ಬಿಸಿಲ ಬೇಗೆಗೆ ಬಾಯಾರಿ ದಣಿದಿದ್ದ ಪಾರಿವಾಳಕ್ಕೆ ಚಮಚದಲ್ಲಿ ನೀರು ಕುಡಿಸಿ ಮಾನವೀಯತೆ ಮೆರೆದ ಪುಟ್ಟ ಬಾಲಕ! ವೈರಲ್ ಆಯ್ತು ಕ್ಯೂಟ್ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ಒಂದು ಹೃದಯ ತಟ್ಟುವ, ಮನಸ್ಸನ್ನು ಸೂರೆಗೊಳ್ಳುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ನಮ್ಮಲ್ಲಿ ಹಿರಿಯರು ಹಾಗೂ ಅನುಭವಿಗಳು ಸದಾ ಕೂಡಾ ಪ್ರಾಣಿಗಳ ಅರೈಕೆಯನ್ನು ಮಾಡಬೇಕು, ಅವುಗಳಿಗೆ ಆಹಾರ ನೀರನ್ನು ಒದಗಿಸಬೇಕು, ಅದು ಪುಣ್ಯ ಫಲವನ್ನು ನೀಡುತ್ತದೆ. ಮಾನವೀಯತೆಗೆ ಅದೊಂದು ಅತ್ಯುತ್ತಮ ನಿದರ್ಶನ ಎಂದು ಕೂಡಾ ಹೇಳುತ್ತಾರೆ. ಈಗ ಇದಕ್ಕೆ ನಿದರ್ಶನ ನೀಡುವಂತೆ ಬಾಲಕನೊಬ್ಬನು ಇಂತಹುದೇ ಒಂದು ಮಾನವೀಯತೆಯನ್ನು ಮೆರೆದಿರುವ ವೀಡಿಯೋ ವೈರಲ್ ಆಗಿದ್ದು, ಬಾಲಕನು ಮಾಡಿದ ಮನೋಜ್ಞ ಹಾಗೂ ಈ ವಯಸ್ಸಿನಲ್ಲೇ ಆತ ಮೂಕ ಜೀವಿಯ ಬಗ್ಗೆ ತೋರಿದ ಕಾಳಜಿಯನ್ನು ಕಂಡು ನೆಟ್ಟಿಗರು ಹಾಡಿ ಹೊಗಳಿದ್ದಾರೆ ಹಾಗೂ ಮೆಚ್ಚುಗೆಗಳ ಮಳೆಯನ್ನೇ ಹರಿಸುತ್ತಿದ್ದಾರೆ.
ಎಲ್ಲಾ ಕಡೆ ಬೇಸಿಗೆಯ ಬೇಗೆ ಏರುತ್ತಲಿದೆ. ಪ್ರಾಣಿ ಪಕ್ಷಿಗಳು ಬಾಯಾರಿಕೆ ಆದಾಗ ನೀರಿಗಾಗಿ ಅಲೆದಾಡುವಂತಹ ದು ಸ್ಥಿತಿ ಎದುರಾಗಿದೆ. ಇಂತಹುದೇ ಒಂದು ಪರಿಸ್ಥಿತಿಯಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಮುದ್ದಾದ ಪಾರಿವಾಳವೊಂದು
ಮನೆಯ ಛಾವಣಿಯ ಬಳಿ ಕುಳಿತಿರುವಾಗ ಅದರ ದಾಹವನ್ನು ನೀಗಿಸಲು ಬಾಲಕನೊಬ್ಬನು ಪ್ರಯತ್ನಿಸಿದ ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿಕೊಂಡಿದ್ದು ವೀಡಿಯೋ ನೋಡಿದ ಪ್ರತಿಯೊಬ್ಬರಿಗೂ ಕೂಡಾ ಇಷ್ಟ ಆಗುತ್ತಿದೆ. ಈ ವೀಡಿಯೋ ನಿಮಗೂ ಕೂಡಾ ಖಂಡಿತ ವಿಷಯವಾಗುತ್ತದೆ ಹಾಗೂ ಬಾಲಕನ ಬಗ್ಗೆ ಮೆಚ್ಚುಗೆ ನೀಡಬೇಕು ಎನಿಸುತ್ತದೆ.
ವೀಡಿಯೋದಲ್ಲಿ ಗಮನಿಸಿದಾಗ ಮನೆಯ ಬಾಲ್ಕನಿಯ ಹೊರಗೆ ಬಿಸಿಲಿನಿಂದ ಬಳಲಿ ಬಂದ ಪಾರಿವಾಳವೊಂದು ಕುಳಿತಿರುತ್ತದೆ. ಸುಡು ಬಿಸಿಲಿನಲ್ಲಿ ಕಷ್ಟ ಪಡುತ್ತಿರುವ ಪಾರಿವಾಳವನ್ನು ನೋಡಿದ ಪುಟ್ಟ ಬಾಲಕನ ಮನಸ್ಸು ಕರಗಿದೆ. ಅವನಿಗೆ ಅದರ ಕಷ್ಟ ಅರ್ಥವಾಗಿದೆ. ಕೂಡಲೇ ಆ ಹುಡುಗ ಮನೆಯೊಳಗೆ ಹೋಗಿ ಆ ಪಾರಿವಾಳಕ್ಕಾಗಿ ಕುಡಿಯಲು ನೀರನ್ನು ತಂದಿದ್ದಾನೆ. ಆತ ಒಂದು ಚಮಚದಲ್ಲಿ ನೀರನ್ನು ಎತ್ತಿಕೊಂಡು ಹೊರಗೆ ಕುಳಿತಿದ್ದ ಪಕ್ಷಿಯ ಕಡೆಗೆ ಕೈಯನ್ನು ಚಾಚಿ ಅದಕ್ಕೆ ನೀರನ್ನು ಕುಡಿಸಿದ್ದಾನೆ. ವಿಶೇಷವೆಂದರೆ ಬಾಯಾರಿಕೆಯಿಂದ ಬಳಲಿದ್ದ ಪಾರಿವಾಳವು ತನ್ನ ದಾಹ ನೀಡುವ ಷ್ಟು ನೀರನ್ನು ಕುಡಿದು ತೃಪ್ತಿ ಪಟ್ಟಿದೆ.
ವೀಡಿಯೋ ಶೇರ್ ಮಾಡಿಕೊಂಡ ಸುಶಾಂತ್ ನಂದಾ ಅವರು ಶೀರ್ಷಿಕೆಯಲ್ಲಿ, ದಯೆ ಮತ್ತು ಕರುಣೆಗಳು ಸಹೋದರರಿದ್ದಂತೆ, ಆ ಭಗವಂತ ಬಾಲಕನನ್ನು ಹರಸಲಿ ಎಂದು ಬರೆದುಕೊಂಡಿದ್ದಾರೆ. ಏಪ್ರಿಲ್ ಏಳರಂದು ಅವರು ಶೇರ್ ಮಾಡಿದ ಈ ವೀಡಿಯೋವನ್ನು 46 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಆರು ಸಾವಿರಕ್ಕೂ ಅಧಿಕ ಮಂದಿ ವೀಡಿಯೋ ಲೈಕ್ ಮಾಡಿದ್ದರೆ, ನೂರಾರು ಜನರು ವೀಡಿಯೋವನ್ನು ರೀಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿರುವಾಗಲೇ ಬಹಳಷ್ಟು ಜನರು ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ
Kindness & trust are co brothers…
— Susanta Nanda IFS (@susantananda3) April 7, 2021
God bless the child☺️
Shared by @Priyamvada22S pic.twitter.com/6feV79qHEK
ವೀಡಿಯೋಗೆ ಪ್ರತಿಕ್ರಿಯೆ ನೀಡಿದ ಒಬ್ಬರು ಭಾರತದಲ್ಲಿ ಪ್ರತಿಯೊಬ್ಬರೂ ಹೀಗೆ ಆಲೋಚನೆ ಮಾಡಿದರೆ ಯಾವುದೇ ಪಕ್ಷಿಯೂ ಕೂಡಾ ಬಾಯಾರಿಕೆಯಿಂದ ಸಾಯುವುದಿಲ್ಲ ಎಂದಿದ್ದಾರೆ. ನಾವು ನಮ್ಮ ಮಕ್ಕಳಲ್ಲಿ ಇಂತಹ ಗುಣವನ್ನು ಬೆಳೆಸಬೇಕು ಎಂದೊಬ್ಬರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮತ್ತೊಬ್ಬರು ನಾವು ಎಲ್ಲಾ ಪ್ರಾಣಿ ಪಕ್ಷಿಗಳಿಗೆ ದಯೆ ತೋರಬೇಕು ಅದಕ್ಕಾಗಿ ನಾವೆಲ್ಲಾ ಸಸ್ಯಾಹಾರಿಗಳಾಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಆ ಬಾಲಕನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.