ಆಫ್ರಿಕಾದಲ್ಲಿ ಚೀನಾದ 160 ದ್ವಿಚಕ್ರ ವಾಹನಗಳ ಕಂಪನಿಗಳ ಬೆನ್ನು ಮೂಳೆ ಮುರಿದ ಭಾರತೀಯ ಮೂಲದ ಕೇವಲ 2 ದ್ವಿಚಕ್ರ ವಾಹನ ಕಂಪನಿಗಳು!

ಭಾರತೀಯ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಗಳು ಆಫ್ರಿಕಾದಲ್ಲಿ ಚೀನಾದ ದ್ವಿಚಕ್ರವಾಹನ ಕಂಪನಿಗಳಿಗೆ ದೊಡ್ಡ ಪೈಪೋಟಿಯನ್ನು ನೀಡುತ್ತಿವೆ. ಕಳೆದ ಹತ್ತು ವರ್ಷಗಳಿಂದಲೂ ಆಫ್ರಿಕಾದ ದ್ವಿಚಕ್ರವಾಹನಗಳ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳು 95% ಭಾಗವನ್ನು ತನ್ನದಾಗಿಸಿಕೊಂಡಿದ್ದವು‌‌. ಅಲ್ಲದೆ ಚೀನಾದ ಬರೋಬ್ಬರಿ 200 ದ್ವಿಚಕ್ರ ವಾಹನ ಕಂಪನಿಗಳು ಆಫ್ರಿಕಾ ದೇಶಕ್ಕೆ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಅಲ್ಲಿನ ಮಾರುಕಟ್ಟೆಯ ಮೇಲೆ ಒಂದು ರೀತಿಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಿತು. ಆದರೆ ಕಳೆದೆರಡು ವರ್ಷದಿಂದ ಈ ಪರಿಸ್ಥಿತಿಯು ಬದಲಾಗುತ್ತಾ ಬಂದಿದೆ ದಿನದಿಂದ ದಿನಕ್ಕೆ ಚೀನಾದ ದ್ವಿಚಕ್ರ ವಾಹನಗಳಿಗೆ ಆಫ್ರಿಕಾದಲ್ಲಿ ಬೇಡಿಕೆ ಕುಗ್ಗ ತೊಡಗಿದೆ.

2020 ರಲ್ಲಿ ಚೀನಾದ ಒಟ್ಟು 160 ಕಂಪನಿಗಳು ಆಫ್ರಿಕಾ ಮಾರುಕಟ್ಟೆಯಿಂದ ಹೊರ ಬಂದಿದ್ದು, ಈಗ ಈಗ ಕೇವಲ 40 ಕಂಪನಿಗಳು ಮಾತ್ರವೇ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವನ್ನು ಮಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಮೂಲದ ದ್ವಿಚಕ್ರವಾಹನಗಳ ಕಂಪನಿಗಳು ಆಫ್ರಿಕಾದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಅಲ್ಲದೇ 95% ಮಾರುಕಟ್ಟೆಯನ್ನು ಹೊಂದಿದ್ದ ಚೀನಾ ಈಗ ತನ್ನ 50% ಮಾರುಕಟ್ಟೆಯನ್ನು ಕಳೆದುಕೊಂಡಿದ್ದು, 50% ಮಾರುಕಟ್ಟೆಯನ್ನು ಈಗ ಭಾರತ ಮೂಲದ ಕಂಪನಿಗಳು ತಮ್ಮದಾಗಿಸಿಕೊಂಡಿವೆ. ಅದರಲ್ಲೂ ಭಾರತೀಯ ಮೂಲದ ಬಜಾಜ್ ದ್ವಿಚಕ್ರವಾಹನ ಕಂಪನಿ ಹಾಗೂ ಟಿವಿಎಸ್ ಹೆಚ್ಚು ಜನಪ್ರಿಯವಾಗಿರುವ ದ್ವಿಚಕ್ರ ವಾಹನ ಕಂಪನಿಗಳಾಗಿವೆ.

ಆಫ್ರಿಕಾದಲ್ಲಿ ಬಜಾಜ್ 40% ದ್ವಿಚಕ್ರ ವಾಹನಗಳ ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿದ್ದರೆ, ಟಿವಿಎಸ್ ಉಳಿದ 10% ಮಾರುಕಟ್ಟೆಯನ್ನು ಹೊಂದಿದೆ. ಬಜಾಜ್ ಕಳೆದ ಎರಡು ವರ್ಷಗಳಲ್ಲಿ 10 ಲಕ್ಷ ಬೈಕುಗಳನ್ನು ಆಫ್ರಿಕಾದಲ್ಲಿ ಮಾರಾಟ ಮಾಡಿದೆ ಎನ್ನಲಾಗಿದ್ದು, ಇದು ಬಜಾಜ್ ಕಂಪನಿಯ ದ್ವಿಚಕ್ರ ವಾಹನಗಳಿಗೆ ಆಫ್ರಿಕಾದಲ್ಲಿರುವ ಬೇಡಿಕೆಗೆ ಸಾಕ್ಷಿಯಾಗಿದೆ. ಆಫ್ರಿಕಾದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಬುಡಾಬುಡಾ ಎಂದು ಕರೆಯಲಾಗುತ್ತದೆ. ಇವುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹಾಗೂ ಸರಕುಗಳ ಸಾಗಾಣಿಕೆಗೆ ಬಳಸಿಕೊಳ್ಳಲಾಗುತ್ತದೆ. ಬಜಾಜ್ ಕಂಪನಿ ಭಾರತದಿಂದ ನೇರವಾಗಿ ಬೈಕ್ ಗಳನ್ನು ಎಕ್ಸ್ ಪೋರ್ಟ್ ಮಾಡುವುದಿಲ್ಲ.

ಭಾರತದಿಂದ ಬೈಕ್ ನ ಎಲ್ಲಾ ಕಂಪೋನೆಂಟ್ ಗಳನ್ನು ಹಾಗೂ ಬಿಡಿ ಭಾಗಗಳನ್ನು ಒಂದು ಕಿಟ್ ಮಾದರಿಯಲ್ಲಿ ಆಫ್ರಿಕಾಕ್ಕೆ ರಫ್ತು ಮಾಡಿ ಅಲ್ಲಿ ಬೈಕುಗಳನ್ನು ಸಿದ್ಧಪಡಿಸಲಾಗುತ್ತದೆ. ಆಫ್ರಿಕಾದಲ್ಲಿ ಬಜಾಜ್ ಕಂಪನಿಯ ಬಾಕ್ಸರ್ ಬೈಕ್ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಬೈಕ್ ನಿಂದಾಗಿಯೇ ಬಜಾಜ್ ಕಂಪನಿಯು ಆಫ್ರಿಕಾದ ದ್ವಿಚಕ್ರವಾಹನಗಳ ಮಾರುಕಟ್ಟೆಯಲ್ಲಿ 40% ಭಾಗವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು ಎನ್ನಲಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಬಜಾಜ್ ಕಂಪನಿಯ ತ್ರಿಚಕ್ರ ವಾಹನಗಳಿಗೂ ಬೇಡಿಕೆ ಹೆಚ್ಚಿದ್ದು ಚೀನಾದ ತ್ರಿಚಕ್ರ ವಾಹನಗಳ ಬೇಡಿಕೆಯೂ ಕುಗ್ಗಲು ತೊಡಗಿದೆ.

ಭಾರತದ ದ್ವಿಚಕ್ರವಾಹನಗಳ ರಫ್ತು 75% ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿದ್ದು, ಇದರಲ್ಲಿ 40% ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿದೆ. ಜಪಾನ್ ಮೂಲದ ಹ್ಯುಂಡೈ ಹಾಗೂ ಯಮಹ ದಂತಹ ಕಂಪನಿಗಳು ಸಹಾ ಭಾರತದಿಂದ ಆಫ್ರಿಕಾಕ್ಕೆ ದ್ವಿಚಕ್ರವಾಹನಗಳನ್ನು ರಫ್ತು ಮಾಡುತ್ತಿದೆ. ಆಫ್ರಿಕಾದ ಜನರು ಚೀನಾದ ಬೈಕುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತದೆಯಾದರೂ, ಹೆಚ್ಚು ಬಾಳಿಕೆ ಹಾಗೂ ಕಡಿಮೆ ನಿರ್ವಹಣೆ ವೆಚ್ಚವನ್ನು ಭಾರತೀಯ ಬೈಕುಗಳು ಹೊಂದಿವೆ ಎನ್ನುವ ಸತ್ಯವನ್ನು ಅರಿತುಕೊಂಡಿದ್ದಾರೆ. ಅದಕ್ಕಾಗಿಯೇ ಚೀನಾದ ಬೈಕುಗಳ ಬದಲಾಗಿ ಭಾರತದ ಬೈಕುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.