ಸಾಮಾನ್ಯ ಸೈಕಲನ್ನು ಬದಲಿಸಿದ ಸೋಲಾರ್ ಸೈಕಲ್ಲಾಗಿ: ಪೆಟ್ರೋಲ್ ಬೆಲೆಯ ಚಿಂತೆಯಿಲ್ಲ, ಮಾಲಿನ್ಯದ ಭಯವೂ ಇಲ್ಲ!
ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಗಗನಕ್ಕೆ ಏರುತ್ತಿದೆ. ಇದರ ನೇರ ಪರಿಣಾಮ ಸಾಮಾನ್ಯ ಜನರ ಜೇಬಿನ ಮೇಲೆ ಉಂಟಾಗುತ್ತಿದೆ. ಒಂದು ಕಡೆ ಜನರು ಈ ಬೆಲೆಯೇರಿಕೆಯಿಂದ ಅ ಸ ಮಾಧಾನಗೊಂಡು ಸರ್ಕಾರ ಹಾಗೂ ಆಡಳಿತವನ್ನು ದೂಷಿಸುತ್ತಿದ್ದಾರೆ. ಇನ್ನೊಂದೆಡೆ ಕೆಲವರು ಇದಕ್ಕೆ ಪರ್ಯಾಯ ಪರಿಹಾರವೇನಾದರೂ ಇದೆಯೇ ಎಂದು ಆಲೋಚನೆಯನ್ನು ಮಾಡುತ್ತಿದ್ದಾರೆ. ಇಂತಹುದೇ ಒಂದು ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನ ಮಾಡಿದ್ದಾರೆ ತೆಲಂಗಾಣದ ರಾಜು ಮುಪ್ಪರಕು ಅವರು. ಅವರ ಈ ಆಲೋಚನೆಯ ಫಲವಾಗಿ ಒಂದು ಸಾಮಾನ್ಯ ಸೈಕಲನ್ನು ಸೋಲಾರ್ ಶಕ್ತಿಯಿಂದ ಚಲಿಸುವ ಸೈಕಲ್ ಆಗಿ ಪರಿವರ್ತನೆಯನ್ನು ಮಾಡಿದ್ದು, ಅವರು ಬಹಳ ಸುಲಭವಾಗಿ ಬೇಕಾದ ಕಡೆಗೆ ಪ್ರಯಾಣವನ್ನು ಮಾಡುತ್ತಿದ್ದಾರೆ.
ವರಾಂಗಲ್ ಜಿಲ್ಲೆಯ ಗೋಪಾಲಪುರಂ ಎನ್ನುವ ಹಳ್ಳಿಯಲ್ಲಿ ನೆಲೆಸಿರುವ 31 ವರ್ಷ ವಯಸ್ಸಿನ ರಾಜು ಅವರು ತಮ್ಮದೇ ಆದಂತಹ ಒಂದು ಟೂಲ್ ವರ್ಕ್ಶಾಪ್ ಅನ್ನು ಹೊಂದಿದ್ದಾರೆ. ಇದರಲ್ಲಿ ಹಾಗಾಗ ತಮ್ಮದೇ ಆದಂತಹ ಹೊಸ ಹೊಸ ಸಂಶೋಧನೆಗಳನ್ನು ಕೂಡ ಮಾಡುವುದರಲ್ಲಿ ಅವರು ತೊಡಗಿಕೊಂಡಿದ್ದಾರೆ. ರಾಜು ಅವರ ತಂದೆ ಒಬ್ಬ ಎಲೆಕ್ಟ್ರಿಷಿಯನ್ ಆಗಿದ್ದರು ಎನ್ನಲಾಗಿದ್ದು, ತಂದೆಯ ಪ್ರಭಾವ ಮಗನ ಮೇಲೆ ಬಾಲ್ಯದಿಂದಲೇ ಇದ್ದು, ರಾಜು ಚಿಕ್ಕವರಾಗಿದ್ದಾಗಲೇ ಏನಾದರೂ ಒಂದು ವಿಭಿನ್ನವಾಗಿರುವುದನ್ನು ಮಾಡಬೇಕೆಂದು ಪ್ರಯತ್ನಗಳನ್ನು ಮಾಡುತ್ತಿದ್ದರು. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದನ್ನು ಕಂಡಾಗ ಸಮೀಪದ ಪ್ರದೇಶಗಳಿಗೆ ಹೋಗಿ ಬರಲು ಸ್ಕೂಟರ್, ಬೈಕ್ ಅಥವಾ ಕಾರಿನ ಮೇಲೆ ಅವಲಂಬಿತವಾಗದೆ ಇನ್ನೇನಾದರೂ ಹೊಸ ವಾಹನವನ್ನು ಬಳಕೆ ಮಾಡಬೇಕೆಂದು ಅವರ ಚಿಂತನೆ ಮಾಡಿದರು.

ನಮ್ಮಲ್ಲಿ ಅಗ್ಗದ ಹಾಗೂ ಪರಿಸರ ಸ್ನೇಹಿ ವಾಹನ ಒಂದಿದೆ. ಅದೇ ಸೈಕಲ್, ಆದರೆ ಸೈಕಲ್ ನಲ್ಲಿ ಹೆಚ್ಚು ದೂರವನ್ನು ಪ್ರಯಾಣ ಮಾಡಲು ಆಗುವುದಿಲ್ಲ. ಎಲೆಕ್ಟ್ರಿಕ್ ಸೈಕಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯಾದರೂ, ಅವುಗಳ ಬೆಲೆ ಬಹಳ ಹೆಚ್ಚಾಗಿದೆ. ಆದ್ದರಿಂದ ಅವುಗಳನ್ನು ಖರೀದಿ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸುಲಭವಾಗಿ ದೊರೆಯುವ, ಸೌರಶಕ್ತಿಯಿಂದ ಚಲಾವಣೆ ಮಾಡಲು ಸಾಧ್ಯವಾಗುವ ಸೈಕಲ್ ಒಂದನ್ನು ತಯಾರಿಸುವ ಆಲೋಚನೆ ಬಂದಿತು ರಾಜು ಅವರಿಗೆ. ನಂತರ ಅವರು ಸಾಮಾನ್ಯವಾದ ಸೈಕಲ್ ನಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡುವ ಮೂಲಕ ಸೋಲಾರ್ ಸೈಕಲ್ಲನ್ನು ಸಿದ್ಧಪಡಿಸಿದ್ದಾರೆ.
ಇವರು ಸೈಕಲ್ ನಲ್ಲಿ ಸೋಲಾರ್ ಪ್ಯಾನೆಲ್ ಮತ್ತು 12 ವೋಲ್ಟ್ ನ ಬ್ಯಾಟರಿಯನ್ನು ಹಾಕಿದ್ದಾರೆ. ಬ್ಯಾಟರಿ ಸೋಲಾರ್ ಫ್ಯಾನಲ್ ನ ಸಹಾಯದಿಂದ ಚಾರ್ಜ್ ಆಗುತ್ತದೆ. ಇದು ಸೈಕಲ್ನಲ್ಲಿ ಅಳವಡಿಸಲಾಗಿರುವ 24 ವೋಲ್ಟ್ ಡಿಸಿ ಮೋಟಾರ್ ಅನ್ನು ಚಾಲನೆ ಮಾಡುತ್ತದೆ. ಒಂದು ವೇಳೆ ಸೂರ್ಯನ ಬೆಳಕಿಲ್ಲ ಹಾಗೂ ಬ್ಯಾಟರಿ ಚಾರ್ಜ್ ಆಗಿಲ್ಲ ಎಂದಾಗ ಇದನ್ನು ಮಾಮೂಲಿ ಸೈಕಲ್ ನಂತೆ ಬಳಸಿಕೊಳ್ಳಲು ಅವಕಾಶ ಇದೆ. ರಾಜು ಅವರು ಹೇಳುವ ಪ್ರಕಾರ ಒಂದು ಸಲ ಇದರ ಬ್ಯಾಟರಿ ಫುಲ್ ಚಾರ್ಜ್ ಆದರೆ ಸುಮಾರು 20 ರಿಂದ 25 ಕಿಲೋಮೀಟರ್ ದೂರವನ್ನು ಕ್ರಮಿಸಬಹುದಾಗಿದೆ. ಇದರ ವೇಗ ಗಂಟೆಗೆ 25 ಕಿಲೋಮೀಟರ್ ಆಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ನಗರ ಅಥವಾ ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನ ಸಂಚಾರಕ್ಕೆ ಸೋಲಾರ್ ಸೈಕಲ್ ಬಹಳ ಉಪಯೋಗವಾಗಿದೆ ಎನ್ನುವ ರಾಜು ಅವರು ಇದರಿಂದಾಗಿ ಪೆಟ್ರೋಲ್ ಗೆ ಖರ್ಚಾಗುವ ಹಣ ಉಳಿಯುತ್ತದೆ. ಸ್ಕೂಟರ್, ಬೈಕ್ ನ ಅಗತ್ಯ ಇರುವುದಿಲ್ಲ. ಅಲ್ಲದೇ ಈ ಸೋಲಾರ್ ಸೈಕಲ್ ನ ಬೆಲೆಯೂ ಕಡಿಮೆ ಇದ್ದು ಪ್ರಸ್ತುತ ಇವರು ಈ ಸೈಕಲ್ಲನ್ನು ಹತ್ತು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ ಎನ್ನಲಾಗಿದೆ. ಅವರು ಸೈಕಲ್ ನ ಬೆಲೆಯನ್ನು ಇನ್ನೂ ಕಡಿಮೆ ಆಗುವಂತೆ ಮಾಡಲು ಯೋಜನೆಗಳನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಅವರು ಆರು ಸೈಕಲ್ ಗಳನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ರಾಜು ಅವರಿಂದ ಸೈಕಲನ್ನು ಪಡೆದಿರುವ ನಾಂಪಲ್ಲಿಯ ರಾಜಕುಮಾರ್ ಎನ್ನುವವರು, ನಾನು ನನ್ನ ಹಳೆಯ ಸೈಕಲ್ಲನ್ನು ರಾಜು ಅವರಿಗೆ ನೀಡಿ ಸೋಲಾರ್ ಸೈಕಲ್ಲಾಗಿ ಪರಿವರ್ತನೆ ಮಾಡಿಸಿಕೊಂಡಿದ್ದೇನೆ. ಈಗ ಬಹಳ ಆರಾಮವಾಗಿ ದೂರ ದೂರ ಹೋಗಿ ಬರಲು ಅನುಕೂಲವಾಗಿದೆ. ಸೈಕಲ್ ಮೇಲೆ ಬಂದು ವೇಳೆ ಇಬ್ಬರು ಕುಳಿತಿದ್ದರೂ ಗಂಟೆಗೆ 20 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ
ಅಲ್ಲದೇ ಮೊದಲಿನಂತೆ ಪೆಡಲ್ ತುಳಿದು ಆಗುತ್ತಿದ್ದ ಆಯಾಸ ಈಗ ಕಡಿಮೆಯಾಗಿದೆ. ಬ್ಯಾಟರಿ ಫುಲ್ ಚಾರ್ಜ್ ಆದರೆ ಸುಮಾರು 30 ಕಿಲೋಮೀಟರ್ ದೂರವನ್ನು ಇದು ಕ್ರಮಿಸುತ್ತದೆ ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.
ರಾಜು ಇಂತಹ ಹೊಸ ಹೊಸ ವಸ್ತುಗಳ ತಯಾರಿಕೆ ಮಾಡಿರುವುದು ಇದೇ ಮೊದಲ ಸಲವಲ್ಲ. ಸೋಲಾರ್ ಸೈಕಲ್ ಗಿಂತಲೂ ಮೊದಲು ಅವರು ವೀಡ್ ಕಟ್ಟರ್ , ಸೋಲಾರ್ ಪೆಸ್ಟಿಸೈಡ್ ಸ್ಪ್ರೇಯರ್, ಸೋಲಾರ್ ಪವರ್ ಮಲ್ಟಿಪರ್ಪಸ್ ಗ್ರಾಸ್ ಕಟರ್, ಮಷೀನ್ ,ಲೈಟ್ ಡಿಪೆಂಡೆಂಟ್ ರೆಜಿಸ್ಟರ್ ಸೆನ್ಸರ್ ಗಳನ್ನು ಸಿದ್ಧಪಡಿಸಿದ್ದಾರೆ ಅವರ ‘ಲೈಟ್ ಡಿಪೆಂಡೆಂಟ್ ರೆಸಿಸ್ಟರ್ ಸೆನ್ಸಾರ್’ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಜಿಲ್ಲೆಯ 100 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಸೆನ್ಸರ್ ಗಳನ್ನು ಅಳವಡಿಸಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ರಾಜು ಅವರು, “ಈ ಸಾಧನವು ಸೆನ್ಸರ್ ಗಳಿಂದ ಕಾರ್ಯ ನಿರ್ವಹಿಸುತ್ತದೆ. ಅದು ಯಾವಾಗ ಬೆಳಕು ಇರುತ್ತದೆ ಮತ್ತು ಯಾವಾಗ ಕತ್ತಲೆಯಾಗುತ್ತದೆ ಎಂದು ತಿಳಿಯುತ್ತದೆ ಎಂದಿದ್ದು, ಈ ಸಾಧನವನ್ನು ಟ್ರಾನ್ಸ್‌ಫಾರ್ಮರ್‌ನೊಂದಿಗೆ ಅಳವಡಿಸಿದ್ದರೆ, ಈ ಸೆನ್ಸರ್ ಸಹಾಯದಿಂದ, ಅದು ಸ್ವಯಂಚಾಲಿತವಾಗಿ ಬೀದಿ ದೀಪಗಳನ್ನು ಆನ್ ಮತ್ತು ಆಫ್ ಮಾಡುತ್ತದೆ.” ಎಂದು ಹೇಳಿದ್ದಾರೆ.