ಇದು 50 ವರ್ಷಗಳಲ್ಲಿ ಬರೋಬ್ಬರಿ 800 ಮಕ್ಕಳಿಗೆ ತಂದೆಯಾದ ಆಮೆ! ಬನ್ನಿ ಆ ಅಮೆಯ ಸಾಹಸದ ಬಗ್ಗೆ ತಿಳಿಯೋಣ…!

ಇತ್ತೀಚಿನ ದಿನಗಳಲ್ಲಿ ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲದಾಗಿದೆ, ಭೂಮಿಯ ಮೇಲೆ ಹುಟ್ಟಿರೋ ಪ್ರತಿಯೊಂದು ಜೀವ ಜಂತುಗಳಲ್ಲೂ ತನ್ನ ಆಹಾರವನ್ನು ಅಥವಾ ಇನ್ನಿತರೇ ವಸ್ತುಗಳನ್ನು ಹುಡುಕುತ್ತ ಪ್ರಾಣಿ ಪಕ್ಷಿ ಸಸ್ಯ ಸಂಕುಲವನ್ನೇ ನಾಶ ಮಾಡಿ ಪ್ರಕೃತಿ ಮಾತೆಗೆ ಮುಖ ತೋರಿಸುವ ಎಲ್ಲಾ ಅರ್ಹತೆಗಳನ್ನು ಕಳೆದುಕೊಳ್ಳುತ್ತಾ ಸಾಗಿದ್ದಾನೆ.

ಸದ್ಯ ಇಡೀ ಜಗತ್ತೇ ಕರೋನ ಎಂಬ ಹೆಮ್ಮಾರಿಯ ಕಾಟದಿಂದ ಬೇಸತ್ತು ಹೋಗಿದೆ, ಅಲ್ಲದೇ ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ ಕೂಡ. ಇಷ್ಟಾಗಿಯೂ ಮನುಷ್ಯನಿಗೆ ಬುದ್ದಿ ಬರುವುದು ಸಂಶಯವೇ. ಮನುಷ್ಯನ ದುರಾಸೆ ಹಾಗೂ ಕೆಲವು ಪ್ರಕೃತಿ ವಿಕೋಪಗಳು ಅಥವಾ ರೋಗ ರುಜಿನದ ಕಾರಣದಿಂದ ಎಷ್ಟೋ ಪ್ರಾಣಿ ಪಕ್ಷಿ ಹಾಗೂ ಸಸ್ಯ ಸಂಕುಲಗಳು ಪೂರ್ತಿಯಾಗಿ ನಾಶವಾಗಿ ಹೋಗಿವೆ.

ಇನ್ನೂ ಎಷ್ಟೋ ಪ್ರಾಣಿ ಪಕ್ಷಿಗಳು ಅಳಿವಿನಂಚಿನಲ್ಲಿವೆ, ಇಂತಹ ಪ್ರಾಣಿಗಳ ಪಟ್ಟಿಯಲ್ಲಿ ಭೂಮಿಯ ಮೇಲೆ ಅತ್ಯಂತ ಹೆಚ್ಚು ಜೀವಿತಾವಧಿ ಹೊಂದಿರುವ ಜೀವಿಯಾದ ಆಮೆ ಕೂಡ ಒಂದಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಡಾರ್ವಿನ್ ನ ಉಳಿವಿಗಾಗಿ ಹೋರಾಟ ಸಿದ್ದಾಂತದಂತೆ ಒಂದು ಆಮೆ ಬರೋಬ್ಬರಿ 800 ಮಕ್ಕಳಿಗೆ ಜನ್ಮ ನೀಡಲು ಕಾರಣವಾಗಿದೆ!

ಹೌದು! ಆ ಆಮೆ ಇಡೀ ಅಮೆಯ ಕುಲವನ್ನೇ ಸಂಕಷ್ಟದಿಂದ ಪಾರು ಮಾಡಿದೆ. ಕಂಪ್ಲೀಟ್ ಅಳಿದು ಹೋಗುತ್ತಿದ್ದ ತನ್ನ ತಳಿಯನ್ನು ಮತ್ತೆ ಚಿಗುರುವಂತೆ ಮಾಡಿತು. ಬನ್ನಿ ಆ ಅಮೆಯ ಸಾಹಸದ ಬಗ್ಗೆ ತಿಳಿಯೋಣ…!

ಸದ್ಯ 101 ವರ್ಷ ವಯಸ್ಸಿನ ಬರೋಬ್ಬರಿ 80 ಕೆಜಿ ತೂಗುವ ಈ ಅಮೆಯ ಹೆಸರು ಡಿಯಾಗೋ ಅಂತ. ಚಲೋನೊಏಡಿಸ್ ಹುಡೇನಸಿಸ್ ಪ್ರಜಾತಿಗೆ ಸೇರಿದ ಈ ಅಮೆಯ ಸಂತತಿ 50 ವರ್ಷಗಳ ಹಿಂದೆ ಕೇವಲ 2 ಗಂಡು ಹಾಗೂ 12 ಹೆಣ್ಣು ಅಮೆಗಳಿದ್ದವು. ಇವುಗಳು ಪ್ರಶಾಂತ ಮಹಾಸಾಗರದ ಗಾಲಾಪೋಗಸ್ ದ್ವೀಪದಲ್ಲಿ ವಾಸಿಸುತ್ತವೆ.

ಹಲವು ವರ್ಷಗಳಿಂದ ಇವುಗಳ ಸಂಖ್ಯೆಯಲ್ಲಿ ಏರಿಕೆ ಕಂಡಿರಲೇ ಇಲ್ಲ, ಹೀಗಾಗಿ ಇವುಗಳು ಅಳಿವಿನಂಚಿನಲ್ಲಿರುವ ಜಾತಿಗೆ ಸೇರಿದ್ದವು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಈ ಆಮೆಗಳ ಸಂತತಿ ಉಳಿಸಲೇಬೇಕು ಎಂದು ಪಣತೊಟ್ಟು ಪ್ರಾಣಿ ಪ್ರಿಯರು ಇವುಗಳನ್ನು 1965 ರಲ್ಲಿ ಕ್ಯಾಪಿಟಿವ್ ಬ್ರೀಡಿಂಗ್ ಪ್ರೋಗ್ರಾಮ್ ಅಡಿಯಲ್ಲಿ ದಕ್ಷಿಣ ಅಮೆರಿಕಾದ ಸಂತ ಕ್ರೂಜ್ ದ್ವೀಪದಲ್ಲಿರುವ ಒಂದು ಪ್ರಾಣಿ ಸಂಗ್ರಹಲಯಕ್ಕೆ ತಂದರು.

ಈ ಡಿಯಾಗೋ ಎಂಬ ಗಂಡು ಅಮೆಯನ್ನು ಆ ಹನ್ನೆರಡು ಹೆಣ್ಣು ಅಮೆಗಳೊಂದಿಗೆ ಬಿಡಲಾಯಿತು. ಆ ಒಂದು ಪ್ರಯತ್ನ ಯಶಸ್ವಿಯಾಗುವುದರ ಜೊತೆಗೆ ಸದ್ಯ ಆ ಆಮೆಗಳ ಸಂಖ್ಯೆ 2000 ದಾಟಿದೆ! ಹಾಗೂ ಅವುಗಳಲ್ಲಿ ಬರೋಬ್ಬರಿ 800 ಅಮೆಗಳಿಗೆ ಡಿಯಾಗೋ ಒಬ್ಬನೇ ತಂದೆಯಗಿರುವುದು ವಿಶೇಷ! ಅವನು ಒಟ್ಟು 40 ಪ್ರತಿಶತ ಈ ಅಮೆಗಳ ಸಂಖ್ಯೆ ಹೆಚ್ಚಿಸಲು ಸಹಾಯಕನಾಗಿದ್ದಾನೆ!

ಬರೋಬ್ಬರಿ 5 ದಶಕಗಳ ಕಾಲ ತನ್ನ ಸಂತತಿಯ ಉಳಿವಿನಲ್ಲಿ ಮಹತ್ತರ ಪಾತ್ರವಹಿಸಿದ ಈ ಡಿಯಾಗೋ ಅಮೆಗೆ ಕಳೆದ ವರ್ಷವಷ್ಟೇ ಪ್ರಾಣಿ ಸಂಗ್ರಹಾಲಯದಿಂದ ಬಿಡುಗಡೆಗೊಳಿಸಿ ತನ್ನ ತವರು ನೆಲವಾದ ಪ್ರಶಾಂತ ಸಾಗರದ ಗಾಲಾಪೊಗಸ್ ದ್ವೀಪಕ್ಕೆ ಬಿಡಲಾಯಿತು. ಅಲ್ಲಿ ಅದು ವಿಶ್ರಾಂತ ಜೀವನ ನಡೆಸುತ್ತಿದೆ.
-ಮಂಜುನಾಥ್