ತಿನ್ನಲು 163 ರೂ. ಕೊಟ್ಟು 1 ಕಿಲೋ ಹುಳುಗಳನ್ನು ತಂದ ಬಡ ಮಹಿಳೆ, ಅದನ್ನು ಬೇಯಿಸುವ ಮೊದಲೇ ಕೋಟ್ಯಾಧಿಪತಿಯಾಗಿ ಹೋದಳು.
ದೇವರು ಕರುಣಿಸಿದರೆ ನಾವು ಊಹೆ ಮಾಡದಷ್ಟು, ನಮ್ಮ ನಿರೀಕ್ಷೆಗೂ ಮೀರಿದಂತಹ ಅನುಗ್ರಹವನ್ನು ಕರುಣಿಸುತ್ತಾನೆ. ಈ ರೀತಿಯ ಒಂದು ದೇವರ ಕರುಣೆ ಅಥವಾ ಅದೃಷ್ಟದ ಬಾಗಿಲೊಂದು ಥೈಲ್ಯಾಂಡ್ ನ ಮಹಿಳೆಯೊಬ್ಬರ ಜೀವನದಲ್ಲಿ ತೆರೆದುಕೊಂಡಿದೆ. ಈ ಮಹಿಳೆಯ ಅದೃಷ್ಟ ಎಲ್ಲಿಂದ ಬಂತು ಎನ್ನುವುದಾದರೆ ಅದು ಒಂದು ಜಾತಿಯ ಹುಳುವಿನ ಹೊಟ್ಟೆಯಿಂದ ಎಂದರೆ ಆಶ್ಚರ್ಯ ಉಂಟಾಗಬಹುದು. ನೋಡು ನೋಡುತ್ತಲೇ ಈ ಮಹಿಳೆಯ ಸುದ್ದಿಯು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಮಾದ್ಯಮಗಳಲ್ಲಿ ವೈರಲ್ ಆಗಿದೆ. ಈಕೆಯ ಹೆಸರು ಕೊಡ್ಚಾಕೊರ್ನ್ ತಂಟಿವಿವಾಟ್ಕುಲ್ ಎನ್ನಲಾಗಿದೆ. ಬಡತನದ ಬೇಗೆಯಲ್ಲಿ ಸಿಲುಕಿ ಕಷ್ಟದ ಜೀವನ ನಡೆಸುತ್ತಿದ್ದ ಈಕೆಯ ಜೀವನ ಹೇಗೆ ಬದಲಾಗಿದೆ ಎಂದರೆ ಈಕೆ ಈಗ ಕೋಟ್ಯಾಧಿಪತಿ ಎನಿಸಿಕೊಂಡಿದ್ದಾಳೆ.
ಒಂದು ನ್ಯೂಸ್ ವೆಬ್ಸೈಟ್ ಈ ಮಹಿಳೆಯ ಕುರಿತಾದ ರೋಚಕವಾದ ವಿಷಯವನ್ನು ಸುದ್ದಿ ಮಾಡಿದೆ. ಇದರಲ್ಲಿ ಆಕೆಯ ಅದೃಷ್ಟ ಹೇಗೆ ಆಕೆಯ ಜೀವನವನ್ನು ಬದಲಿಸಿತು ಎನ್ನುವ ವಿವರಣೆಯನ್ನು ನೀಡಲಾಗಿದೆ. ಬಡತನದ ಬೇಗೆಯಿಂದ ಬಳಲಿ ಹೋಗಿದ್ದ ಕೊಡ್ಚಾಕೊರ್ನ್ ಕೆಲವು ದಿನಗಳ ಹಿಂದೆ ಮಾರುಕಟ್ಟೆಯಿಂದ ಒಂದು ಜಾತಿಯ ಹುಳುಗಳನ್ನು ಆಹಾರ ಸಿದ್ಧಪಡಿಸುವುದಕ್ಕಾಗಿ ಮನೆಗೆ ತಂದಿದ್ದಳು. ಆದರೆ ಅದೇ ಆಕೆಯ ಅದೃಷ್ಟವನ್ನು ಬದಲಿಸಲಿದೆ ಎಂದು ಊಹೆ ಮಾಡಿರಲಿಲ್ಲ. ಥೈಲ್ಯಾಂಡ್ ನ ಕರೆನ್ಸಿ ಯ ಪ್ರಕಾರ ಈ ಹುಳುಗಳನ್ನು ಖರೀದಿಸಲು ಆಕೆ 70 ಭಾಟ್ ಅಂದರೆ ಸುಮಾರು 163 ರೂಪಾಯಿಗಳನ್ನು ಖರ್ಚು ಮಾಡಿದ್ದಳು. ಆದರೆ ಆ ಹುಳುಗಳಲ್ಲಿ ಒಂದು ಆಕೆಯ ಜೀವನದ ದಿಕ್ಕು ಬದಲಿಸಿ ಹಾಕಿದೆ.

ಆಹಾರ ಸಿದ್ಧಪಡಿಸಲು ಆಕೆ ಮಾರುಕಟ್ಟೆಯಿಂದ ತಂದ ಹುಳುಗಳನ್ನು ಅಡುಗೆಗೆ ಬಳಸುವ ಮೊದಲು ಚೆನ್ನಾಗಿ ತೊಳೆಯುತ್ತಿದ್ದಳು. ಈ ವೇಳೆ ಎಲ್ಲಾ ಹುಳುಗಳ ಹೊಟ್ಟೆಯನ್ನು ಕೂಡಾ ಆಕೆ ಸ್ವಚ್ಛ ಮಾಡುತ್ತಿದ್ದಳು. ಹೀಗೆ ಅವುಗಳ ಹೊಟ್ಟೆಯಲ್ಲಿನ ಕಸವನ್ನು ತೆಗೆಯುವಾಗ ಒಂದು ಹುಳುವಿನ ಹೊಟ್ಟೆಯಲ್ಲಿ ಆಕೆಗೆ ಒಂದು ವಿಶೇಷವಾದ ಮುತ್ತು ಸಿಕ್ಕಿದೆ. ಮೊದಲಿಗೆ ಆಕೆ ಅದನ್ನೊಂದು ಸಾಮಾನ್ಯ ಕಲ್ಲು ಎಂದು ತಿಳಿದುಕೊಂಡಿದ್ದಾಳೆ. ಆದರೆ ಅನಂತರ ಆಕೆಗೆ ಆ ಒಂದೂವರೆ ಸೆಂಟಿಮೀಟರ್ ನ ಮುತ್ತು ಬಹಳ ದುರ್ಲಭವಾದ ಆರೆಂಜ್ ಮೆಲೋ ಪರ್ಲ್ ಎಂದು ತಿಳಿದು ಬಂದಿದೆ.
ಈ ಮುತ್ತಿನ ವಿಷಯವು ಎಲ್ಲೆಡೆ ಸುದ್ದಿಯಾದ ಕೂಡಲೇ ಆ ವ್ಯಾಪಾರಕ್ಕೆ ಸಂಬಂಧಿಸಿದ ಹಲವು ಮಂದಿ ವ್ಯಾಪಾರಿಗಳು ಅದನ್ನು ಖರೀದಿ ಮಾಡಲು ಕೊಡ್ಚಾಕೊರ್ನ್ ಅವರನ್ನು ಹುಡುಕಿಕೊಂಡು ಆಕೆಯ ಮನೆಗೆ ಬಂದಿದ್ದಾರೆ. 30 ಜನವರಿಯಂದು ದೊರೆತ ಈ ಮುತ್ತಿಗೆ ಮೊದಲು ಒಬ್ಬ ವ್ಯಾಪಾರಿಯು ಸುಮಾರು 21 ಲಕ್ಷ ರೂಪಾಯಿಗಳ ಬೆಲೆಯನ್ನು ನಿಗಧಿಪಡಿಸಿದನು. ಇದಾದ ನಂತರ ಕೆಲವು ದಿನಗಳ ಬಳಿಕ ಥೈಲ್ಯಾಂಡ್ ನ ಮತ್ತೋರ್ವ ಉದ್ಯಮಿಯು 88 ಲಕ್ಷ ರೂ.ಗಳ ಬೆಲೆಯನ್ನು ನಿಗಧಿ ಮಾಡಿದರು. ಆದರೆ ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಉದ್ಯಮಿಯು 2 ಕೋಟಿ ಬೆಲೆಯನ್ನು ನಿಗಧಿ ಮಾಡಿದಾಗ ಎಲ್ಲರಿಗೂ ಅತ್ಯಾಶ್ಚರ್ಯ ಉಂಟಾಗಿತ್ತು.

ಚೀನಾದ ಉದ್ಯಮಿಯು ಇದಕ್ಕೆ ಎರಡು ಕೋಟಿ ಬೆಲೆ ನಿಗಧಿ ಮಾಡಿದಾಗ ಬಹುಶಃ ಆ ಮಹಿಳೆ ಮುತ್ತನ್ನು ಮಾರಾಟ ಮಾಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮಹಿಳೆ ಮಾರಾಟ ಮಾಡದೇ ಇನ್ನೂ ಹೆಚ್ಚಿನ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಆಕೆಯ ತಾಯಿಯು ಕ್ಯಾನ್ಸರ್ ನಿಂದ ಬಳಲುತ್ತಿದ್ದು ತಾಯಿಯ ಚಿಕಿತ್ಸೆಗೆ ಹಾಗೂ ತಮ್ಮ ಜೀವನವನ್ನು ಒಂದು ಉತ್ತಮ ಮಟ್ಟಕ್ಕೆ ತರಲು ಆಕೆ ಆ ಮುತ್ತಿಗೆ ಇನ್ನೂ ಹೆಚ್ಚಿನ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾಳೆ ಎನ್ನಲಾಗಿದೆ.