ಮರಿಯ ರಕ್ಷಣೆಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ತಾಯಿ ಆನೆ: ಮಾತೃ ಪ್ರೇಮದ ‘ಈ’ ಕಥೆ ಕೇಳಿ ಭಾವುಕರಾದರು ನೆಟ್ಟಿಗರು!

ಮಕ್ಕಳಿಗೆ ತಾಯಿ ಬಿಸಿಲಿನಲ್ಲಿ ನೆರಳಿನಂತೆ, ಹಸಿವಾದಾಗ ಹಸಿವನ್ನು ತಣಿಸುವ ಮಾತೆಯಂತೆ ತನ್ನ ಮಕ್ಕಳ ಪಾಲನೆ ಪೋಷಣೆಗೆ ಹೆಚ್ಚಿನ ಒತ್ತನ್ನು ನೀಡುತ್ತಾಳೆ. ಇದು ಮನುಷ್ಯರ ವಿಷಯದಲ್ಲೇ ಆಗಲೀ ಅಥವಾ ಪ್ರಾಣಿಗಳ ವಿಷಯದಲ್ಲೇ ಆಗಲೀ ತಾಯಿ ತಾಯಾಗಿರುವಳೇ ಹೊರತು ಅದಕ್ಕೆ ಸರಿಸಾಟಿ ಯಾರಿಲ್ಲ ಹಾಗೂ ಅವಳ ಮಮತೆಗೆ ಮನುಷ್ಯ ಅಥವಾ ಪ್ರಾಣಿ ಎನ್ನುವ ಬೇಧವು ಖಂಡಿತ ಇಲ್ಲ. ತನ್ನ ಮಗುವಿಗೆ ಸಂಕಷ್ಟ ಎದುರಾಗಿದೆಯೆಂದರೆ ಅದನ್ನು ಪರಿಹರಿಸಲು ತಾಯಿ ಇಡೀ ಜಗತ್ತಿನ ವಿ ರು ದ್ಧ ಬೇಕಾದರೂ ಹೋರಾಟಕ್ಕೆ ಸಿದ್ಧವಾಗಿ ಬಿಡುತ್ತಾಳೆ ಅಂತಹ ಮಮತೆ ಹಾಗೂ ಅಂತಃಕರಣಕ್ಕೆ ಪ್ರತೀಕವಾಗಿರುತ್ತಾಳೆ ತಾಯಿ. ಆಕೆಯ ಈ ನಿಸ್ವಾರ್ಥ ಹಾಗೂ ನಿರಪೇಕ್ಷ ಮಮತೆಗೆ ಬೆಲೆ ಕಟ್ಟುವುದು ಯಾರಿಂದಲೂ ಕೂಡಾ ಸಾಧ್ಯವಿಲ್ಲ ಎನ್ನುವುದು ಕೂಡಾ ಜಗವರಿತ ಸತ್ಯ.

ಈಗ ಅಂತಹುದೇ ಒಂದು ತಾಯಿಯ ಕಥೆ ಜನರನ್ನು ಭಾವುಕರನ್ನಾಗಿ ಮಾಡಿದೆ. ಈ ಕಥೆ ಕೇಳಿದ ಜನರು ತಾಯಿಯ ಮಮತೆ ಹಾಗೂ ಆಕೆಯ ತ್ಯಾಗವನ್ನು ಕಂಡು ಕಂಬನಿಗರೆದಿದ್ದಾರೆ. ವಾಸ್ತವವಾಗಿ ಇದೊಂದು ಹೆಣ್ಣು ಆನೆಯ ಕಥೆಯಾಗಿದ್ದು, ಈ ವಿಷಯವನ್ನು ಸಂರಕ್ಷಣಾ ಜೀವಶಾಸ್ತ್ರಜ್ಞರಾಗಿರುವ ನೇಹಾ ಸಿನ್ಹಾ ಅವರು ಟ್ವೀಟ್ ಒಂದನ್ನು ಮಾಡುವ ಮೂಲಕ ಎಲ್ಲರೊಡನೆ ಹಂಚಿಕೊಂಡಿದ್ದಾರೆ. ಗಂಗಾ ಎಂಬ ಆನೆಯು ತನ್ನ ಮರಿಯ ಪ್ರಾಣವನ್ನು ಉಳಿಸುವುದಕ್ಕಾಗಿ ಹೇಗೆ ತನ್ನ ಪ್ರಾಣವನ್ನು ಲೆಕ್ಕಿಸದೇ ಪ್ರಯತ್ನವನ್ನು ಪಟ್ಟಿತು ಎನ್ನುವುದನ್ನು ನೇಹಾ ಸಿನ್ಹಾ ಅವರು ತಿಳಿಸಿದ್ದಾರೆ.

ನೇಹಾ ಅವರು ಒಂದು ಬ್ಲಾಕ್ ಅಂಡ್ ವೈಟ್ ಫೋಟೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಇರುವುದು ಗಂಗಾ ಎನ್ನುವ ಹೆಸರಿನ ಹೆಣ್ಣಾನೆ. ಇದನ್ನು ಉತ್ತರ ಬಂಗಾಳದ ಫೋಟೋಗ್ರಾಫರ್ ಆದ ಅಜ್ವೀನ್ ಸಾಹಾ ಎನ್ನುವವರು ತಮ್ಮ ಕ್ಯಾಮೆರಾದಲ್ಲಿ ಬಂಧಿಸಿದ್ದಾರೆ. ಹೊಲಗಳಿಂದ ಓಡಿ ಬರುತ್ತಿದ್ದ ಆನೆಗಳ ದಂಡಿನದಲ್ಲಿ ಈ ಗಂಗಾ ಮತ್ತು ಅದರ ಮರಿಯು ಇತ್ತು. ಅವುಗಳ ಎದುರಿಗೆ ಒಂದು ರೈಲ್ವೆ ಟ್ರಾಕ್ ಇತ್ತು. ಅವು ಅದನ್ನು ದಾಟಿ ಮುಂದೆ ಹೋಗಬೇಕಾಗಿತ್ತು. ಎಲ್ಲಾ ಆನೆಗಳು ಕೂಡಾ ಟ್ರಾಕ್ ದಾಟಿ ಮುಂದೆ ಹೋದವು. ಆದರೆ ಗಂಗಾ ಆನೆಯ ಮರಿಗೆ ಟ್ರಾಕ್ ದಾಟುವುದು ಆಗದೇ ಅದು ಕಷ್ಟ ಪಡುವಂತಾಯಿತು.

ಅದೇ ಸಮಯದಲ್ಲಿ ಇನ್ನೊಂದು ದಿಕ್ಕಿನಿಂದ ರೈಲು ಬರುತ್ತಿರುವುದನ್ನು ಗಮನಿಸಿದ ಗಂಗಾ ಆನೆಯು ತನ್ನ ಮರಿಯನ್ನು ಹೇಗಾದರೂ ಮಾಡಿ ಕಾಪಾಡಲೇಬೇಕೆಂದು, ತನ್ನ ಮರಿಯನ್ನು ರಕ್ಷಿಸುವಾಗ ತನ್ನ ಪ್ರಾಣವನ್ನು ಕಳೆದುಕೊಂಡಿತು. ನಾವು ಸಾಮಾನ್ಯವಾಗಿ ನಮ್ಮ ಕುಟುಂಬ ಕ್ಕಾಗಿ ಎಂತಹ ತ್ಯಾಗ ಬೇಕಾದರೂ ಮಾಡುತ್ತೇವೆ ಎಂದು ಹೇಳುತ್ತೇವೆ. ಆನೆಗಳು ವಾಸ್ತವವಾಗಿ ಅದನ್ನು ಮಾಡುತ್ತವೆ ಎಂದು ನೇಹಾ ತಮ್ಮ ಟ್ವೀಟ್ ನಲ್ಲಿ ಬರೆದು ಕೊಂಡು ಗಂಗಾ ಆನೆಯು ತನ್ನ ಮರಿಗಾಗಿ ಮಾಡಿದ ತ್ಯಾಗದ ಕಥೆಯನ್ನು ಹಂಚಿಕೊಂಡಿದ್ದಾರೆ. ನೇಹಾ ಅವರು ಮಾಡಿದ ಈ ಟ್ವೀಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.