ಹೊಸ ಕಾರು ಖರೀದಿಸಲು ಹಣ ಇರಲಿಲ್ಲ, ಆದರೆ ಈ ಯುವಕ ಸುಮ್ಮನಾಗಲಿಲ್ಲ: 40 ಸಾವಿರ ರೂ.ನಲ್ಲಿ ತಾನೇ ಸಿದ್ಧಪಡಿಸಿ ಬಿಟ್ಟ ಅದ್ಭುತ ಕಾರು!

ಒಬ್ಬ ವ್ಯಕ್ತಿಗೆ ತನ್ನ ನೆಚ್ಚಿನ ವಸ್ತುವನ್ನು ಖರೀದಿ ಮಾಡಲು ಸಾಧ್ಯವಾಗದೇ ಹೋದಾಗ ಆತ ತನ್ನ ಪ್ರತಿಭೆಯನ್ನು ಬಳಸಿಕೊಂಡು ತನ್ನ ಕನಸನ್ನು ನನಸು ಮಾಡಿಕೊಳ್ಳಬಹುದು. ಆದರೆ ಇದಕ್ಕೆ ಆತನಲ್ಲಿ ಇಚ್ಛಾಶಕ್ತಿ ಇರಬೇಕು. ಇಂತಹುದೇ ಒಂದು ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ ಕೇರಳದ ಒಬ್ಬ ಯುವಕ ರಾಕೇಶ್. ಅವರು ತಮ್ಮ ಪ್ರತಿಭೆಯಿಂದ ಕಾರೊಂದನ್ನು ತಯಾರಿಸಿದ್ದಾರೆ ವಿಶೇಷ ಎಂದರೆ ಇದು ಆಟಿಕೆ ಕಾರಲ್ಲ. ಬದಲಾಗಿ ನಿಜವಾದ ಕಾರು ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ರಾಕೇಶ್ ಬಾಬು ಅವರಿಗೆ 29 ವರ್ಷ ವಯಸ್ಸು. ಕೇರಳದ ಆಲಪ್ಪುಳ ಜಿಲ್ಲೆಯ ಚೇರ್ತಲಾದ ನಿವಾಸಿ ಇವರು. ರಾಕೇಶ್ ಅವರ ತಂದೆಯವರಿಗೆ ಒಂದು ಮೆಕಾನಿಕ್ ವರ್ಕ್ ಶಾಪ್ ಇದೆ. ರಾಕೇಶ್ ಬಾಲ್ಯದಿಂದಲೂ ಕೂಡಾ ವರ್ಕ್ ಶಾಪ್ ಗೆ ಹೋಗುವ ಹವ್ಯಾಸವನ್ನು ಹೊಂದಿದ್ದರು. ಅಲ್ಲಿ ಹಲವು ವಿಧದ ಕಾರುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮೆಕಾನಿಕಲ್ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುತ್ತಿತ್ತು. ‌

ಹೀಗೆ ಬಾಲ್ಯದಿಂದಲೇ ಮೆಕಾನಿಕಲ್ ವಿಷಯಗಳನ್ನು ತಿಳಿದುಕೊಂಡ ರಾಕೇಶ್ ಮೊದಲು ಬೈಕ್ ಮತ್ತು ಜೀಪ್ ಗಳನ್ನು ತಯಾರಿಸುವ ಪ್ರಯತ್ನವನ್ನು ಮಾಡಿದ್ದರು ಆದರೆ ಅವರಿಗೆ ಅದರಲ್ಲಿ ಯಾವುದೇ ರೀತಿಯ ಉತ್ತಮ ಫಲಿತಾಂಶವು ದೊರೆತಿರಲಿಲ್ಲ. ಆದರೆ ಈಗ ರಾಕೇಶ್ ಒಂದು ಕಾರನ್ನು ವಿನ್ಯಾಸಗೊಳಸಿದ್ದು, ಇದು ಅಕ್ಷರಶಃ ವೋಕ್ಸ್‌ವ್ಯಾಗನ್‌ ಬೀಟಲ್ ನ ಪುಟ್ಟ ಪ್ರತಿರೂಪದಂತೆ ಕಾಣುತ್ತಿದೆ. ರಾಕೇಶ್ ಇಂಡಸ್ಟ್ರಿಯಲ್ ಟ್ರೈನಿಂಗ್ ನಲ್ಲಿ ಡಿಪ್ಲೊಮೋ ಪದವಿಯನ್ನು ಪಡೆದುಕೊಂಡಿದ್ದಾರೆ. ಚಿಕ್ಕಂದಿನಿಂದಲೇ ಇವರಿಗೆ ಮೆಕಾನಿಕಲ್ ವಿಷಯಗಳ ಕಡೆ ಗಮನ ಇದ್ದದ್ದರಿಂದ ಕಾರು ತಯಾರಿಸುವ ಮೊದಲು ಅವರು ಬೈಕ್ ಮತ್ತು ಜೀಪ್ ವಿನ್ಯಾಸ ಗೊಳಿಸುವ ಪ್ರಯತ್ನ ಪಟ್ಟರಾದರೂ, ಆಗ ಹಣ ಮತ್ತು ಅಗತ್ಯ ವಸ್ತುಗಳು ಇಲ್ಲದ ಕಾರಣ ಸಫಲರಾಗಿರಲಿಲ್ಲ. ಆದರೂ ತನ್ನ ಆಸೆ ಅಥವಾ ಗುರಿಯನ್ನು ಮಾತ್ರ ಅವರು ಮರೆತಿರಲಿಲ್ಲ.

ರಾಕೇಶ್ ಹೇಳುವಂತೆ ಅವರು ಒಂದು ಕಾರನ್ನು ಖರೀದಿಸಲು ಬಯಸಿದ್ದರು. ಆದರೆ ಅವರ ಬಳಿ ಕಾರನ್ನು ಕೊಳ್ಳಲು ಹಣ ಇರಲಿಲ್ಲ. ಅಲ್ಲದೇ ಅಷ್ಟು ಹಣವನ್ನು ಕೂಡಿಡಲು ಕೂಡಾ ಅವರಿಂದ ಸಾಧ್ಯವಿರಲಿಲ್ಲ ಆಗ ರಾಕೇಶ್ ತಾನೇ ಒಂದು ಸ್ವಂತ ಕಾರನ್ನು ವಿನ್ಯಾಸಗೊಳಿಸುವ ನಿರ್ಧಾರವೊಂದನ್ನು ಮಾಡಿದರು. ತನ್ನ ಪರಿಶ್ರಮದ ಫಲದಿಂದ ರಾಕೇಶ್ ತನ್ನ ಕನಸಿನ ಕಾರನ್ನು ಸಿದ್ಧಪಡಿಸಿದರು. ವಿಶೇಷವೆಂದರೆ ಈ ಕಾರನ್ನು ಅವರು ಕೇವಲ 40 ಸಾವಿರ ರೂಪಾಯಿಗಳ ನೆಲೆಯಲ್ಲಿ ಸಿದ್ಧಪಡಿಸಿದ್ದಾರೆ. ಇನ್ನು ಈ ಕಾರನ್ನು ಸಿದ್ಧಪಡಿಸಲು ರಾಕೇಶ್ ವಿವಿಧ ಭಾಗಗಳನ್ನು ಜೋಡಿಸಿದ್ದಾರೆ. ಬಹುತೇಕ ಕಾರಿನ ಬಿಡಿ ಭಾಗಗಳನ್ನು ತಮ್ಮ ತಂದೆಯ ವರ್ಕ್ ಶಾಪ್ ನಿಂದ ಸಂಗ್ರಹಿಸಿದ್ದಾರೆ. ಹಳದಿ ಬಣ್ಣದ ಈ ಕಾರು ನೋಡಲು ಬಹಳ ಸುಂದರವಾಗಿದೆ.

ರಾಕೇಶ್ ಅವರು ಈ ಕಾರನ್ನು ಸಿದ್ಧ ಪಡಿಸಲು ಸುಜುಕಿ ಸಮುರಾಯ್ ಮೋಟಾರ್ ಬೈಕ್ ನ ಎಂಜಿನನ್ನು, ಆಟೋ ರಿಕ್ಷಾದಿಂದ ಟೈಯರ್ ಗಳನ್ನು, ಬಂಪರ್ ಬೈಕ್ ನ ಕ್ರಾಷ್ ಗಾರ್ಡ್ ನಿಂದ, ಇದರ ಮಿರರ್ ಗಳನ್ನು ಟಿವಿಎಸ್ ಫಿಯಾರೋ ಎಫ್ ಎಕ್ಸ್, ಮೋಟಾರ್ ಸೈಕಲ್ ನಿಂದ ಹಾಗೂ ಡೋರ್ ಹ್ಯಾಂಡಲ್ ಅನ್ನು ಅಂಬಾಸಿಡರ್ ಕಾರ್ ನಿಂದ ಪಡೆದಿರುವುದಾಗಿ ಹೇಳಿದ್ದಾರೆ. ಆದರೆ ಯಾವುದೇ ಮೂಲದಿಂದಲೂ ಕೂಡ ರಿವರ್ಸ್ ಗೇರ್ ಸಿಗದೆ ಇದ್ದಾಗ ತಾನೇ ಸ್ವತಃ ಒಂದು ರಿವರ್ಸ್ ಗೇರನ್ನು ಸಿದ್ಧಪಡಿಸಿದ್ದಾರೆ. ಕಾರಿನ ಮೊದಲನೇ ಮಾದರಿಯಲ್ಲಿ ಪೆಡಲನ್ನು ಬಳಸಿಕೊಂಡು ಕಾರನ್ನು ಸ್ಟಾರ್ಟ್ ಮಾಡಬೇಕಾಗಿತ್ತು. ಆದರೆ ಎರಡನೇ ವಿನ್ಯಾಸದಲ್ಲಿ two-stroke ಸೆಲ್ಫ್ ಸ್ಟಾರ್ಟ್ ಅನ್ನು ಅಳವಡಿಸಿದ್ದಾರೆ. ಬಹುಶಃ ಕಾರಿನಲ್ಲಿ ಇಂತಹ ವ್ಯವಸ್ಥೆಯನ್ನು ನೀಡಿರುವುದು ಇದೇ ಮೊದಲು ಎನ್ನುತ್ತಾರೆ ರಾಕೇಶ್.

ರಾಕೇಶ್ ಸಿದ್ಧಪಡಿಸಿರುವ ಈ ಕಾರಿನ ಗರಿಷ್ಠ ವೇಗದ ಮಿತಿ 40 ಕಿಲೋಮೀಟರ್ ಆಗಿದೆ. ಒಂದು ಲೀಟರ್ ಇಂಧನಕ್ಕೆ ಇದು 30 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಈ ಕಾರನ್ನು ಸಿದ್ಧಪಡಿಸಲು ನನಗೆ ಆರು ತಿಂಗಳು ಬೇಕಾಯಿತು ಎಂದು ಹೇಳುವ ರಾಕೇಶ್ ಅವರು ಎಲ್ಲಾ ಸೌಲಭ್ಯಗಳು ಇದ್ದರೆ ಮೂರು ತಿಂಗಳ ಅವಧಿಯಲ್ಲಿ ಇದನ್ನು ಸಿದ್ಧಪಡಿಸಬಹುದು ಎಂದು ಹೇಳಿದ್ದಾರೆ. ರಾಕೇಶ್ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಇವರು ತಯಾರಿಸಿರುವ ಕಾರನ್ನು ರಸ್ತೆ ನಿಯಮಗಳು ಹಾಗೂ ಬೇರೆ ಕಾನೂನಿನ ತೊಡಕುಗಳಿಂದ ರಸ್ತೆಯಲ್ಲಿ ಸಂಚಾರಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ಮುಂದೊಂದು ದಿನ ತನ್ನ ಕಾರಿಗೂ ಸಕಾಲ ಕೂಡಿ ಬರುವುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.‌