ಬರೋಬ್ಬರಿ ನಾಲ್ಕು ಸಾವಿರ ಕೋಟಿ ಮೌಲ್ಯದ ಈ ಭವ್ಯ ಮಹಲಿನಲ್ಲಿ ಯಾರು ವಾಸಿಸುತ್ತಾರೆ ಗೊತ್ತಾ?
ಭಾರತ ದೇಶವೆಂದರೆ ಅನೇಕ ರಾಜ ಮಹಾರಾಜರು ಆಳಿದ ದೇಶ, ಈ ದೇಶವನ್ನಾಳಿದ ರಾಜ ಮಹಾರಾಜರುಗಳು ಒಬ್ಬರಿಗಿಂತ ಒಬ್ಬರು ಸಾಹಸಿಗರು ಹಾಗೂ ಒಬ್ಬರಿಗಿಂತ ಒಬ್ಬರು ಶ್ರೀಮಂತರಾಗಿದ್ದರು. ಅವರ ಆಸ್ತಿ ಪಾಸ್ತಿ ಈಗಲೂ ಸಾವಿರಾರು ಕೋಟಿ ರೂಪಾಯಿಗಳ ಲೆಕ್ಕದಲ್ಲಿಯೇ ಇದೆ. ಈಗ ಅವರ ವಂಶಸ್ಥರು ಈ ಆಸ್ತಿ ಪಾಸ್ತಿಗಳಿಗೆ ಮಾಲೀಕರಾಗಿದ್ದಾರೆ. ಇಂತಹ ಪ್ರಸಿದ್ಧ ರಾಜರುಗಳಲ್ಲಿ ಗ್ವಾಲಿಯರ್ ಪ್ರಾಂತ್ಯದ ಜಯಾಜಿರಾವ್ ಸಿಂಧಿಯಾ ಕೂಡ ಒಬ್ಬರಾಗಿದ್ದರು.
ಈ ಜಯಾಜಿರಾವ್ ಸಿಂಧಿಯಾ ಅವರೇ ಈ ಜಯವಿಲಾಸ್ ಮಹಲ್ ಎಂಬ ಬೃಹತ್ ಅರಮನೆಯನ್ನು ಕಟ್ಟಿದವರು. ಈ ಆರಮನೆ ಬರೋಬ್ಬರಿ 12 ಲಕ್ಷ ಚದುರ ಅಡಿ ವಿಸ್ತೀರ್ಣ ಇದೆ! ಬನ್ನಿ ಹಾಗಾದ್ರೆ ನೋಡೋಣ ಈ ಐಷಾರಾಮಿ ಅರಮನೆಯ ಬಗ್ಗೆ ಕೆಲವು ಸ್ವಾರಶ್ಯಕರ ಅಂಶಗಳನ್ನು…

ಮಹಾರಾಜ ಜಯಾಜಿರಾವ್ ಸಿಂಧಿಯಾರವರು ಈ ಕೋಟೆಯನ್ನು 1874 ರಲ್ಲಿ ಕಟ್ಟಿಸಿದರು. ಆ ಕಾಲದಲ್ಲಿ ಈ ಕೋಟೆ ನಿರ್ಮಾಣಕ್ಕೆ ಸರಿ ಸುಮಾರು ಒಂದು ಕೋಟಿ ರೂಪಾಯಿಗಳು ತಗುಲಿದ್ದವು! ಆದರೆ ಇಂದಿನ ದಿನ ಆ ಮಹಲಿನ ಬೆಲೆ ಬರೋಬ್ಬರಿ 4000 ಕೋಟಿ ರೂಪಾಯಿಗಳಾಗಿವೆ! ಈ ಐಷಾರಾಮಿ ಅರಮನೆಯಲ್ಲಿ ಸುಮಾರು 400 ಕೋಣೆಗಳಿವೆ!
ಜಯ್ ವಿಲಾಸ್ ಮಹಲ್ ಕೇವಲ ಸಿಂಧಿಯಾ ಮನೆತನದ ವಾಸ ಸ್ಥಾನವಷ್ಟೇ ಅಲ್ಲ ಬದಲಾಗಿ ಈ ಅರಮನೆಯ 30 ಕೋಣೆಗಳನ್ನು ವಸ್ತು ಸಂಗ್ರಹಾಲಯಗಳನ್ನಾಗಿ ಬದಲಾಯಿಸಲಾಗಿದೆ. ಈ ಮಹಲಿನ ರೂಪುರೇಷೆ ಹಾಗೂ ವಸ್ತುಗಳ ಮೇಲೆ ಇಟಲಿಯ ಪ್ರಭಾವ ಬಹಳಷ್ಟಿದೆ, ಕೇವಲ ಇಟಲಿಯಷ್ಟೇ ಅಲ್ಲದೇ ಚೀನಾ, ಫ್ರಾನ್ಸ್ ಹಾಗೂ ಇನ್ನಿತರೇ ದೇಶಗಳ ಕಲಾಕೃತಿಗಳು ಕೂಡ ಇಲ್ಲಿ ಇವೆ.

ಜಯವಿಲಾಸ್ ಮಹಲ್ ನ ವಸ್ತು ಸಂಗ್ರಹಾಲಯದಲ್ಲಿ ಎರಡು ದೊಡ್ಡ ದೊಡ್ಡ ಜೂಮರ್ ಗಳನ್ನ ಅಳವಡಿಸಲಾಗಿದೆ, ಅವುಗಳ ತೂಕವೇ ಸರಿ ಸುಮಾರು ಒಂದು ಸಾವಿರಾರು ಟನ್ ನಷ್ಟಿದೆ. ಇವುಗಳು ನೋಡುಗರನ್ನು ಆಕರ್ಷಿತಗೊಳಿಸುತ್ತವೆ. ಈ ಜೂಮರ್ ಗಳನ್ನು ಅಳವಡಿಸುವ ಮುನ್ನ ಹತ್ತು ಆನೆಗಳನ್ನು ಮಹಲಿನ ಮೇಲೆ ಹತ್ತಿಸಿ ಭಾರ ತಡೆದುಕೊಳ್ಳುವ ಪರೀಕ್ಷೆ ಮಾಡಿ ಆಮೇಲೆ ಇವುಗಳನ್ನು ಅಳವಡಿಸಲಾಯಿತಂತೆ!
ಜಯವಿಲಾಸ್ ಮಹಲಿನ ವಸ್ತು ಸಂಗ್ರಹಾಲಯದ ಇನ್ನೊಂದು ವಿಶೇಷ ಆಕರ್ಷಣಿಯ ವಸ್ತು ಎಂದರೆ, ಅದು ಆ ಮಹಲಿನ ಡೈನಿಂಗ್ ಟೇಬಲ್ ಮೇಲೆ ಇರಿಸಲಾದ ಬೆಳ್ಳಿಯ ರೈಲು. ಈ ರೈಲು ಎಲ್ಲರನ್ನೂ ಆಕರ್ಷಿತಗೊಳಿಸಲು ಕಾರಣವೇನೆಂದರೆ, ವಿಶೇಷ ಭೋಜನದ ವ್ಯವಸ್ಥೆ ಮಾಡಿದಾಗ ಈ ರೈಲು ಊಟದ ಪದಾರ್ಥಗಳನ್ನ ಹೊತ್ತು ಸಾಗುತ್ತದೆ!

ಇನ್ನು ಈ ಮಹಲಿನ ಒಳಗಡೆ ವೀಕ್ಷಣೆಗಾಗಿ ಪ್ರವೇಶ ಪಡೆಯಲು ಭಾರತೀಯ ನಾಗರಿಕರಿಗೆ ಪ್ರತಿಯೊಬ್ಬರಿಗೆ 150 ರೂಪಾಯಿ ಟಿಕೆಟ್ ಹಾಗೂ ವಿದೇಶಿಗರಿಗೆ ತಲಾ 800 ರೂಪಾಯಿ ಟಿಕೆಟ್ ನಿಗಧಿಪಡಿಸಲಾಗಿದೆ. ಅಂದಹಾಗೆ, ಸದ್ಯ ಈ ಕೋಟೆಯಲ್ಲಿ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಾಸಿಸುತ್ತಿದ್ದಾರೆ! ಇವರು ಗ್ವಾಲಿಯರ್ ಪ್ರಾಂತ್ಯದ ಕೊನೆಯ ಮಹಾರಾಜ ಜೀವಾಜಿರಾವ್ ಸಿಂಧಿಯಾರವರ ಮೊಮ್ಮಗನಾಗಿದ್ದಾರೆ.
-ಮಂಜುನಾಥ್