Video: ನೀರಿನ ಕೊಳಾಯಿ ತಿರುಗಿಸಿ ನೀರನ್ನು ಕುಡಿದ ಕಾಗೆ, ಕಾಗೆಯ ಜಾಣ್ಮೆ ನೋಡಿ ಬೆರಗಾದ ನೇಟಿಜನ್ಸ್

ದೂರದಿಂದ ಹಾರಿ ಬಂದ ಕಾಗೆಯೊಂದಕ್ಕೆ ಬಾಯಾರಿಕೆಯಾಗಿ ನೀರಿಗಾಗಿ ಹುಡುಕುವಾಗಲೇ ಅದಕ್ಕೆ ಅಲ್ಲೇ ಇದ್ದ ಮಡಿಕೆಯೊಂದರಲ್ಲಿ ನೀರು ಕಂಡಿತ್ತು. ಆದರೆ ಅದರಲಿ ನೀರು ತಳದಲ್ಲಿ ಇದ್ದುದ್ದರಿಂದ ಅದಕ್ಕೆ ಕುಡಿಯಲು ಆಗಲಿಲ್ಲ. ಆಗ ಕಾಗೆಯು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮಡಕೆಯೊಳಗೆ ಒಂದಷ್ಟು ಕಲ್ಲುಗಳನ್ನು ತಂದು ಹಾಕಿತು. ಆಗ ನೀರು ಮೇಲಕ್ಕೆ ಬಂದಿತು, ಕಾಗೆ ನೀರನ್ನು ಕುಡಿದು ತನ್ನ ದಾಹವನ್ನು ನೀಗಿಸಿಕೊಂಡು ಹಾರಿ ಹೋಯಿತು. ಇದು ಬಾಲ್ಯದಲ್ಲಿ ನಾವೆಲ್ಲಾ ಕೇಳಿರುವಂತಹ ನೀತಿ ಕಥೆ. ಇದರಲ್ಲಿ ಕಾಗೆಯು ಹೇಗೆ ತನ್ನ ಚಾಣಕ್ಷತನದಿಂದ ತನ್ನ ಬಾಯಾರಿಕೆಯನ್ನು ನೀಗಿಸಿ ಕೊಂಡಿತ್ತು ಎನ್ನುವುದನ್ನು ತಿಳಿಯುತ್ತೇವೆ. ಅಲ್ಲದೆ ಕಾಗೆಯ ಬುದ್ಧಿವಂತಿಕೆಯನ್ನು ಮೆಚ್ಚುತ್ತೇವೆ. ಈ ವಿಷಯವು ಕೇವಲ ಕಥೆಗೆ ಸೀಮಿತ ಎಂದು ಕೊಂಡರೆ ನಿಜಕ್ಕೂ ಅದು ತಪ್ಪು ಎನ್ನಬಹುದು.

ವೈಜ್ಞಾನಿಕವಾಗಿಯೂ ಬೇರೆಲ್ಲಾ ಹಕ್ಕಿಗಳಿಗಿಂತಲೂ ಕೂಡಾ ಬುದ್ಧಿವಂತಿಕೆಯಲ್ಲಿ ಕಾಗೆಯು ಒಂದು ಹೆಜ್ಜೆ ಮುಂದೆ ಇದೆ ಎನ್ನುವುದು ವಾಸ್ತವವಾದ ವಿಷಯವಾಗಿದೆ. ಕಾಗೆಗಳ ಕುರಿತಾದ ಅತ್ಯಾಶ್ಚರ್ಯಕರ ಎನಿಸುವಂತಹ ಅನೇಕ ವಿಷಯಗಳು ನಮಗೆ ಅಂತರ್ಜಾಲದಲ್ಲಿ ಓದಲು ಸಿಗುತ್ತದೆ. ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲೂ ಕಾಗೆಗಳ ಬುದ್ಧಿಮತ್ತೆಯನ್ನು ನಮಗೆ ಪರಿಚಯ ಮಾಡಿಸುವಂತಹ ವಿಶೇಷ ಎನಿಸುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ವೈರಲ್ ಆದಾಗ ಒಂದು ಕ್ಷಣ ನಮಗೂ ಆಶ್ಚರ್ಯವೆನಿಸುತ್ತದೆ. ಪ್ರತಿದಿನ ನಮ್ಮ ಕಣ್ಣ ಮುಂದೆ ಹಾರಾಡುವ ಕಾಗೆಯಲ್ಲಿ ಇಂತಹದೊಂದು ಆಲೋಚನಾಶಕ್ತಿ ಇದೆಯೆಂಬುದು ನೋಡಿ ಆಶ್ಚರ್ಯ ಪಡುತ್ತೇವೆ.

ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ಆಸಕ್ತಿಕರವಾದ ವಿಡಿಯೋ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ಸುಂದರವಾದ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಕಾಗೆಯು ಹೇಗೆ ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ವಿಡಿಯೋ ಶೇರ್ ಮಾಡಿ ಕೊಂಡ ಸುಶಾಂತ್ ನಂದಾ ಅವರು ಶೀರ್ಷಿಕೆಯಲ್ಲಿ “ಕೌಶಲ್ಯವುಳ್ಳ ಕಾಗೆ” ಎಂದು ಬರೆದುಕೊಂಡಿದ್ದಾರೆ. ವೀಡಿಯೊ ಒಮ್ಮೆ ನೋಡಿದ ಮೇಲೆ ನಿಜಕ್ಕೂ ಅವರು ಹಾಕಿರುವ ಶೀರ್ಷಿಕ ಬಹಳ ಸೂಕ್ತವಾಗಿದೆ ಎಂದು ನಮಗೂ ಅನಿಸುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಾಯಾರಿದ ಕಾಗೆಯೊಂದು ನೀರನ್ನು ಕುಡಿಯುವ ಸಲುವಾಗಿ ಒಂದು ನೀರಿನ ಕೊಳಾಯಿಯ ಬಳಿಗೆ ಬರುತ್ತದೆ.

ಆದರೆ ನೀರಿನ ಕೊಳಾಯಿ ಅಥವಾ ಟ್ಯಾಪ್ ನ ಮೇಲ್ಭಾಗವನ್ನು ಸೂಕ್ತವಾಗಿ ತಿರುಗಿಸಿ ನೀರು ಹೊರಗೆ ಹರಿಯದಂತೆ ನಿಲ್ಲಿಸಲಾಗಿರುತ್ತದೆ. ಆಗ ಕಾಗೆ ಹಾರಿಕೊಂಡು ಹೋಗಿ ಕೊಳಾಯಿಯ ಪೈಪ್ ಮೇಲೆ ಕೂತು, ನೀರು ಹೊರಗಡೆ ಬರ ಬೇಕಾದರೆ ಕೊಳಾಯಿಯ ಮೇಲಿರುವ ತಿರುಗಿಸುವ ಭಾಗವನ್ನು ತನ್ನ ಕೊಕ್ಕಿನಿಂದಲೇ ಬಹಳ ಕೌಶಲ್ಯದಿಂದ ತಿರುಗಿಸುತ್ತದೆ. ಹಾಗೆ ತಿರುಗಿಸಿದ ಮೇಲೆ ಕೊಳಾಯಿಯಿಂದ ನೀರು ಬಂದಿದ್ದು ಕಾಗೆ ನೀರನ್ನು ಕುಡಿದು ತನ್ನ ದಣಿವನ್ನು ತೀರಿಸಿಕೊಂಡಿದೆ. ಹಿಂದೆ ಮಡಿಕೆಯೊಳಗೆ ಕಲ್ಲನ್ನು ತುಂಬಿಸಿ ನೀರು ಕುಡಿದ ಕಾಗೆ ಎಂಬುದು ಕಥೆಯಾದರೆ, ಇಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ಕಾಗೆ ತನ್ನ ಆಲೋಚನೆ ಬದಲಿಸಿ ಅಪ್ಡೇಟ್ ಆದ ಮಾಡ್ರನ್ ಕಾಗೆ ಇದು ಎನ್ನುವಂತೆ ಕಂಡುಬರುತ್ತದೆ.

ವಿಡಿಯೋ ನೋಡಿ

ಕಾಗೆಯ ಬುದ್ಧಿಮತ್ತೆಯ ಈ ವಿಡಿಯೋ ವೈರಲ್ ಆಗಿದ್ದು, 13 ಸಾವಿರಕ್ಕಿಂತ ಹೆಚ್ಚು ಸಂಖ್ಯೆಯ ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. 1500 ಕ್ಕಿಂತ ಹೆಚ್ಚು ಜನ ಮೆಚ್ಚುಗೆಯನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳೆಯೊಬ್ಬರು ಇನ್ನು ಮುಂದೆ ಶಾಲೆಯಲ್ಲಿ ಶಿಕ್ಷಕರು ಕಾಗೆಯು ನೀರು ಕುಡಿದ ಕಥೆಯನ್ನು ಅಪ್ ಗ್ರೇಡ್ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಬೇರೆಲ್ಲಾ ಪಕ್ಷಿಗಳಿಗಿಂತ ಕಾಗೆಗಳು ಬುದ್ಧಿವಂತ ಪಕ್ಷಿಗಳು ಎಂದಿದ್ದಾರೆ. ಮತ್ತೆ ಕೆಲವರು ಕೊಳಾಯಿಯನ್ನು ತಿರುಗಿಸಿ ನೀರು ಕುಡಿದಿದ್ದೇನೋ ಸರಿ, ಆದರೆ ಅನಂತರ ಅದು ಕೊಳಾಯಿಯ ನೀರು ಹೊರಗೆ ಬರದಂತೆ ಕೊಳಾಯಿ ನಿಲ್ಲಿಸಿತ್ತೋ? ಇಲ್ಲವೋ? ಎಂದು ಪ್ರಶ್ನೆ ಮಾಡಿದ್ದಾರೆ.