ಶಾಲೆ ಬಿಟ್ಟು , 8 ಸಾವಿರದ ಸಂಬಳಕ್ಕೆ ಕೆಲಸಕ್ಕೆ ಸೇರಿದ ಯುವಕ ಇಂದು ಭಾರತದ ಕಿರಿಯ ಬಿಲಿಯನೇರ್!

ಸ್ಕೂಲ್‌ಗೆ ಬಂಕ್ ಹೊಡೆದು ಸ್ನೇಹಿತರ ಜೊತೆಗೆ ಚದುರಂಗವನ್ನು ಆಡಿಕೊಂಡು, ಮೋಜು ಮಸ್ತಿಯಿಂದ ಸಮಯವನ್ನು ಕಳೆಯುತ್ತಾ ಕೊನೆಗೆ ಶಾಲೆಯಲ್ಲಿ ಹಾಜರಾತಿ ಕಡಿಮೆಯಾದ ಕಾರಣದಿಂದ ಬೋರ್ಡ್ ಎಕ್ಸಾಮ್ ಬರೆಯಲು ಸಾಧ್ಯವಾಗದೇ, ಶಾಲೆಯನ್ನು ಬಿಡಬೇಕಾಗಿ ಬಂತು.. ಈ ಸಾಲುಗಳನ್ನು ಓದಿದಾಗ ಯಾವುದೋ ಸಿನಿಮಾದ ಕಥೆ ಎನಿಸಬಹುದು. ಆದರೆ ವಾಸ್ತವವಾಗಿ ಇದು ಸಿನಿಮಾ ಕಥೆಯಲ್ಲ, ಬದಲಾಗಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ನಿಖಿಲ್ ಕಾಮತ್ ಅವರ ಜೀವನದ ಕಥೆಯಾಗಿದೆ. ನಿಖಿಲ್ ಕಾಮತ್ ಅವರಿಗೆ ಈಗ 34 ವರ್ಷ ವಯಸ್ಸು.‌ಆದರೆ ದೇಶದ ಅತ್ಯಂತ ಕಿರಿಯ ಬಿಲಿಯನೇರ್ ಎನ್ನುವಂತಹ ಸ್ಥಾನವನ್ನು ಅವರು ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಶ್ರಮ ಹಾಗೂ ಪ್ರತಿಭೆಯೇ ಹೊರತು ಯಾವುದೇ ಪದವಿಗಳಲ್ಲ.‌

ನಿಖಿಲ್ ಕಾಮತ್ ಅವರು ಬ್ರೋಕರೇಜ್ ಫರ್ಮ್ ಜೆರೋಧಾ ಎನ್ನುವಂತಹ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಜೆರೋಧಾ ಕಂಪನಿಯು ಪ್ರಸ್ತುತ ದೇಶದ ಅತಿದೊಡ್ಡ ಬ್ರೋಕರೇಜ್ ಫರ್ಮ್ ಕಂಪನಿಯಾಗಿದ್ದು, ಇದನ್ನು ನಿಖಿಲ್ ಕಾಮತ್ ಅವರು 2010 ರಲ್ಲಿ ಪ್ರಾರಂಭ ಮಾಡಿದ್ದಾರೆ. ನಿಖಿಲ್ ಕಾಮತ್ ಅವರ ಜೀವನ ಬಹಳ ರೋಚಕ ಹಾಗೂ ಕುತೂಹಲಕಾರಿಯಾಗಿದೆ. ನಿಖಿಲ್ ಅವರಿಗೆ ತಾನೊಂದು ಬ್ಯುಸಿನೆಸ್ ಮಾಡಬೇಕು ಎನ್ನುವ ಆಲೋಚನೆ ಬಂದಾಗ ಅವರಿಗೆ ಕೇವಲ ಹದಿನಾಲ್ಕು ವರ್ಷ ವಯಸ್ಸಾಗಿತ್ತು. ಆಗಲೇ ಅವರು ತಮ್ಮ ಸ್ನೇಹಿತರ ಜೊತೆಗೆ ಸೇರಿಕೊಂಡು ಹಳೆಯ ಫೋನುಗಳನ್ನು ಖರೀದಿ ಮಾಡುವ ಮತ್ತು ಮಾರಾಟ ಮಾಡುವ ಕೆಲಸವನ್ನು ಆರಂಭಿಸಿದರು.

ಆದರೆ ಈ ವಿಷಯ ಅವರ ಮನೆಯಲ್ಲಿ ತಿಳಿದ ಮೇಲೆ ಅವರ ತಾಯಿ ಮಗನ ಬಳಿಯಿದ್ದ ಎಲ್ಲಾ ಫೋಟೋಗಳನ್ನು ತೆಗೆದು ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಿ ಬಿಟ್ಟರು. ಹೀಗೆ ನಿಖಿಲ್ ಕಾಮತ್ ಅವರ ಮೊದಲನೇ ಬ್ಯುಸಿನೆಸ್ ಬಂದ್ ಆಗಿಹೋಯಿತು.
ಕೆಲವು ದಿನಗಳ ಹಿಂದೆ ನಡೆದ ಒಂದು ಸಂದರ್ಶನದ ವೇಳೆಯಲ್ಲಿ ಕಾಮತ್ ಅವರು ಮಾತನಾಡುತ್ತಾ, ತನಗೆ ಶಾಲೆಯಲ್ಲಿನ ಸಾಂಪ್ರದಾಯಿಕ ವಾದಂತಹ ಶಿಕ್ಷಣವು ಇಷ್ಟವಾಗುತ್ತಿರಲಿಲ್ಲ ಎಂದಿದ್ದಾರೆ. ಅಲ್ಲದೇ ಹಳೆಯ ಫೋನುಗಳನ್ನು ಖರೀದಿ ಮಾಡಿ ಮಾರಾಟ ಮಾಡುವುದು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಪ್ರಾರಂಭ ಮಾಡಿದರೂ ಅದೇ ತನ್ನ ಜೀವನದಲ್ಲಿ ಮೊದಲ ಬ್ಯುಸಿನೆಸ್ ಎಂದು ಅವರು ಹೇಳಿಕೊಂಡಿದ್ದಾರೆ.

ನಿಖಿಲ್ ಕಾಮತ್ ಅವರಿಗೆ ಚದುರಂಗದ ಆಟ ಆಡುವುದು ಅಂದ್ರೆ ಬಹಳ ಆಸಕ್ತಿಕರವಾದ ಹವ್ಯಾಸವಾಗಿದೆ. ನಿಖಿಲ್ ಅವರ ಜೀವನದಲ್ಲಿ ಮಹತ್ವದ ತಿರುವು ಎಂದರೆ ಅವರಿಗೆ ಶಾಲೆಯಲ್ಲಿ ಸೂಕ್ತ ಹಾಜರಾತಿ ಇಲ್ಲದ ಕಾರಣ ಬೋರ್ಡ್ ಎಕ್ಸಾಮ್ ಗೆ ಅವರಿಗೆ ಪ್ರವೇಶವನ್ನು ನಿರಾಕರಿಸಿದ್ದು. ಈ ಘಟನೆಯ ನಂತರ ಅವರು ಮತ್ತೆ ಶಾಲೆಗೆ ಹೋಗಲಿಲ್ಲ. ಮಗ ಶಾಲೆಯನ್ನು ಬಿಟ್ಟಿದ್ದನ್ನು ನೋಡಿ ಅವರ ತಂದೆ-ತಾಯಿ ಚಿಂತಾಕ್ರಾಂತರಾದರು. ನಿಖಿಲ್ ಅವರಿಗೂ ಕೂಡ ಆಗ ಏನು ಮಾಡಬೇಕೆಂದು ತೋಚಲಿಲ್ಲ. ಶಾಲೆಯನ್ನು ಬಿಟ್ಟ ಮೇಲೆ ನಿಖಿಲ್ ಒಂದು ಕಾಲ್ ಸೆಂಟರ್ ನಲ್ಲಿ ಎಂಟು ಸಾವಿರ ರೂಪಾಯಿಗಳ ಸಂಬಳದ ಕೆಲಸಕ್ಕೆ ಸೇರಿಕೊಂಡರು.

ಈ ಕೆಲಸಕ್ಕೆ ಸೇರಿಕೊಳ್ಳಲು ಅವರು ಒಂದ ನಕಲಿ ಜನನ ಪ್ರಮಾಣ ಪತ್ರವನ್ನು ಸಿದ್ಧಪಡಿಸಿಕೊಂಡಿದ್ದರು. ಆಗ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಈ ವಿಷಯವನ್ನು ಸಹಾ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ಅವರ ಗಮನ ಶೇರು ಮಾರುಕಟ್ಟೆಯ ಕಡೆಗೆ ಹರಿಯಿತು. ತನ್ನ 18ನೇ ವಯಸ್ಸಿನಲ್ಲಿ ಅವರು ಶೇರು ಮಾರುಕಟ್ಟೆಯ ವ್ಯವಹಾರದಲ್ಲಿ ಕೈಯಾಡಿಸಲು ಪ್ರಾರಂಭಿಸಿದರು.
ಲಆರಂಭದಲ್ಲಿ ಅವರು ಕಾಲ್ ಸೆಂಟರ್ ನ ಮ್ಯಾನೇಜರ್ ಹಾಗೂ ಅಲ್ಲಿನ ಉದ್ಯೋಗಗಳಿಂದ ಶೇರ್ ನಲ್ಲಿ ಹಣವನ್ನು ಹೂಡಿಕೆ ಮಾಡಿಸಿದರು. ನಿಖಿಲ್ ಮೇಲೆ ನಂಬಿಕೆ ಇಟ್ಟು ಹಣವನ್ನು ಹೊಡಿಕೆ ಮಾಡಿದವರಿಗೆ ಉತ್ತಮವಾದ ರಿಟರ್ನ್ಸ್ ಕೂಡ ಲಭ್ಯವಾಯಿತು.

ನಂತರ 2010ರಲ್ಲಿ ನಿಖಿಲ್ ತಮ್ಮ ಅಣ್ಣ ನಿತಿನ್ ಕಾಮತ್ ಅವರ ಜೊತೆ ಸೇರಿಕೊಂಡು ಬ್ರೋಕರೇಜ್ ಫರ್ಮ್ ಜೆರೋಧಾ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದಾದ ನಂತರ ಅವರು ಹಿಂದಿರುಗಿ ನೋಡಲಿಲ್ಲ. ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಸಾಗಿದರು. 2020ರಲ್ಲಿ ಫೋರ್ಬ್ಸ್ ಭಾರತದ ನೂರು ಜನ ಶ್ರೀಮಂತರ ಪಟ್ಟಿಯಲ್ಲಿ ಈ ಇಬ್ಬರು ಸಹೋದರರ ಹೆಸರನ್ನು ಕೂಡಾ ಸೇರಿಸಿತು. ಜೆರೋಧಾ ಜೊತೆಯಲ್ಲೇ ನಿಖಿಲ್ ಅವರು ತಮ್ಮ ಅಣ್ಣನ ಜೊತೆಗೂಡಿ ಇನ್ನೊಂದು ಕಂಪನಿಯನ್ನು ಕೂಡ ಆರಂಭಿಸಿದ್ದು, ಅದರ ಹೆಸರು ಟ್ರೂ ಬೀಕನ್ ಎಂದಾಗಿದೆ.

ಈ ಹೊಸ ಕಂಪನಿಯು ಒಂದು ಆಸ್ತಿ ನಿರ್ವಹಣಾ ಕಂಪನಿಯಾಗಿದೆ. 2020 ಕೊರೊನಾ‌ದಿಂದಾಗ ಶೇರು ಮಾರುಕಟ್ಟೆಗೆ ಒಂದು ಕೆಟ್ಟ ವರ್ಷವಾಗಿತ್ತು. ಆದರೆ ನಿಖಿಲ್ ಅವರು ತಮ್ಮ ಸಂಸ್ಥೆಯ ಮೂಲಕ ಎರಡು ಮಿಲಿಯನ್ ಹೊಸ ಗ್ರಾಹಕರನ್ನು ಸೇರಿಸಲು ಯಶಸ್ವಿಯಾಗಿದ್ದಾರೆ. ಪ್ರಸ್ತುತ ಜೆರೋಧಾದ ಸುಮಾರು 40 ಲಕ್ಷ ನೊಂದಾಯಿತ ಬಳಕೆದಾರರಿದ್ದಾರೆ. ನಿಖಿಲ್ ಅವರ ಜೀವನ ಯಾವುದೇ ಪದವಿಗಳು ಇಲ್ಲದೇ ಹೋದರೂ ಜೀವನದಲ್ಲಿ ಶ್ರಮ ಹಾಗೂ ಪ್ರತಿಭೆಯಿಂದ ಯಶಸ್ಸನ್ನು ಪಡೆಯಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.