ದೆಹಲಿ ವಿರುದ್ಧದ ಪಂದ್ಯದ ಮೊದಲು ಕೆ.ಎಲ್ ರಾಹುಲ್ ಅವರನ್ನು ಏಕೆ ಆಸ್ಪತ್ರೆಗೆ ದಾಖಲಿಸಲಾಯಿತು? ಉಳಿದ ಪಂದ್ಯಗಳನ್ನು ರಾಹುಲ್ ಆಡಲಾರ!

ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಐಪಿಎಲ್ 2021 ರಲ್ಲಿ ಪಂಜಾಬ್‌ ಪರ ಅತಿ ಹೆಚ್ಚು ರನ್ ಗಳಿಸಿದವರು. ಹಲವು ಪಂದ್ಯಗಳು ಇವರಿಂದಾಗಿಯೇ ಪಂಜಾಬ್ ಪಾಲಾಗಿವೆ. ಪಂಜಾಬ್ ತಂಡವಾದರೂ ಕನ್ನಡಿಗರೇ ತುಂಬಿರುವುದರಿಂದ ಕರ್ನಾಟಕದವರಿಗೆ ಈ ತಂಡದ ಮೇಲೆ ಕೂಡ ವಿಶೇಷ ಪ್ರೀತಿ. ತಂಡದ ಯಶಸ್ವಿ ನಾಯಕ ಕೂಡ ಆಗಿರುವ ರಾಹುಲ್ ಇವತ್ತು ಪಂದ್ಯಕ್ಕೂ ಮೊದಲೇ ಆಸ್ಪತ್ರೆ ಸೇರಿದ್ದಾರೆ.

ತೀರ ಆತಂಕಪಡುವ ವಿಷಯವಲ್ಲವಾದರೂ, ರಾಹುಲ್ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂಜಾಬ್ ಕಿಂಗ್ಸ್ ಪ್ರಕಾರ, ಶನಿವಾರ ರಾತ್ರಿ ರಾಹುಲ್ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಮತ್ತು ಔಷಧಿಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಅವರನ್ನು ಬಯೋ-ಬಬಲ್‌ ನಲ್ಲಿರುವ ಎಮರ್ಜೆನ್ಸಿ ರೂಮ್ ಗೆ ಕರೆದೊಯ್ಯಲಾಯಿತು.

ಅಲ್ಲಿಯೂ ಅವರಿಗೆ ಚಿಕಿತ್ಸೆ ನೀಡಲಾಗಲಿಲ್ಲ, ಪರೀಕ್ಷೆಯ ನಂತರ ಅವರಿಗೆ ಅಪೆಂಡಿಕ್ಸ್ ಇರುವುದು ಕಂಡುಬಂದಿದೆ. ಈಗ ಆಪರೇಶನ್ ಮೂಲಕವೇ ಗುಣಪಡಿಸಬೇಕಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ‘ಶಸ್ತ್ರಚಿಕಿತ್ಸೆಗಾಗಿ ಬಯೋ ಬಬಲ್ ನಿಂದ ಹೊರಬಂದ ರಾಹುಲ್ ಈಗ ದೀರ್ಘಕಾಲ ತಂಡದಿಂದ ದೂರ ಉಳಿಯಲೇಬೇಕು.

ಆಪರೇಶನ್ ನಂತರ ತಂಡಕ್ಕೆ ಮರಳಬೇಕೆಂದರೆ ಅಂದರೆ ಬಯೊ ಬಬಲ್ ಗೆ ಹಿಂತಿರುಗಬೇಕೆಂದರೆ ಅವರು ಕ್ವಾರಂಟೈನ್ ಆಗಬೇಕು. ಅಲ್ಲಿಗೆ ಅವರು ಈ ಐಪಿಎಲ್‌ ನ ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನ. ರಾಹುಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು, ಏಳು ಪಂದ್ಯಗಳಲ್ಲಿ 331 ರನ್ ಗಳಿಸಿದ್ದರು. ಮಾರ್ಚ್ 30 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅವರು 57 ಎಸೆತಗಳಲ್ಲಿ 91 ರನ್ ಗಳಿಸಿದ್ದರು.

ರಾಹುಲ್ ಅನುಪಸ್ಥಿತಿಯೊಂದಿಗೆ ಪ್ಲೇ-ಆಫ್ ಆಡಿದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. 2018 ರಿಂದ ಯಾವುದೇ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ರಾಹುಲ್‌ ನಷ್ಟು ರನ್ ಗಳಿಸಿರಲಿಲ್ಲ. ಈ ಅವಧಿಯಲ್ಲಿ ರಾಹುಲ್ 49 ಇನ್ನಿಂಗ್ಸ್‌ಗಳಲ್ಲಿ 2253 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ಗಳಿಸಿದ ರನ್ಗಳಲ್ಲಿ ಇದು ಶೇಕಡಾ 29.2 ಆಗಿದೆ!

ಐಪಿಎಲ್ 2020 ರಲ್ಲಿ ರಾಹುಲ್ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಈ ಋತುವಿನಲ್ಲಿ ಕೂಡ ಆರೆಂಜ್ ಕ್ಯಾಪ್ ಸ್ಪರ್ದೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ಆದರೆ ಈಗ ಅವರು ಶಸ್ತ್ರಚಿಕಿತ್ಸೆಯ ನಂತರ ಹಿಂತಿರುಗುವುದು ತುಂಬಾ ಕಷ್ಟಕರವಾಗಿದೆ. ಅಗ್ರ -4 ರ ಸ್ಥಾನದಲ್ಲಿರುವ ಪಂಜಾಬ್ ಮಾಯಾಂಕ್ ಅಗರವಾಲ್ ನಾಯಕತ್ವದಲ್ಲಿ ಆಡಲಿದೆ.
-Team Infotrend