2600 ರ ವೇಳೆಗೆ ಮನುಷ್ಯ ‘ಅಮರ’ನಾಗಿ ಸಾವನ್ನು ಗೆಲ್ಲುತ್ತಾನೆ: ಸತ್ತವರನ್ನು ಮತ್ತೆ ಮರಳಿ ಭೂಮಿಗೆ ತರಬಹುದು!

ರಷ್ಯಾದ ವಿಜ್ಞಾನಿಗಳು ಇಡೀ ಮಾನವಕುಲವು ಆಶ್ಚರ್ಯ ಪಡೆಯುವಂತಹ ವಿಷಯವೊಂದನ್ನು ಹೇಳಿದ್ದಾರೆ. ಅವರ ಪ್ರಕಾರ ಕ್ರಿ ಶ2600 ರ ವೇಳೆಗೆ ಮನುಷ್ಯ ಅಮರತ್ವವನ್ನು ಪಡೆಯಲಿದ್ದಾನೆ. ಮನುಷ್ಯ ತಾನು ಅಮರತ್ವವನ್ನು ಪಡೆಯುವುದು ಮಾತ್ರವೇ ಅಲ್ಲದೆ ಸತ್ತಿರುವವರನ್ನು ಕೂಡಾ ಮರಳಿ ಕರೆ ತರುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ. ಆದರೆ ಅಂತಹ ದಿನವೂ ಬರಬೇಕಾದರೆ ಮನುಷ್ಯರು ಇಂದಿನಿಂದಲೇ ಕೆಲವು ಕಾರ್ಯಗಳನ್ನು ಮಾಡಬೇಕಾಗಿದೆ ಎಂದೂ ಹೇಳಿದ್ದಾರೆ. ಭೂಮಿಯ ಮೇಲೆ ಮನುಷ್ಯ ಬಹಳ ದೀರ್ಘಕಾಲದಿಂದಲೂ ಅಮರತ್ವವನ್ನು ಪಡೆಯಬೇಕೆಂಬ ಪ್ರಯತ್ನದಲ್ಲಿ ಇದ್ದಾ‌ನೆ. ಆ ವಿಷಯದ ಕುರಿತಾದ ಮಾಹಿತಿಯನ್ನು ಅನ್ವೇಷಿಸುವಲ್ಲಿ ತೊಡಗಿಕೊಂಡಿದ್ದಾನೆ. ಅಲ್ಲದೇ
ಈಗಾಗಲೇ ಈ ಭೂಮಿಯ ಮೇಲೆ ಅಮರತ್ವವನ್ನು ಸಾಧಿಸಿದ್ದಾರೆ ಎಂದು ಕೂಡ ಹೇಳಲಾಗುತ್ತದೆ. ಅಂತಹ ವ್ಯಕ್ತಿಗಳ ಕುರಿತಾಗಿ ಚರ್ಚೆಗಳು ನಡೆಯುತ್ತದೆ.

ಆದರೆ ಅಮರತ್ವ ಎನ್ನುವುದು ಏನು? ಅದನ್ನು ಪಡೆಯುವುದಾದರೂ ಹೇಗೆ? ಎನ್ನುವುದು ಮಾತ್ರ ಒಂದು ರಹಸ್ಯವಾಗಿ ಉಳಿದಿದೆ. ಇದೆಲ್ಲದರ ಹೊರತಾಗಿ ಕೂಡ ಒಬ್ಬ ವ್ಯಕ್ತಿಯು ಸರಿಯಾದ ಮಾರ್ಗದಲ್ಲಿ ನಡೆದರೆ ಅವನು ಖಂಡಿತವಾಗಿಯೂ ಅಮರತ್ವವನ್ನು ಪಡೆಯುತ್ತಾನೆ, ಅದು ಮಾತ್ರವೇ ಅಲ್ಲದೆ ಆತ ತನ್ನ ಶಕ್ತಿಗಳನ್ನು ಪ್ರಯೋಗ ಮಾಡುವ ಮೂಲಕ ಸತ್ತಿರುವವರನ್ನು ಕೂಡ ಮರಳಿ ಕರೆ ತರಬಹುದಾಗಿದೆ ಎನ್ನುವ ಮಾತನ್ನು ರಷ್ಯಾದ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ರಷ್ಯಾದ ವಿಜ್ಞಾನಿ ಎಲೆಕ್ಸೆಯಿ ತುರ್ಚಿನ್ ಅವರು ಒಬ್ಬ ಟ್ರಾನ್ಸ್ ಹುಮನಿಸ್ಟ್ ಆಗಿದ್ದಾರೆ. ಅವರು ಮಾನವರು ತಮ್ಮ ಪ್ರೀತಿಪಾತ್ರರನ್ನು ಭೂಮಿಗೆ ಕರೆತರಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಆದಾಗ್ಯೂ ಒಬ್ಬ ವ್ಯಕ್ತಿಯು ತನ್ನ ಪ್ರತಿಯೊಂದು ಚಟುವಟಿಕೆಗಳ ದಾಖಲೆಯನ್ನು ಇಡಬೇಕಾಗುವುದು ಎಂದು ಹೇಳಿದ್ದು, ಅವಶ್ಯಕತೆ ಬಿದ್ದರೆ ನಿಮ್ಮ ಚಟುವಟಿಕೆಗಳು, ನಿನ್ನ ನೆನಪುಗಳು ಹಾಗೂ ಅನುಭವಗಳನ್ನು ಬೇರೊಂದು ದೇಹದಲ್ಲಿ ಇಡಲು ಸಾಧ್ಯವಾಗುತ್ತದೆ ಎಂದಿರುವ ಅವರು, ತಮ್ಮ ಎಲ್ಲಾ ಚಟುವಟಿಕೆಗಳನ್ನು ಕೂಡಾ ರೆಕಾರ್ಡ್ ಮಾಡಿ ಇಡುತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ ಮುಂಬರುವ ಕಾಲದಲ್ಲಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಂಡು ಅವರನ್ನು ಮತ್ತೆ ಜೀವಂತವಾಗಿಸಲು ಇದು ಸಹಾಯಕವಾಗುತ್ತದೆ ಎನ್ನಲಾಗಿದೆ. ತನ್ನನ್ನು ತಾನು ಟ್ರಾನ್ಸ್ ಹ್ಯೂಮನಿಸ್ಟ್ ಎಂದು ಕರೆದುಕೊಳ್ಳುವ ಇವರು ಅಮರತ್ವದ ಕುರಿತಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಅಮರತ್ವವನ್ನು ಪಡೆಯುವುದು ಹೇಗೆ ಎನ್ನುವ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದಾರೆ. ಇದಕ್ಕೆ Classification of Approaches to Technological Resurrection for the Foundation Science for Life Extension ಎನ್ನುವ ಹೆಸರನ್ನು ನೀಡಲಾಗಿದೆ. ಇವರು ಮತ್ತೊಬ್ಬ ವಿದ್ವಾಂಸ ಮ್ಯಾಕ್ಸಿಸ್ ಚೆರ್ನ್ಯಾಕೊವ್ ಅವರ ಜೊತೆ ಸೇರಿ ಅಮರತ್ವದ ಬಗ್ಗೆ ಒಂದು ಸಂಶೋಧನಾ ಪ್ರಬಂಧವನ್ನು ಸಿದ್ದಪಡಿಸಿದ್ದು, ಅದಕ್ಕೆ “Immortality Roadmap” ಎನ್ನುವ ಹೆಸರನ್ನು ನೀಡಿದ್ದಾರೆ. ಇದರಲ್ಲಿ ಅಮರತ್ವವನ್ನು ಸಾಧಿಸಲು ಇವರು ನಾಲ್ಕು ಮಾರ್ಗಗಳನ್ನು ತಿಳಿಸಿದ್ದಾರೆ.

ಅದರಲ್ಲಿ ಮೊದಲನೆಯದು ನೇರ ಮಾರ್ಗವಾಗಿದ್ದು, ಉಳಿದ 3 ಬ್ಯಾಕ್ ಅಪ್ ಯೋಜನೆಗಳಂತೆ ಕಂಡುಬರುತ್ತವೆ ಎನ್ನಲಾಗಿದೆ. ಈ ಸಂಶೋಧನಾ ಪ್ರಬಂಧದಲ್ಲಿ ಸತ್ತವರನ್ನು ಮರಳಿ ಕರೆತರುವ ವಿಧಾನವನ್ನು ಕೂಡ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರು ಈ ಸಂಶೋಧನಾ ಪ್ರಬಂಧದಲ್ಲಿ ಸ್ಪಷ್ಟವಾಗಿ ಪ್ರಸ್ತುತ ಸಂದರ್ಭದಲ್ಲಿ ಮಾನವರಿಗೆ ಸಾವು ಎನ್ನುವುದು ಅನಿವಾರ್ಯವಾಗಿದ್ದು ಅದನ್ನು ತಪ್ಪಿಸಲು ಸಾಧ್ಯವಿಲ್ಲ, ಆದರೆ ತನ್ನೆಲ್ಲ ಚಟುವಟಿಕೆಗಳ ದಾಖಲೆಯನ್ನು ಇಟ್ಟುಕೊಂಡರೆ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಕಾರಣದಿಂದ ಅವುಗಳನ್ನು ಕೃತಕವಾದ ಶರೀರಗಳಲ್ಲಿ ಅಳವಡಿಸುವ ಮೂಲಕ ಮತ್ತೊಮ್ಮೆ ಜಾಗೃತಗೊಳಿಸಬಹುದು ಎಂದಿದ್ದಾರೆ.

ಇನ್ನು ಸತ್ತವರನ್ನು ಮರಳಿ ಬದುಕಿಸುವ ಹಾಗೂ ಅಮರತ್ವ ಸಾಧಿಸುವ ವಿಷಯದ ಸಂಪೂರ್ಣ ಸಂಶೋಧನೆ ಆಗುವವರೆಗೆ ಮಾನವನ ಅಂಗಾಂಗಗಳನ್ನು ಬಯೋ ಇಂಜಿನಿಯರಿಂಗ್ ಮೂಲಕ ಸಂರಕ್ಷಿಸಿ ಇಡಬೇಕೆಂದು ಹೇಳಿದ್ದಾರೆ. ಅವರ ಪ್ರಕಾರ 2600 ರ ವೇಳೆಗೆ ಇಂತಹದೊಂದು ಕೃತಕ ಬುದ್ಧಿಮತ್ತೆ ಬೆಳೆದು, ಅಮರತ್ವದ ಕುರಿತಾದ ಸಂಶೋಧನೆಯು ಸಫಲವಾಗುತ್ತದೆ ಹಾಗೂ ಮತ್ತೊಮ್ಮೆ ಜೀವನ ಪಡೆಯಲು ಸಾಧ್ಯವಿದೆ ಎನ್ನಲಾಗಿದೆ.