1 ಎಕರೆ ಜಮೀನಿನಲ್ಲಿ ನರ್ಸರಿ ಮಾಡಿ ಲಕ್ಷ ಲಕ್ಷ ಗಳಿಸುತ್ತಿರುವ ಇವರ ಕೃಷಿ ಪದ್ಧತಿಯು ನಿಜಕ್ಕೂ ಮಾದರಿ ಹಾಗೂ ಅನುಕರಣೀಯವಾದುದು!

ಕೃಷಿ ಹಾಗೂ ಕೃಷಿ ಕ್ಷೇತ್ರದಲ್ಲಿನ ಹೊಸ ಪ್ರಯೋಗಗಳು ನಮ್ಮ ದೇಶದ ಯುವ ಜನರನ್ನು ಕೃಷಿಯತ್ತ ಸೆಳೆಯಬೇಕಾಗಿದೆ. ಏಕೆಂದರೆ ದೇಶದಲ್ಲಿ ಕೃಷಿಯು ಭವಿಷ್ಯತ್ತಿನ ಎಂದೂ ಮುಳುಗದ ಸೂರ್ಯನಿದ್ದಂತೆ.‌ ಕೃಷಿ ಎಂಬ ಸೂರ್ಯನು ನಿಧಾನವಾಗಿ ಆಕಾಶದಲ್ಲಿ ಮೇಲೇರುತ್ತಿದ್ದು, ಈ ಸೂರ್ಯನ ಕಿರಣಗಳು ಪ್ರತಿ ಮನೆಯನ್ನು ತಲುಪಬೇಕಾದ ಅವಶ್ಯಕತೆಯಿದೆ. ಅದರಲ್ಲೂ ವಿಶೇಷವಾಗಿ ಕಷ್ಟಪಟ್ಟು ದುಡಿದು ಸಂದಿಗ್ಧತೆಯನ್ನು ಎದುರಿಸುತ್ತಿರುವ,‌ ಸಂಕಷ್ಟದ ಲ್ಲಿ ಸಿಲುಕಿರುವ ಪ್ರತಿಯೊಬ್ಬ ರೈತನ ಮನೆಬಾಗಿಲನ್ನು ಈ ಸೂರ್ಯನ ಕಿರಣಗಳು ತಲುಪಬೇಕಾದ ಅವಶ್ಯಕತೆ ಇದೆ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ, ಕೃಷಿಯನ್ನು ಒಂದು ಉತ್ತಮವಾದ ಆದಾಯದ ಮೂಲವನ್ನಾಗಿ ಮಾಡಿಕೊಂಡಿರುವ ವಿಚಾರದಲ್ಲಿ ಈಗ ಒಂದು ಹೊಸ ಹೆಸರು ಸೇರ್ಪಡೆಯಾಗಿದೆ. ಅದೇ ಯಶಸ್ವಿ ರೈತ ಎನಿಸಿರುವ ನಾಗೇಂದ್ರ ಪಾಂಡೆಯವರ ಹೆಸರು.

ಉತ್ತರಪ್ರದೇಶದ ಮಹಾರಾಜ ಗಂಜ್ ಜಿಲ್ಲಾ ಕಛೇರಿಯಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಅಂಜನಾ ಗ್ರಾಮದ ನಿವಾಸಿಯಾಗಿದ್ದಾರೆ ನಾಗೇಂದ್ರ ಪಾಂಡೆಯವರು. ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ತಮ್ಮ ಜೀವನದ ವಿಶೇಷ ಕಥೆಯನ್ನು ಹಂಚಿಕೊಂಡಿದ್ದಾರೆ. ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡ ನಾಗೇಂದ್ರ ಪಾಂಡೆ ಸುಮಾರು ಹದಿನೈದು ವರ್ಷಗಳ ಕಾಲ ಒಂದು ಉತ್ತಮ ಉದ್ಯೋಗಕ್ಕಾಗಿ ಪ್ರಯತ್ನಪಟ್ಟರು. ಆದರೆ ಅಂತಹದೊಂದು ಉದ್ಯೋಗ ಸಿಗದೆ ಹೋದಾಗ ತಾನೇ ಕೃಷಿಯ ಕಡೆಗೆ ಗಮನವನ್ನು ಹರಿಸಲು ನಿರ್ಧಾರವನ್ನು ಮಾಡಿದರು. ಅವರು ಮೊದಲಿಗೆ ತಮ್ಮ ನೆರೆ ಹೊರೆಯ ರೈತರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಕೃಷಿಯಲ್ಲಿನ ಅವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿದರು.

ಆಗ ಅವರಿಗೆ ತಿಳಿದುಬಂದಿದ್ದು ರೈತರು ರಸಗೊಬ್ಬರಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು. ಅಲ್ಲದೆ ದುಬಾರಿ ಬೆಲೆಯ ರಸಗೊಬ್ಬರಗಳನ್ನು ಬಳಸಿದ ನಂತರವೂ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎನ್ನುವ ವಿಶ್ವವನ್ನು ಕೂಡಾ ತಿಳಿದುಕೊಂಡರು. ನಾಗೇಂದ್ರ ಅವರು ಮೊದಲಿಗೆ ಎರೆಹುಳು ಗಳಿಂದ ಗೊಬ್ಬರವನ್ನು ತಯಾರಿಸುವುದು ಈ ಸಮಸ್ಯೆಗೆ ಪರಿಹಾರ ಎಂದು ಅರ್ಥ ಮಾಡಿಕೊಂಡರು. ಅದಕ್ಕಾಗಿ ಅವರು ನಲವತ್ತರಿಂದ ಐವತ್ತು ಎರೆಹುಳುಗಳನ್ನು ಬಳಸಿಕೊಂಡು 45 ದಿನಗಳಲ್ಲಿ ಅವರು 2ಕೆಜಿ ಎರೆಹುಳುಗಳನ್ನು ಉತ್ಪಾದಿಸುವ ಮೂಲಕ ಗೊಬ್ಬರ ಉತ್ಪಾದನೆ ಆರಂಭಿಸಿದರು.

2000 ರಲ್ಲಿ ಆರಂಭಿಸಿದ ಅವರ ಈ ಕಾರ್ಯವು ಇಂದು ಬೃಹದ್ ರೂಪವನ್ನು ಪಡೆದುಕೊಂಡಿದೆ. ಈಗ ಇದು ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ 120 ಅಡಿಗಳ ಜಾಗದಲ್ಲಿ 750 ಕ್ವಿಂಟಲ್ ಗೊಬ್ಬರವನ್ನು ಉತ್ಪಾದನೆ ಮಾಡಲಾಗುತ್ತಿದೆ ಅಲ್ಲದೇ ಪ್ಯಾಕಿಂಗ್, ಮಾರ್ಕೆಟಿಂಗ್ ಎಲ್ಲಾ ಕಾರ್ಯಗಳು ಸಹಾ ಇಲ್ಲಿಂದಲೇ ನಡೆಯುತ್ತದೆ. 25 ಕೆಜಿಗಳ ಗೊಬ್ಬರದ ಚೀಲವನ್ನು 200 ರೂಪಾಯಿಗಳಿಗೆ ರೈತರಿಗೆ ಸಿಗುವಂತೆ ಮಾಡಿರುವ ನಾಗೇಂದ್ರ ಪಾಂಡೆಯವರು, ರೈತರಿಗೆ ಎರೆಹುಳುಗಳನ್ನು ಕೂಡಾ ನೀಡುತ್ತಾರೆ. ಇದು ಮಾತ್ರವಲ್ಲದೇ ನಾಗೇಂದ್ರ ಪಾಂಡೆಯವರು ಗೋರಕಪುರ ಜಿಲ್ಲೆಯಲ್ಲಿ ವರ್ಮಿಕಾಂಪೋಸ್ಟ್ ನ ಎರಡು ಯೂನಿಟ್ ಗಳನ್ನು ಆರಂಭಿಸಿದ್ದಾರೆ.

ಇವರು ಇಂದು ಉತ್ತರಪ್ರದೇಶದ ಅತಿದೊಡ್ಡ ವರ್ಮಿಕಾಂಪೋಸ್ಟ್ ಉತ್ಪಾದಕ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದು, ಕಾಲಕಾಲಕ್ಕೆ ತಕ್ಕಂತೆ ವರ್ಮಿಕಾಂಪೋಸ್ಟ್ ಗುಣಮಟ್ಟವನ್ನು ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿಸುತ್ತಲೇ ಇರುತ್ತಾರೆ.ಕೃಷಿಗಾಗಿ ಮಳೆಯನ್ನೇ ಅವಲಂಬಿಸಿರುವ ರೈತರಿಗಾಗಿ ನಾಗೇಂದ್ರ ಪಾಂಡೆಯವರು ತಮ್ಮ ಜಮೀನಿನಲ್ಲಿ ಕೊಳಗಳನ್ನು ನಿರ್ಮಾಣ ಮಾಡಿಸಿದ್ದು, ಪೈಪ್ ಲೈನ್ ಗಳ ಮೂಲಕ ರೈತರಿಗೆ ಅಗತ್ಯವಿರುವ ನೀರನ್ನು ವರ್ಷ ಪೂರ್ತಿ ಸರಬರಾಜು ಮಾಡಲಾಗುತ್ತಿದ್ದು, ಹೆಚ್ಚುವರಿ ನೀರನ್ನು ಮತ್ತೆ ಪೈಪ್ ಲೈನ್ ಗಳ ಮೂಲಕ ಕೊಳದಲ್ಲಿ ಸಂಗ್ರಹಿಸಿ ಇದನ್ನು ಮರು ನೀರಾವರಿಗಾಗಿ ಬಳಸಿಕೊಳ್ಳಲಾಗುತ್ತಿದೆ.

ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಾಗೇಂದ್ರ ಅವರು ಭತ್ತ ಮತ್ತು ಗೋಧಿಯನ್ನು ಬೆಳೆದು ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ.
ತಮ್ಮ ಒಂದು ಎಕರೆ ಜಮೀನಿನಲ್ಲಿ ಅವರು ನರ್ಸರಿಯನ್ನು ಮಾಡಿದ್ದು 10 ಲಕ್ಷ 50 ಸಾವಿರ ಸಸಿಗಳನ್ನು ಬೆಳೆದು, ನಂತರ ಆರು ತಿಂಗಳಿಗೊಮ್ಮೆ ಪ್ರತಿ ಸಸ್ಯಕ್ಕೆ 2.5 ರೂಪಾಯಿಗಳ ಲೆಕ್ಕದಲ್ಲಿ ಮಧ್ಯಪ್ರದೇಶ ಸರ್ಕಾರಕ್ಕೆ 26 ಲಕ್ಷ 50 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಪ್ರತಿ ಆರು ತಿಂಗಳಿಗೊಮ್ಮೆ ಸರಾಸರಿ 14ರಿಂದ 15 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸುತ್ತಾರೆ. ಇವರ ಆದಾಯವು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ಅಧಿಕಾರಿಯ ಸಂಬಳಕ್ಕಿಂತ ಹೆಚ್ಚಾಗಿದೆ.

ನಾಗೇಂದ್ರ ಅವರ ಪ್ರಯತ್ನಗಳನ್ನು ಸರ್ಕಾರದ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಮೆಚ್ಚಿದ್ದಾರೆ. ಆದರೆ ಇಲ್ಲಿ ಕೇವಲ ಮೆಚ್ಚುಗೆ ನೀಡುವುದು ಮಾತ್ರವಲ್ಲದೇ ನಾಗೇಂದ್ರ ಅವರ ಪ್ರಯತ್ನಗಳನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸಿದಾಗ ನಾಗೇಂದ್ರ ಅವರ ಹೊಸ ಪ್ರಯತ್ನಗಳಿಗೆ ನಿಜವಾದ ಯಶಸ್ಸು ದೊರಕುತ್ತದೆ ಎನ್ನಬಹುದಾಗಿದೆ.