣಿಸುವುದಿಲ್ಲ. ಇದೊಂದು ನಿಜಕ್ಕೂ ಅದ್ಭುತವಾದ ಶೌಚಾಲಯವೇ ಆಗಿದ್ದು, ಒಳಗೆ ಹೋಗುವ ಮುನ್ನವೇ ಹೊರಗಿನಿಂದ ನಾವು ಅದರೊಳಗೆ ನೋಡಿ, ಟಾಯ್ಲೆಟ್ ಸ್ವಚ್ಚ ಆಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಂಡ ನಂತರವೇ ಅದನ್ನು ಬಳಸುವ ವಿಧಾನ ಸ್ವಚ್ಚತಾ ದೃಷ್ಟಿಯಿಂದ ನೋಡಿದಾಗ ಬಹಳಷ್ಟು ಅನುಕೂಲಕಾರಿಯಾಗಿದೆ ಎನ್ನಬಹುದಾಗಿದೆ. ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲೂ ಇಂತಹ ಸೌಲಭ್ಯ ನೀಡಬಹುದಾದರೂ ಅದನ್ನು ನಿರ್ವಹಣೆ ಮಾಡುವುದು ಸ್ವಲ್ಪ ಕಾಲ ಕಠಿಣ ಎನಿಸಬಹುದು.