ಬಿದಿರಿನ ಫರ್ನಿಚರ್ ಉದ್ಯಮದಿಂದ ಕೋಟಿ ಕೋಟಿ ಗಳಿಸುವ ದಂಪತಿ; ಬಿದಿರಿನ ಫರ್ನಿಚರ್ ಯಾರು ಕೊಳ್ಳವರು ಎಂದವರು ಕೂಡಾ ಇವರತ್ತ ನೋಡುವಂತಾಗಿದೆ!
ಮಾಡುವ ಕೆಲಸ ಯಾವುದೇ ಆಗಿದ್ದರೂ ಅದನ್ನು ಶ್ರಮವಹಿಸಿ, ಇಷ್ಟಪಟ್ಟು, ಅಚ್ಚುಕಟ್ಟಾಗಿ ಮಾಡಿದರೆ ಅದರಿಂದ ಯಶಸ್ಸು ಖಂಡಿತವಾಗಿ ದೊರೆಯುತ್ತದೆ. ಯಶಸ್ಸಿನ ಹಾದಿ ಕಠಿಣವಾಗಿರಬಹುದು ಅಥವಾ ತಲುಪುವ ಗುರಿಯು ಬಹಳ ದೂರದಲ್ಲಿಯೇ ಇರಬಹುದು ಆದರೆ ಮಾಡುವ ಕೆಲಸದ ಮೇಲೆ ಮನಸ್ಸಿಟ್ಟು, ಪ್ರಾಮಾಣಿಕತೆಯಿಂದ ಮತ್ತು ಸಂಪೂರ್ಣವಾದ ನಿಷ್ಠೆಯಿಂದ, ವಿಶ್ವಾಸವನ್ನು ಇರಿಸಿಕೊಂಡು ಕೆಲಸವನ್ನು ಮಾಡಿದರೆ ಸಫಲತೆ ಎನ್ನುವುದು ಖಂಡಿತವಾಗಿಯೂ ಒಂದಲ್ಲ ಒಂದು ದಿನ ನಮ್ಮದಾಗುವುದು. ಕಾಯಕವೇ ಕೈಲಾಸ ಎಂದು ನಂಬಿ ಮಾಡುವ ಕೆಲಸದ ಮೇಲೆ ನಂಬಿಕೆಯಿದ್ದರೆ, ಸಂಪೂರ್ಣ ಮನಸ್ಸಿನಿಂದ ಕೆಲಸವನ್ನು ಮಾಡಿದರೆ ಅದು ನಿಮ್ಮ ಜೀವನವನ್ನು ಖಂಡಿತ ರೂಪಿಸುವುದು ಮಾತ್ರವೇ ಅಲ್ಲದೇ ಅನೇಕರಿಗೆ ಮಾದರಿ ಕೂಡಾ ಆಗಬಹುದು.
ನಾವಿಂದು ಮಾಡುವ ಕೆಲಸದ ಮೇಲೆ ನಂಬಿಕೆಯನ್ನಿಟ್ಟು ತಮ್ಮ ಕೆಲಸವನ್ನು ಮುಂದುವರಿಸಿದ ಯಶಸ್ವಿ ದಂಪತಿಯ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಪತಿ-ಪತ್ನಿ ಇಬ್ಬರೂ ಬಿದಿರಿನಿಂದ ಪೀಠೋಪಕರಣಗಳನ್ನು ಮಾಡುವ ಕೆಲಸವನ್ನು ಆರಂಭಿಸಿದರು. ಆರಂಭದಲ್ಲಿ ಇವರ ಕೆಲಸದ ಕುರಿತಾಗಿ ಟೀಕೆಗಳು ಕೇಳಿ ಬಂದವು. ಇಂದಿನ ದಿನಗಳಲ್ಲಿ ಒಂದನ್ನು ಮೀರಿದಂತೆ ಇನ್ನೊಂದು ಎನ್ನುವ ಹಾಗೆ ಅತ್ಯಾಧುನಿಕ ಪೀಠೋಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತಹುದರಲ್ಲಿ ಬಿದಿರಿನ ಪೀಠೋಪಕರಣಗಳನ್ನು ಯಾರು ಬಳಸುತ್ತಾರೆಂದು ಅನೇಕರು ಟೀಕೆ ಮಾಡಿದರು. ಹಾಗಾದರೆ ಈ ಗಂಡ ಹೆಂಡತಿ ಟೀಕೆಗಳ ನಂತರ ಮುಂದೇನು ಮಾಡಿದರು ತಿಳಿಯೋಣ ಬನ್ನಿ.

ಹೈದರಾಬಾದಿನಲ್ಲಿ ನೆಲೆಸಿರುವ ಈ ಪತಿ ಪತ್ನಿಯ ಹೆಸರು ಪ್ರಶಾಂತ್ ಲಿಂಗಂ ಹಾಗೂ ಅರುಣ ಎಂಬುದಾಗಿದೆ. ಇವರು ವಿವಾಹವಾಗಿ 15 ವರ್ಷಗಳು ಕಳೆದಿವೆ. ಒಮ್ಮೆ ಈ ದಂಪತಿ ಪೀಠೋಪಕರಣಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಬಿದಿರಿನಿಂದ ತಯಾರು ಮಾಡಿರುವ ವೈವಿಧ್ಯಮಯ ಪೀಠೋಪಕರಣಗಳನ್ನು ನೋಡಿದ್ದಾರೆ. ಈ ಪೀಠೋಪಕರಣಗಳು ಗಂಡ- ಹೆಂಡತಿ ಇಬ್ಬರಿಗೂ ಕೂಡ ಬಹಳಷ್ಟು ಇಷ್ಟವಾಗಿದೆ. ಅಲ್ಲದೇ ತಾವು ಕೂಡ ಬಿದಿರಿನ ಪೀಠೋಪಕರಣಗಳ ಉತ್ಪಾದನೆಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂದು ಆಲೋಚನೆಯನ್ನು ಅವರು ಮಾಡಿದ್ದಾರೆ. ಆದರೆ ಆಗ ಅವರಲ್ಲಿ ಇದ್ದುದ್ದು ಕೇವಲ ಒಂದು ಆಲೋಚನೆ ಮಾತ್ರವೇ.
ಮನೆಗೆ ಬಂದಮೇಲೆ ಅವರು ತಮ್ಮ ತಂದೆ ತಾಯಿಗೆ ಈ ವಿಚಾರವನ್ನು ತಿಳಿಸಿ ತಾವು ಕೂಡ ಈ ಕೆಲಸದಲ್ಲಿ ಕೈ ಹಾಕುವುದಾಗಿ ಹೇಳಿದರು. ಆದರೆ ಮನೆಯಲ್ಲಿ ಹಿರಿಯರು ಅದೊಂದು ವ್ಯರ್ಥವಾದ ಕಾರ್ಯವೆಂದು ತಿರಸ್ಕರಿಸಿಬಿಟ್ಟರು. ಇದಾದ ನಂತರ ಅರುಣ ಹಾಗೂ ಪ್ರಶಾಂತ್ ಅವರು ಫಾರೆಸ್ಟ್ ಸ್ಟಡಿ ಟೂರ್ ಎಂದು ಮನೆಯಿಂದ ಹೊರ ಬಂದರು. ಅವರು ತಮ್ಮ ಟೂರ್ ವೇಳೆ ಬಿದಿರಿನ ಪೀಠೋಪಕರಣಗಳ ಮಾರುಕಟ್ಟೆ ಭಾರತದಲ್ಲಿ ದೊಡ್ಡದಾಗಿದೆಯೆಂದೂ, ಇದರ ಸಹಾಯದಿಂದ ಅನೇಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಅವಕಾಶಗಳೂ ಇದೆ ಎನ್ನುವ ವಿಚಾರವನ್ನು ತಿಳಿದುಕೊಂಡರು.

ಸ್ಥಳೀಯ ಪತ್ರಿಕೆಯೊಂದರ ಪ್ರಕಾರ ಅರುಣ ಹಾಗೂ ಪ್ರಶಾಂತ್ ಅಂಪತಿ 2008 ರಲ್ಲಿ ಬಿದಿರಿನಿಂದ ಪೀಠೋಪಕರಣಗಳನ್ನು ಮಾಡುವ ತಮ್ಮ ಉದ್ಯಮವನ್ನು ಸ್ಥಾಪನೆ ಮಾಡಿದರು. ಇದಾದ ನಂತರ ಅವರು ತಮ್ಮ ಉದ್ಯಮವನ್ನು ಬೆಳೆಸುವ ಸಲುವಾಗಿ ಬ್ಯಾಂಕ್ ನಿಂದ 60 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡರು. ಈ ಕೃಷಿ ತಮಗೆ ಮಾತ್ರವೇ ಸೀಮಿತವಾಗಬಾರದು ಎನ್ನುವ ಉದಾತ್ತವಾದ ಆಲೋಚನೆಯೊಂದಿಗೆ ಅವರು ಆಂಧ್ರಪ್ರದೇಶದಲ್ಲಿನ ಗ್ರಾಮೀಣ ಪ್ರದೇಶದ ಜನರು ಹಾಗೂ ಬುಡಕಟ್ಟು ಜನಾಂಗದವರಿಗೆ ಬಿದಿರಿನಿಂದ ಪೀಠೋಪಕರಣಗಳನ್ನು ಮಾಡುವ ತರಬೇತಿಯನ್ನು ನೀಡುವ ವ್ಯವಸ್ಥೆಯನ್ನು ಕೂಡಾ ಮಾಡಿದರು.

ಪ್ರಾರಂಭದಲ್ಲಿ ಸಹಜವಾಗಿಯೇ ಸಮಸ್ಯೆಗಳನ್ನು ಇವರು ಕೂಡಾ ಎದುರಿಸಬೇಕಾಯಿತು. ಆದರೆ ಅದೆಲ್ಲವನ್ನು ಎದುರಿಸುತ್ತಾ ಮುಂದೆ ಸಾಗಿದ ಫಲಿತಾಂಶ ಇಂದು ಎಲ್ಲರ ಕಣ್ಣ ಮುಂದೆ ಇದೆ. ಬಿದಿರಿನ ಪೀಠೋಪಕರಣಗಳ ಉತ್ಪಾದನೆಯಿಂದ ಈ ದಂಪತಿ ತಮ್ಮ ಕುಟುಂಬವನ್ನು ನಡೆಸುತ್ತಿರುವುದು ಮಾತ್ರವೇ ಅಲ್ಲದೇ ಅನೇಕ ಜನರಿಗೆ ಉದ್ಯೋಗದ ಅವಕಾಶಗಳನ್ನು ಕೂಡ ಕಲ್ಪಿಸಿದ್ದಾರೆ. ಬಿದಿರಿನ ಪೀಠೋಪಕರಣಗಳ ಉತ್ಪಾದನೆಯ ಮೂಲಕ ಪ್ರಕೃತಿಯೊಂದಿಗೆ ಬೆಸೆದುಕೊಂಡು ಅನೇಕ ಜನರ ಪಾಲಿಗೆ ಬೆಳಕಾಗಿರುವ ಈ ದಂಪತಿಗಳು ಇನ್ನಷ್ಟು ಜನರಿಗೆ ಮಾದರಿಯಾಗಲಿ ಎಂದು ಹಾರೈಸೋಣ.
