ಅಕ್ಕಿಯನ್ನು ಬೇಯಿಸದೇ ಅನ್ನ ಮಾಡಬಹುದು: ಮ್ಯಾಜಿಕ್ ರೈಸ್ ಬೆಳೆದು ಎಲ್ಲರನ್ನು ಆಶ್ಚರ್ಯಪಡಿಸಿದ ತೆಲಂಗಾಣದ ಈ ರೈತ!
ಕಳೆದ ಕೆಲವು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಕೃಷಿ ಅನೇಕರ ಗುರಿಯಾಗಿದೆ. ಬಹಳಷ್ಟು ಜನ ತಮ್ಮ ದೊಡ್ಡ ಸಂಬಳದ ಉದ್ಯೋಗಗಳನ್ನು ತೊರೆದು ಕೃಷಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಇಂದು ನಾವು ಹೇಳಲು ಹೊರಟಿರುವ ಒಬ್ಬ ರೈತ ತಮ್ಮ ಶ್ರಮ ಹಾಗೂ ಬುದ್ಧಿವಂತಿಕೆಯನ್ನು ಬಳಸಿಕೊಂಡು ಒಂದು ಹೊಸ ರೀತಿಯ ಅಕ್ಕಿಯನ್ನು ಬೆಳೆದಿದ್ದಾರೆ. ಇದನ್ನು ಮ್ಯಾಜಿಕ್ ರೈಸ್ ಎಂತಲೇ ಕರೆಯಲಾಗುತ್ತಿದ್ದು, ಇದರ ಬಗ್ಗೆ ತಿಳಿದರೆ ನಿಮಗೂ ಕೂಡಾ ಬಹಳ ಆಶ್ಚರ್ಯವಾಗುತ್ತದೆ. ರೈತ ಶ್ರೀರಾಮ್ ಗೊರಂಪಲ್ಲಿ ಅವರು ಕರೀಂನಗರದ ಶ್ರೀರಾಮಮಲ್ಲಾಪಲ್ಲಿ ಗ್ರಾಮದ ನಿವಾಸಿಯಾಗಿದ್ದಾರೆ. ಇವರು ತಮ್ಮ ಕೃಷಿ ಭೂಮಿಯಲ್ಲಿ ಒಂದು ವಿಭಿನ್ನವಾದ ತಳಿಯ ಭತ್ತವನ್ನು ಕೃಷಿ ಮಾಡುತ್ತಿದ್ದು, ಈ ಭತ್ತದಿಂದ ಮಾಡಿದ ಅಕ್ಕಿಯು ಈಗ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಏನೀ ಅಕ್ಕಿಯ ವಿಶೇಷ ಎನ್ನುವಿರಾ? ಅಲ್ಲೇ ಇದೆ ಅದರ ಗಮ್ಮತ್ತು. ಈ ವಿಚಾರ ಕೇಳಿದರೆ ಒಂದು ಕ್ಷಣ ನೀವು ನಂಬುವುದು ಕೂಡಾ ಕಠಿಣ ಎನಿಸುವುದು.
ಶ್ರೀಕಾಂತ್ ಅವರು ಬೆಳೆದಿರುವ ಈ ಹೊಸ ಅಕ್ಕಿಯ ವಿಶೇಷತೆ ಏನೆಂದರೆ ಈ ಅಕ್ಕಿಯನ್ನು ತಿನ್ನಲು ಮಾಮೂಲಿನಂತೆ ಬೇಯಿಸಿ ಅನ್ನ ಮಾಡುವ ಅಗತ್ಯವಿಲ್ಲ ಬದಲಾಗಿ ಈ ಅಕ್ಕಿಯನ್ನು ನೀರಿಗೆ ಹಾಕಿ ಒಂದರ್ಧ ಗಂಟೆ ಕಾಲ ನೆನೆಸಿದರೆ ಅದು ತಿನ್ನಲು ಯೋಗ್ಯವಾದ ಅನ್ನದಂತೆ ಆಗುತ್ತದೆ. ಒಂದು ವೇಳೆ ನಿಮಗೆ ಬಿಸಿ ಅನ್ನ ತಿನ್ನುವ ಆಸೆಯಿದ್ದರೆ ಆಗ ಅದನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟರೆ ಆಯಿತು. ಸಾಮಾನ್ಯವಾಗಿ ಈ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡುವ ಮೂಲಕ ಇದನ್ನು ನೀವು ತಿನ್ನಲು ಸಾಧ್ಯವಾಗುತ್ತದೆ. ಈ ಅಕ್ಕಿಯನ್ನು ರೆಡಿ ಟು ಈಟ್ ಎಂದು ಕೂಡಾ ಕರೆಯಲಾಗುತ್ತದೆ. ಇದನ್ನು ಮಾಡಲು ಯಾವುದೇ ರೀತಿಯ ಪರಿಶ್ರಮದ ಅಗತ್ಯ ಕೂಡಾ ಇಲ್ಲ ಎನ್ನಲಾಗಿದೆ.

ಶ್ರೀಕಾಂತ್ ಅವರು ಹೇಳುವ ಪ್ರಕಾರ ಒಂದು ವರ್ಷದ ಹಿಂದೆ ಅವರು ಅಸ್ಸಾಂ ಗೆ ಹೋಗಿದ್ದರಂತೆ. ಆಗ ಅವರಿಗೆ ಈ ವಿಶೇಷ ಭತ್ತದ ಬಗ್ಗೆ ಮಾಹಿತಿ ದೊರೆಯಿತು ಹಾಗೂ ಈ ಅಕ್ಕಿಯನ್ನು ಬೇಯಿಸದೇ ಹಾಗೆಯೇ ತಿನ್ನಬಹುದು ಎಂದು ತಿಳಿದು ಬಂದಿತು. ಅನಂತರ ಶ್ರೀಕಾಂತ್ ಅವರು ಗುವಹಾಟಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಈ ವಿಶೇಷ ಜಾತಿಯ ಭತ್ತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡರು ಎನ್ನಲಾಗಿದೆ. ಅಸ್ಸಾಂ ನ ಪರ್ವತ ಪ್ರದೇಶಗಳಲ್ಲಿ ಕೆಲವು ಬುಡಕಟ್ಟು ಜನಾಂಗದವರು ಇಂತಹ ವಿಶೇಷ ಜಾತಿಯ ಭತ್ತವನ್ನು ಬೆಳೆಯುತ್ತಾರೆ ಎನ್ನುವ ವಿಷಯವನ್ನು ಕೂಡಾ ತಿಳಿಸಿದ್ದಾರೆ.
ಈ ಬೆಳೆಯನ್ನು 145 ದಿನಗಳಲ್ಲಿ ಬೆಳೆಯುತ್ತದೆ ಎನ್ನಲಾಗಿದೆ. ಇದನ್ನು ಬೇಯಿಸುವ ಅಗತ್ಯವಿಲ್ಲ ಎನ್ನಲಾಗಿದ್ದು, ಪರ್ವತ ಪ್ರದೇಶಗಳಲ್ಲಿ ಈ ಭತ್ತವನ್ನು ಬೋಕಾಸೌಲ್ ಎಂದು ಕರೆಯಲಾಗುತ್ತದೆ. ಈ ಭತ್ತವನ್ನು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲಾಗಿದೆ. ಈ ಅಕ್ಕಿಯು 10.73% ಫೈಬರ್ ಹಾಗೂ 6.8% ನಷ್ಟು ಪ್ರೋಟೀನ್ ಅಂಶವನ್ನು ಒಳಗೊಂಡಿದೆ.
ಅಸ್ಸಾಂ ನ ಬೆಟ್ಟದ ಜನರು ಈ ಅನ್ನವನ್ನು ಬೆಲ್ಲ, ಬಾಳೆಹಣ್ಣು ಮತ್ತು ಮೊಸರಿನೊಂದಿಗೆ ತಿನ್ನಲು ಇಷ್ಟಪಡುತ್ತಾರೆ ಎನ್ನಲಾಗಿದೆ. ಶ್ರೀಕಾಂತ್ ಅವರು ಅಸ್ಸಾಂಗೆ ಹೋದಾಗಲೇ ಈ ಭತ್ತವನ್ನು ತಂದರು. 12 ನೇ ಶತಮಾನದಲ್ಲಿ ಅಸ್ಸಾಂನ ಅಹಮ್ ರಾಜವಂಶದ ರಾಜನಿಗೆ ಈ ಅಕ್ಕಿಯಿಂದ ತಯಾರಿಸಲಾದ ಅನ್ನ ಬಹಳ ಇಷ್ಟ ಎಂದು ಇಲ್ಲಿ ಹೇಳುವುದು ಉಂಟು.

ಆದರೆ ಬೇರೆ ಭತ್ತಗಳ ಬೇಡಿಕೆ ಹೆಚ್ಚಿದ್ದರಿಂದ ಈ ಭತ್ತ ಅವನತಿಯತ್ತ ಸಾಗಿತ್ತು. ಆಗಲೇ ಇದನ್ನು ಸಂರಕ್ಷಿಸುವ ನಿರ್ಧಾರವನ್ನು ಮಾಡಲಾಯಿತು. ಶ್ರೀಕಾಂತ್ ಅವರು ಮೂವತ್ತ ವರ್ಷಗಳಿಂದ ಕೃಷಿಯನ್ನು ಮಾಡುತ್ತಿದ್ದು, ಈ ಮ್ಯಾಜಿಕ್ ರೈಸ್ ನೊಂದಿಗೆ ಅವರು 120 ಬಗೆಯ ವಿಭಿನ್ನವಾದ ಅಕ್ಕಿಗಳ ಸಂಗ್ರಹವನ್ನು ಅವರು ಹೊಂದಿದ್ದಾರೆ. ಈ ಅಕ್ಕಿಗಳಲ್ಲಿ ನವರ, ಮಾಪ್ಪಿಲೈ, ಸಾಂಬಾ, ಕುಸ್ಕಾ ಎನ್ನುವುದು ಕೂಡಾ ಕೆಲವು ಅಕ್ಕಿಯ ಪ್ರಬೇಧಗಳಾಗಿವೆ. ಇವರು 60 ರೀತಿಯ ಸಾವಯವ ತರಕಾರಿಗಳನ್ನು ಕೂಡಾ ಬೆಳೆಯುತ್ತಾರೆ. ಅಸ್ಸಾಂ ನಿಂದ ಭತ್ತದ ಬೀಜಗಳನ್ನು ತಂದ ಅವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಬಿತ್ತಿದರು. ಇದರಿಂದ ಅವರು ಐದು ಚೀಲ ಅಕ್ಕಿಯನ್ನು ಬೆಳೆದಿದ್ದರು.