Tata HBX: ಸದೃಢ ವೈಶಿಷ್ಟ್ಯಗಳೊಂದಿಗೆ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಬರುತ್ತಿದೆ Tata ಕಂಪನಿಯ ಮೈಕ್ರೋ SUV ಕಾರು

ದೇಶದ ಅತಿ ದೊಡ್ಡ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ತನ್ನ ಅತ್ಯಂತ ಉಪಯುಕ್ತ ಹಾಗೂ ಉತ್ತಮ ಗುಣಮಟ್ಟದ ಮೈಕ್ರೋ ಎಸ್ಯುವಿ ಎಚ್‌ಬಿಎಕ್ಸ್ ( ಕೋಡ್ ನೇಮ್) ಕಾರನ್ನು ಅತಿಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸಿದೆ ಎನ್ನಲಾಗಿದೆ. ಇತ್ತೀಚೆಗೆ ಈ ಎಸ್ಯುವಿ ಕಾರನ್ನು ಪರೀಕ್ಷೆಯ ಸಮಯದಲ್ಲಿ ಮತ್ತೊಮ್ಮೆ ಸ್ಪಾಟ್ ಮಾಡಲಾಗಿದೆ. ಈ ಹೊಸ ಎಸ್ ಯು ವಿ ಆವೃತ್ತಿಯ ಕಾರಿನ ಕಾನ್ಸೆಪ್ಟನ್ನು ಟಾಟಾ ಮೋಟಾರ್ಸ್ ಕಳೆದ ಬಾರಿಯ ಆಟೋ ಎಕ್ಸ್ ಪೋದಲ್ಲಿ ಎಲ್ಲರಿಗೂ ಪರಿಚಯಿಸಿತ್ತು. ಇನ್ನು ಈಗ ಪ್ರಕಟವಾದ ಒಂದು ವರದಿಯ ಪ್ರಕಾರ ಈ ಬಾರಿ ಈ ಕಾರನ್ನು ಕೇರಳದ ತಿರುವನಂತಪುರಂ ನಲ್ಲಿ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ನೋಡಲಾಗಿದೆ.

ಈ ಕಾರಿನ ಪತ್ತೇದಾರಿ ಫೋಟೋಗಳನ್ನು ಗಮನಿಸುವ ಮೂಲಕ ಕಾರಿನ ಕುರಿತಾಗಿ ಹೇಳುವುದಾದರೆ ಕಂಪನಿಯು ಈ ಕಾರಿಗೆ ಆಕರ್ಷಕವಾದ ಹೆಡ್ ಲೈಟ್ ಗಳನ್ನೂ, ಅದರ ಜೊತೆಗೆ ಟೈಮ್ ರನ್ನಿಂಗ್ ಲೈಟ್ಸ್ ಗಳನ್ನು ನೀಡಿದೆ. ಇದಲ್ಲದೇ ನಾಲ್ಕು ಸ್ಪೋಕ್ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳು ಅದರ ಸೈಡ್ ಪ್ರೊಫೈಲ್ ಅನ್ನು ಮತ್ತಷ್ಟು ಸುಧಾರಿತ ರೀತಿಯಲ್ಲಿ ಕಾಣುವಂತೆ ಮಾಡಿವೆ. ಟೆಸ್ಟ್‌ ನ ವೇಳೆಯಲ್ಲಿ ಕಂಡುಬಂದಿರುವ ಎಸ್ ಯು ವಿ ಒಂದು ಟಾಪ್ ಮಾಡೆಲ್ ಕಾರ್ ಎಂದು ಹೇಳಲಾಗುತ್ತಿದೆ. ಆದರೆ ಕಾರಿನ ಒಳಾಂಗಣದ ಚಿತ್ರಗಳು ಬಹಿರಂಗ ವಾಗದ ಕಾರಣ ಕಾರಿನ ಒಳಭಾಗ ಯಾವ ರೀತಿ ವಿನ್ಯಾಸಗೊಳಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.

ಕಾರಿನಲ್ಲಿ ಮೂರು ಸ್ಪೋಕ್ ಸ್ಟೀರಿಂಗ್ ವೀಲ್ ನಂತಹ ವೈಶಿಷ್ಟ್ಯಗಳನ್ನು ಖಂಡಿತ ನೀಡಲಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಮೌಂಟೆಡ್ ಕಂಟ್ರೋಲ್, ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಮಾರ್ಟ್‌ಫೋನ್ ಸಂಪರ್ಕವನ್ನು ಹೊಂದಿರುತ್ತದೆ ಎನ್ನಲಾಗಿದ್ದು, ಈ ಕಾರಿನ ಡ್ಯಾಶ್ ಬೋರ್ಡ್ ಗೆ ಕಪ್ಪು ಫಿನಿಶಿಂಗ್ ನೀಡಲಾಗಿದ್ದು, ಸಿಲ್ವರ್ ಎಕ್ಸೆಂಟ್ ನಿಂದ ಅಲಂಕಾರ ಮಾಡಲಾಗಿದೆ. ಕಂಪನಿಯು ಈ ಕಾರನ್ನು ತನ್ನ ಹೊಸ ಇಂತಾಕ್ಟ್ 2.0 ವಿನ್ಯಾಸದ ಶೈಲಿಯಲ್ಲಿ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಇದಕ್ಕೆ 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ನೀಡಬಹುದು. ಇದು 83 ಬಿಹೆಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 114 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ನೊಂದಿಗೆ ಬರುತ್ತದೆ. ಕಂಪನಿಯು ಅದನ್ನು ಸ್ವಯಂಚಾಲಿತ ಗೇರ್‌ ಬಾಕ್ಸ್‌ನೊಂದಿಗೆ ಸಂಪರ್ಕಿಸಿರುತ್ತದೆ ಎನ್ನಲಾಗಿದ್ದು, ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಕಂಪನಿಯು ಈ ವಿಶೇಷ ಕಾರನ್ನು ಮಾರುಕಟ್ಟೆಗೆ ತರುತ್ತದೆ ಎಂದು ಅಂದಾಜಿಸಲಾಗುತ್ತಿದೆ.

ಪ್ರಸ್ತುತ ಕಂಪನಿಯು ಈ ಮೈಕ್ರೋ ಎಸ್ ಯು ವಿ ಕಾರಿನ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಹಾಗೂ ಈ ಹೊಸ ಕಾರಿನ ಹೆಸರು ಏನು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಆದರೆ ಮೀಡಿಯಾ ವರದಿಗಾರರು ಈ ಕಾರಿಗೆ ಹಾರ್ನ್ ಬಿಲ್ ಎನ್ನುವಂತಹ ಹೆಸರನ್ನು ನೀಡಿದ್ದಾರೆ. ಕಾರಿನ ಬೆಲೆ ಎಷ್ಟಾಗಬಹುದು? ಎನ್ನುವ ಪ್ರಶ್ನೆಗೆ ಕಾರು ಲಾಂಚ್ ಆಗುವವರೆಗೂ ಉತ್ತರ ಹೇಳುವುದು ಸಾಧ್ಯವಿಲ್ಲ. ಆದರೆ ವರದಿಗಾರರು ತಮ್ಮ ಅಭಿಪ್ರಾಯವನ್ನು ಹೇಳುತ್ತಾ ಕಂಪನಿಯು ಈ ಕಾರನ್ನು ನಾಲ್ಕರಿಂದ ಐದು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು ಎಂದಿದ್ದಾರೆ.