ಪ್ರಾಥಮಿಕ ಶಾಲಾ ಶಿಕ್ಷಕನಿಂದ ಶಾಸಕರಾಗುವವರೆಗೆ ಶರಣು ಸಲಗರ ಪ್ರಯಾಣ…

ಅದೃಷ್ಟ ಎಂಬುದೇ ಹೀಗೆ, ಹೇಳಿ ಕೇಳಿ ಬರುವುದಿಲ್ಲ. ಬಂದರೆ ಜಬರ್ದಸ್ತಾಗಿ ಬರುವ ಇದು ರಾತ್ರೊರಾತ್ರಿ ಎಲ್ಲೋ ಇದ್ದವರನ್ನು ಎಲ್ಲೋ ಕರೆದುಕೊಂಡು ಹೋಗಿಬಿಡುತ್ತದೆ. ಇವರನ್ನು ನೋಡಿ, 2002 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾದವರು, ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಬ್ಯಾಚ್ ಮೇಟ್ ಗಳು ಇನ್ನೂ ಶಿಕ್ಷಕರಾಗೇ ಉಳಿದಿರುವಾಗ ಇವರು ಬಿಇಓ ರವರನ್ನೇ ಕರೆದು ಮಾತಾಡಿಸುವ, ಸೂಚಿಸುವ, ಆದೇಶಿಸುವ ಮಟ್ಟಕ್ಕೆ ಬೆಳೆದುಬಿಟ್ಟರು.

2002 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಇವರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಾ ಕೂರಲಿಲ್ಲ. ಆಗ ಶಾಸಕರಾಗಿದ್ದ ರೇವೂನಾಯಕ ಬೆಳಮಗಿ ಅವರಿಗೆ ಆಪ್ತ ಸಹಾಯಕರಾಗಿ ನಿಯೋಜನೆಗೊಂಡರು. ಮುಂದೆ , 2004 ರಿಂದ 2011 ರವರೆಗೆ ಕಲಬುರ್ಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಆಪ್ತ ಸಹಾಯಕರಾಗಿ ಕೆಲಸ ಮಾಡಿದರು.

ಶಿಕ್ಷಣ ಇಲಾಖೆಗೆ ಮರಳಿ ಕಾಲೇ ಇಡದೇ ಮತ್ತೆ 2013 ರಲ್ಲಿ ಜೇವರ್ಗಿ ಶಾಸಕ ಡಾ.ಅಜೆಯ್ ಸಿಂಗ್ ರವರಿಗೆ ಪಿ.ಎ ಆಗಿ ನಿಯೊಜನೆಯಾದರು. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸದಿದ್ದರೂ 2011 ರಲ್ಲಿ ಪ್ರಮೊಷನ್ ಪಡೆದು ಪ್ರೌಢಶಾಲಾ ಶಿಕ್ಷಕರಾದರು. ಅದಾಗಿ ಮೂರು ವರ್ಷ ಮಾತ್ರ ಶಿಕ್ಷಣ ಇಲಾಖೆಯ ನೌಕರಿ ಮಾಡಿದ ಅವರು ನಂತರ 2014 ರಲ್ಲಿ ರಾಜಿನಾಮೆ ಕೊಟ್ಟು ಅಧಿಕೃತವಾಗಿ ರಾಜಕೀಯಕ್ಕೆ ಇಳಿದರು.

ಕಾಂಗ್ರೆಸ್ ಸೇರಿದ ಅವರು 2016 ರಲ್ಲಿ ಚಿಂಚನಸೂರು ಜಿಲ್ಲಾ ಪಂಚಾಯತಿಯ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೇಟ್ ಸಿಗಲಿಲ್ಲ. ಸದಾಕಾಲ ಬೆಳೆಯುವ ಬಗ್ಗೆ ಯೋಚಿಸುತ್ತಿದ್ದ ಇವರು ಅಲ್ಲಿ ಟಿಕೇಟ್ ಸಿಗದಿದ್ದಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿಜೆಪಿಗೆ ಬಂದ ಕೂಡಲೇ ವ್ಯವಸ್ಥಿತವಾಗಿ ತಳವೂರತೊಡಗಿದರು.

ಕಲಬುರ್ಗಿ ಗ್ರಾಮೀಣ ಮಂಡಲದ ಅಧ್ಯಕ್ಷರೂ ಆದರು. ಆದರೆ ಮುಂದೆ ಕಲಬುರ್ಗಿ ಗ್ರಾಮೀಣ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಮತ್ತದೇ ತಮ್ಮ ಬೆಳೆಯುವ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ತಡಮಾಡದೇ ಬಸವಕಲ್ಯಾಣ ಕ್ಷೇತ್ರಕ್ಕೆ ವಲಸೆ ಹೋದರು! ಅಲ್ಲಿ ಭರ್ಜರಿಯಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡರು.

ಎರಡೇ ವರ್ಷದಲ್ಲಿ ಸ್ಥಳಿಯ ನಾಯಕರನ್ನೆಲ್ಲ ಬದಿಗೊತ್ತಿ ಬೆಳೆದರು. ಸುಮಾರು ಹದಿನಾರು ಜನ ಪ್ರತಿಸ್ಲರ್ದಿಗಳಿದ್ದರೂ ಎಲ್ಲರನ್ನೂ ಹಿಮ್ಮೆಟ್ಟಿಸಿ ಟಿಕೇಟ್ ಪಡೆಯುವಲ್ಲಿ ಸಫಲರಾದರು. ಈಗ ಗೆದ್ದು ಬಸವಕಲ್ಯಾಣ ಕ್ಷೇತ್ರದ ಶಾಸಕ ಕೂಡ ಆದರು!

-Team Infotrend