ಒಂದು ಚಾರ್ಜ್ ಗೆ 150 ಕಿಮೀ ಚಲಿಸುವ ಟಯೋಟದ ಪುಟ್ಟ C+pod ಎಲೆಕ್ಟ್ರಿಕ್ ಕಾರ್: ಇದರ ವೈಶಿಷ್ಟ್ಯ ಮತ್ತು ಬೆಲೆ ತಿಳಿದುಕೊಳ್ಳಿ

ಆಧುನಿಕತೆಯ ಜೊತೆ ಜೊತೆಗೆ ಇಂಧನಗಳ ಬೆಲೆ ಏರಿಕೆ, ಪರಿಸರ ಸಂರಕ್ಷಣೆ ಹಾಗೂ ಇನ್ನೂ ಅನೇಕ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳ ಬದಲಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಜನರು ಗಮನ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವಿಶ್ವದ ಅಗ್ರಮಾನ್ಯ ಕಾರು ಉತ್ಪಾದಕ ಕಂಪನಿಗಳು ಕೂಡಾ ಎಲೆಕ್ಟ್ರಿಕ್ ಕಾರುಗಳನ್ನು, ಸಾಕಷ್ಟು ಹೊಸ ಹೊಸ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ತರಲು ಸಜ್ಜಾಗುತ್ತಿವೆ. ಜಪಾನಿನ ಕಾರ್ ಕಂಪನಿಯಾದ ಟೊಯೋಟಾ ಮೋಟಾರ್ಸ್ನ ಅತಿ ಚಿಕ್ಕದಾದ ಎಲೆಕ್ಟ್ರಿಕ್ ಕಾರ್ ಸಿ + ಪಾಡ್ ಆಗಿದೆ. ಇದು ಬಹಳ ಆಕರ್ಷಕವಾದ ನೋಟ ಹಾಗೂ ಶಕ್ತಿ ಶಾಲಿಯಾದ ಎಲೆಕ್ಟ್ರಿಕ್ ಎಂಜಿನ್ ಅನ್ನು ಒಳಗೊಂಡಿರುವ ಕಾರಾಗಿದೆ. ಈ ಹೊಸ ಕಾರನ್ನು ಪ್ರಸ್ತುತ ಕಂಪನಿಯು ಕಾರ್ಪೊರೇಟ್ ಬಳಕೆದಾರರು ಮತ್ತು ಸ್ಥಳೀಯ ಆಡಳಿತಕ್ಕಾಗಿ ಬಿಡುಗಡೆ ಮಾಡಿದೆ.

ಕಂಪನಿ ಈ ಕಾರುಗಳ ಸೀಮಿತ ಮಾದರಿಗಳನ್ನು ಮಾರಾಟ ಮಾಡುತ್ತದೆ. ಹೊಸ ಸಿ+ ಪಾಡ್ ಎರಡು ಆಸನಗಳ ಬಿಇವಿ ಎಲೆಕ್ಟ್ರಿಕ್ ಕಾರನ್ನು ಟೊಯೋಟಾ ಕಂಪನಿ ಚಲನಶೀಲತೆಯ ಆಯ್ಕೆಯಾಗಿ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ನಡೆಯುತ್ತಿರುವ ಜನರಿಂದ ಹಾಗೂ ದ್ವಿಚಕ್ರವಾಹನಗಳಿಂದ ಉಂಟಾಗುವ ಘರ್ಷಣೆಯನ್ನು ತಪ್ಪಿಸಲು ವಿಶೇಷ ಎನಿಸುವಂತಹ ವೈಶಿಷ್ಟ್ಯವನ್ನು ನೀಡಲಾಗಿದೆ. ಕಡಿಮೆ ದೂರದ ಪ್ರಯಾಣಕ್ಕಾಗಿ ಈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಕಾರಿನ ಚಾಲನೆಗೆ ಅಗತ್ಯವಿರುವ ಶಕ್ತಿಗಾಗಿ 9.06 ಕಿಲೋವ್ಯಾಟ್ ಲಿಥಿಯಂ ಅಯಾನ್ ಬ್ಯಾಟರಿಯನ್ನು ನೀಡಲಾಗಿದೆ,

ಬ್ಯಾಟರಿಯನ್ನು ಕಾರಿನ ಫ್ಲೋರ್ ನ ಕೆಳಗೆ ಅಳವಡಿಸಲಾಗಿದೆ. ಇದರ ಮೋಟಾರು ಗರಿಷ್ಠ
12 ಎಚ್‌ಪಿ ಶಕ್ತಿಯನ್ನು ಮತ್ತು 56 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ರಸ್ತೆಗಳಲ್ಲಿ ಈ ಎಲೆಕ್ಟ್ರಿಕ್ ಕಾರ್ 150 ಕಿಲೋಮೀಟರ್ ಗಳ ರೇಂಜ್ ಅನ್ನು ನೀಡುತ್ತದೆ ಎಂದು ಸಮರ್ಥನೆ ಮಾಡಿಕೊಂಡಿದೆ. ಒಂದು ಸಲ ಕಾರಿನ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಕಾರು ಸುಮಾರು 150 ಕಿಲೋಮೀಟರುಗಳ ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿ ಭರವಸೆಯನ್ನು ನೀಡಿದೆ.

200V/16A ವಿದ್ಯುತ್ ಪೂರೈಕೆಯಲ್ಲಿ ಸುಮಾರು 5 ಗಂಟೆಗಳ ಅವಧಿಯಲ್ಲಿ ಕಾರಿನ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸಾಧ್ಯವಿದೆ.
ಇದೇ ವೇಳೆ 100V/6A ಸ್ಟ್ಯಾಂಡರ್ಡ್ ವಿದ್ಯುತ್ ಪೂರೈಕೆ ಮೂಲಕ ಕಾರನ್ನು ಚಾರ್ಜ್ ಮಾಡಲು 16 ಗಂಟೆಗಳ ಅವಶ್ಯಕತೆ ಇರುತ್ತದೆ. ಗಾತ್ರದಲ್ಲಿ ಕಾರು ಬಹಳ ಚಿಕ್ಕದಾಗಿದೆ. ಈ ಕಾರಿನ ಒಟ್ಟು ತೂಕ ಕೇವಲ 619 ಕೆಜಿ ಗಳಾಗಿದೆ. ಇದರ ಉದ್ದ 2,490 ಮಿಮೀ, ಅಗಲ 1290 ಮಿಮೀ ಮತ್ತು ಎತ್ತರ 1,550 ಮಿಮೀ ಗಳಾಗಿದೆ. ಈ ಕಾರಿನಲ್ಲಿ ಕೇವಲ ಎರಡು ಆಸನಗಳಿಗೆ ವ್ಯವಸ್ಥೆಯನ್ನು ಮಾಡಿದ್ದು, ಇಬ್ಬರು ವ್ಯಕ್ತಿಗಳ ಪ್ರಯಾಣಕ್ಕೆ ಮಾತ್ರವೇ ಇದು ಸೂಕ್ತವಾಗಿದೆ.

ಕಾರಿನ ತೂಕವನ್ನು ಆದಷ್ಟು ಕಡಿಮೆ ಮಾಡಬೇಕು ಎನ್ನುವ ಕಾರಣದಿಂದ ಕಾರಿನ ಎಕ್ಸ್ಟೆರಿಯರ್ ಪ್ಯಾನಲ್ ಗಳನ್ನು ಪ್ಲಾಸ್ಟಿಕ್ನಿಂದ ತಯಾರಿಸಲಾಗಿದೆ. ಟೊಯೋಟಾ ಕಂಪನಿ ತನ್ನ ಈ ಪುಟ್ಟ ಎಲೆಕ್ಟ್ರಿಕ್ ಕಾರನ್ನು 2 ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ ಅದೇ X ಟ್ರಿಮ್ ಮತ್ತು G ಟ್ರಿಮ್ ಗಳಾಗಿವೆ.
ಇದರ ಎಕ್ಸ್ ರೂಪಾಂತರದ ಬೆಲೆ 1.65 ಮಿಲಿಯನ್ ಯೆನ್, ಅಂದರೆ ಇದು ಭಾರತೀಯ ಕರೆನ್ಸಿಯ ಪ್ರಕಾರ 11.75 ಲಕ್ಷ ರೂಪಾಯಿಗಳು. ಅದೇ ಸಮಯದಲ್ಲಿ, ಅದರ ಜಿ ರೂಪಾಂತರದ ಬೆಲೆ 1.71 ಮಿಲಿಯನ್ ಯೆನ್ ಆಗಿದೆ, ಅಂದರೆ ಇದು ಭಾರತೀಯ ಕರೆನ್ಸಿಯ ಪ್ರಕಾರ 12.15 ಲಕ್ಷ ರೂಪಾಯಿಗಳು.