ಕರಿ ಮೆಣಸಿನ ಕೃಷಿ ಮಾಡುವದು ಹೇಗೆ? ಕಡಿಮೆ ಬಂಡವಾಳದಲ್ಲೇ ಲಕ್ಷಗಳ ಆದಾಯ ಪಡೆಯಬಹುದು!
ನಾವು ಭಾರತೀಯರು ಸಹಜವಾಗಿಯೇ ರುಚಿಯಾದ ಹಾಗೂ ಮಸಾಲೆ ಭರಿತ ಆಹಾರಗಳನ್ನು ಸೇವನೆ ಮಾಡಲು ಇಷ್ಟಪಡುತ್ತೇವೆ. ನಮ್ಮ ಆಹಾರ ಪದ್ಧತಿಯಲ್ಲಿ ವಿವಿಧ ಬಗೆಯ ಆಹಾರಗಳಿಗೆ ವೈವಿಧ್ಯಮಯವಾದಂತಹ ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತದೆ. ಭಾರತೀಯ ಆಹಾರಗಳು ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದ ನಾನಾ ಭಾಗಗಳಲ್ಲಿ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ಪ್ರಮುಖವಾದ ಕಾರಣ ನಾವು ಆಹಾರದಲ್ಲಿ ಬಳಸುವಂತಹ ಮಸಾಲೆ ಪದಾರ್ಥಗಳು ಹಾಗೂ ಆ ಮಸಾಲೆಗಳಿಂದಾಗಿ ನಮ್ಮ ಆಹಾರದಲ್ಲಿ ಮೂಡುವ ವಿಶೇಷವಾದ ರುಚಿಯಾಗಿದೆ. ನಮ್ಮಲ್ಲಿ ಆಹಾರವನ್ನು ಮತ್ತಷ್ಟು ರುಚಿಕರವಾಗಿ ಮಾಡುವುದಕ್ಕಾಗಿ ವಿವಿಧ ರೀತಿಯ ಮಸಾಲೆಗಳನ್ನು ಜನರು ಉಪಯೋಗಿಸುವುದು ಕೂಡ ವಾಸ್ತವ. ಈ ಮಸಾಲೆಗಳ ಬಳಕೆ ಕೂಡಾ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಇದ್ದು, ಆಹಾರದ ರುಚಿ ಕೂಡಾ ಭಿನ್ನ ವಿಭಿನ್ನವಾಗಿರುತ್ತದೆ.
ನಮ್ಮ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ವೈವಿಧ್ಯಮಯ ಮಸಾಲೆ ಪದಾರ್ಥಗಳಲ್ಲಿ ಮೆಣಸು ಅತ್ಯಂತ ಪ್ರಮುಖವಾಗಿದೆ. ಕರಿ ಮೆಣಸನ್ನು ‘ಮಸಾಲೆಗಳ ರಾಜ’ ಎಂದು ಕರೆಯುತ್ತಾರೆ. ಇದನ್ನು ಕೆಲವು ವಿಶೇಷ ಆಹಾರ ಪದಾರ್ಥಗಳಿಗೆ ಸೇರಿಸುವುದರಿಂದ ಅವುಗಳ ರುಚಿ ದುಪ್ಪಟ್ಟಾಗುತ್ತದೆ. ರುಚಿಗೆ ಮಾತ್ರವೇ ಅಲ್ಲದೇ ಕರಿಮೆಣಸಿನ ಲ್ಲಿ ಇರುವಂತಹ ಔಷಧೀಯ ಗುಣಗಳಿಂದಾಗಿ ಇದರ ಸೇವನೆಯು ನಮ್ಮ ಆರೋಗ್ಯಕ್ಕೆ ಕೂಡಾ ಉತ್ತಮ ಎನ್ನಲಾಗಿದ್ದು, ಮಸಾಲೆ ಪದಾರ್ಥಗಳಲ್ಲಿ ಇದಕ್ಕೆ ವಿಶೇಷ ಸ್ಥಾನವನ್ನು ಕೂಡಾ ನೀಡಲಾಗಿದೆ. ಮೆಣಸನ್ನು ಆಹಾರದಲ್ಲಿ ಬಳಸುವುದರಿಂದ ಅದು ನಮ್ಮ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ, ಇದರಿಂದ ನಮ್ಮ ಯಕೃತ್ತು ಆರೋಗ್ಯವಾಗಿರುತ್ತದೆ.

ವಾತ ಹಾಗೂ ಕಫ ದಂತಹ ಸಮಸ್ಯೆಗಳು ಉಂಟಾದಾಗ ಕರಿ ಮೆಣಸು ಬಹಳ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಆಸ್ತಮಾ ರೋಗಿಗಳಿಗೆ ಕೂಡಾ ಇದು ಬಹಳ ಉಪಯುಕ್ತವಾದದ್ದು ಎನ್ನಲಾಗಿದೆ. ಮೆಣಸಿನಲ್ಲಿ ನಮ್ಮ ದೇಹದಲ್ಲಿರುವ ಹಲವು ಸೂಕ್ಷ್ಮಾಣು ಜೀವಿಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿಯಿದೆ. ಇಂತಹ ವಿಶೇಷ ಗುಣಗಳನ್ನು ಮೆಣಸು ಹೊಂದಿರುವದರಿಂದಲೇ ಮೆಣಸನ್ನು ಅನೇಕ ರೀತಿಯ ಔಷಧಿಗಳ ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಆದರೆ ಕಳೆದ ಅನೇಕ ವರ್ಷಗಳಿಂದಲೂ ಕೂಡಾ ಕರಿಮೆಣಸನ್ನು ದಕ್ಷಿಣ ಭಾರತದಲ್ಲಿ ಮಾತ್ರವೇ ಬೆಳೆಯಲಾಗುತ್ತದೆ ಎಂದು ಹೇಳಲಾಗುತ್ತಿತ್ತು ಹಾಗೂ ಅಂತಹುದೊಂದು ನಂಬಿಕೆ ಎಲ್ಲರಲ್ಲೂ ಇತ್ತು.
ಆದರೆ ಇದೀಗ ಛತ್ತೀಸ್ಗಡದ ಕೊಂಡಗಾಂವ್ ನ ಚಿಕಿಲ್ ಕುಟ್ಟಿ ಎನ್ನುವಂತಹ ಗ್ರಾಮದಲ್ಲಿ ಮೆಣಸನ್ನು ಬೆಳೆಯಲಾಗುತ್ತಿದೆ. ಇಲ್ಲಿನ ಡಾ. ರಾಜಾರಾಂ ತ್ರಿಪಾಠಿ ಅವರು ತಾವೇ ನಿರ್ಮಾಣ ಮಾಡಿರುವ ಮಾತೆ ದಂತೇಶ್ವರಿ ಹರ್ಬಲ್ ಫಾರ್ಮ್ಸ್ ನಲ್ಲಿ ಸಾವಯವ ಕೃಷಿಯ ಮೂಲಕ ಗಿಡಮೂಲಿಕೆಗಳನ್ನು ಬೆಳೆಸಲಾಗುತ್ತಿದ್ದು, ಅದರಲ್ಲಿ ಮೆಣಸಿನ ಕೃಷಿಯನ್ನು ಅವರು ಮಾಡುತ್ತಿದ್ದಾರೆ. ಡಾ. ರಾಜರಾಂ ತ್ರಿಪಾಠಿ ಅವರು ಮೆಣಸಿನ ಕೃಷಿಯನ್ನು ಮಾಡಲು ಮೊದಲಿನಿಂದಲೂ ಬಯಸಿದ್ದರಂತೆ, ಅಲ್ಲದೆ ಅವರು ದಕ್ಷಿಣ ಭಾರತದಲ್ಲಿ ಮೆಣಸು ಬೆಳೆಯುವುದಾದರೆ ಅದನ್ನು ತಾವಿರುವ ಪ್ರದೇಶದಲ್ಲಿ ಕೂಡ ಏಕೆ ಬೆಳೆಯಲು ಸಾಧ್ಯವಿಲ್ಲ ಎಂದು ಆಲೋಚಿಸಿ, ಕೊನೆಗೆ ಅವರು ತಮ್ಮ ದಂತೇಶ್ವರಿ ಹರ್ಬಲ್ ಫಾರ್ಮ್ ನಲ್ಲೇ ಮೆಣಸನ್ನು ಬೆಳೆಯಲು ತೀರ್ಮಾನಿಸಿದರು.
ಮೆಣಸನ್ನು ಬೆಳೆಯುವ ಬಗ್ಗೆ ಮೊದಲು ಅನೇಕ ವಿಚಾರಗಳನ್ನು ಸಂಗ್ರಹಿಸಿ ಅನಂತರ ಮೆಣಸು ಕೃಷಿಯನ್ನು ಆರಂಭಿಸಿದರು. ಅವರ ಕಠಿಣ ಪರಿಶ್ರಮದ ಫಲವಾಗಿ ಮೆಣಸು ಬೆಳೆಯುವ ಅವರ ಕನಸು ನನಸಾಗಿದ್ದು ಮಾತ್ರವೇ ಅಲ್ಲದೆ ಉತ್ತಮ ಫಸಲು ಕೂಡ ಅವರ ಕೈ ಸೇರಿ ಉತ್ತಮ ಆದಾಯವನ್ನು ಕೂಡ ಗಳಿಸಲು ಸಹಕಾರಿಯಾಯಿತು. ಇವರ ದಂತೇಶ್ವರಿ ಫಾರ್ಮ್ ನಲ್ಲಿ ಆಸ್ಟ್ರೇಲಿಯಾ ಮೂಲದ ಏಳು ನೂರು ತೇಗದ ಮರಗಳನ್ನು ಬೆಳಸಿದ್ದಾರೆ. ಇವುಗಳನ್ನು ಮರದ ವಸ್ತುಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದೇ ಫಾರ್ಮ್ ನಲ್ಲಿ ಮೆಣಸಿನ ಕೃಷಿಯನ್ನು ಕೂಡಾ ರಾಜಾರಾಮ್ ತ್ರಿಪಾಠಿ ಅವರು ಮಾಡುತ್ತಿದ್ದಾರೆ.

ಕರಿ ಮೆಣಸು ಸಸ್ಯದ ಎಲೆಗಳು ಆಯತಾಕಾರದಲ್ಲಿ ಇರುತ್ತವೆ. ಈ ಎಲೆಗಳ ಉದ್ದವು 12 ರಿಂದ 18 ಸೆಂ.ಮೀ ಮತ್ತು ಅಗಲ 5 ರಿಂದ 10 ಸೆಂ.ಮೀ. ಎದ್ದು ಈ ಸಸ್ಯದ ಬೇರು ಸುಮಾರು 2 ಮೀಟರ್ ಭೂಮಿಯ ಒಳಗೆ ಹೋಗುತ್ತದೆ. ಈ ಸಸ್ಯಗಳಲ್ಲಿ ಬಿಳಿಯ ಬಣ್ಣದ ಹೂವುಗಳು ಕಂಡುಬರುತ್ತದೆ. ಮೆಣಸು ಕೃಷಿಯಿಂದ ಕೆಲವು ವಿಶೇಷವಾದ ಪ್ರಯೋಜನಗಳು ಕೂಡ ಇವೆ. ಈ ಸಸ್ಯಗಳಿಗೆ ಪ್ರತ್ಯೇಕವಾಗಿ ಗೊಬ್ಬರವನ್ನು ಹಾಕುವ ಅಗತ್ಯ ಇರುವುದಿಲ್ಲ, ಈ ಸಸ್ಯಗಳ ಉದುರಿದ ಎಲೆಗಳನ್ನೇ ಬಳಸಿಕೊಂಡು ಸಾವಯವ ಗೊಬ್ಬರವನ್ನು ಮಾಡಬಹುದಾಗಿದೆ. ಕರಿಮೆಣಸನ್ನು ಬೆಳೆಯಲು ಪ್ರತ್ಯೇಕವಾದ ಭೂಮಿಯ ಅಗತ್ಯವೂ ಇಲ್ಲ. ಈ ಸಸ್ಯಗಳನ್ನು ಒರಟು ಮೇಲ್ಮೈ ಉಳ್ಳಂತಹ ಮರಗಳಾದ ಮಾವಿನ ಹಣ್ಣು ಹಲಸಿನ ಹಣ್ಣು ಹಾಗೂ ಇನ್ನಿತರೆ ಅರಣ್ಯ ಸಸ್ಯಗಳ ಜೊತೆಯಲ್ಲಿಯೇ ಬೆಳೆಯಬಹುದಾಗಿದೆ.