ಮುಂಬೈನ ಈ ವೈದ್ಯ ದಂಪತಿಗಳು ಕರೋನಾದಿಂದ ಚೇತರಿಸಿಕೊಂಡ ಜನರಿಂದ ಔಷಧಿ ಮಾತ್ರೆ ಸಂಗ್ರಹಿಸಿ ಏನ್ ಮಾಡ್ತಿದಾರೆ ನೋಡಿ
ಕರೋನಾದ ಎರಡನೇ ತರಂಗವು ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ಜೀವ ಹಾನಿ ಮಾಡುತ್ತಿದೆ. ಸರಕಾರಗಳು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಹೆಣಗಾಡುತ್ತಿವೆ, 138 ಕೋಟಿ ಜನಸಂಖ್ಯೆಯುಳ್ಳ ನಮ್ಮಲ್ಲಿ ಇಷ್ಟೊಂದು ಪ್ರಮಾಣದ ರೋಗಿಗಳಿಗೆ ಏಕಕಾಲಕ್ಕೆ ಚಿಕಿತ್ಸೆ ಕೊಡುವುದು ಸಾಮಾನ್ಯ ಸಂಗತಿಯಲ್ಲ. ಬರೀ ಸರ್ಕಾರ ಮಾತ್ರವಲ್ಲ ನಾವೆಲ್ಲ ಒಗ್ಗೂಡಿ ಈ ಮಹಾಮಾರಿಯ ವಿರುದ್ಧ ಹೋರಾಡಿದಾಗಷ್ಟೇ ಇದನ್ನು ನಿರ್ಮೂಲನೆ ಮಾಡಬಹುದು.
ಈ ನಿಟ್ಟಿನಲ್ಲಿ ಮುಂಬೈನ ಈ ವೈದ್ಯ ದಂಪತಿಗಳು ಜನರ ಜೀವ ಉಳಿಸಲು ವಿಶಿಷ್ಟ ಕೆಲಸಕ್ಕೆ ಕೈ ಹಾಕಿದ್ದಾರೆ. ಮುಂಬೈನ ಈ 37 ವರ್ಷದ ವೈದ್ಯ ದಂಪತಿಗಳು ಕೋವಿಡ್-19 ನಿಂದ ಚೇತರಿಸಿಕೊಂಡವರಿಂದ ಉಳಿದ ಔಷಧಿಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಅಗತ್ಯವಿರುವ ರೋಗಿಗಳಿಗೆ ಈ ಔಷಧಿಗಳನ್ನು ವಿತರಿಸುತ್ತಿದ್ದಾರೆ.
ಡಾ. ಮಾರ್ಕಸ್ ರಾನ್ನಿ ಮತ್ತು ಅವರ ಪತ್ನಿ ಡಾ. ರೈನಾ ಅವರು ‘ಮೇಡ್ ಫಾರ್ ಮೋರ್’ ಎಂಬ ಈ ಕೆಲಸ ಪ್ರಾರಂಭಿಸಿದ್ದಾರೆ. ಮೇ 1 ರಂದು ಡಾ. ಮಾರ್ಕಸ್ ರಾನ್ನಿ ಮತ್ತು ಅವರ ಪತ್ನಿ ಡಾ. ರೈನಾ, ಮೆಡ್ಸ್ ಫಾರ್ ಮೋರ್ ಉಪಕ್ರಮವನ್ನು ಪ್ರಾರಂಭಿಸಿದರು, ಉಳಿದ ಔಷಧಿಗಳನ್ನು ಕೋವಿಡ್ನಿಂದ ಚೇತರಿಸಿಕೊಂಡ ಜನರಿಂದ ಸಂಗ್ರಹಿಸುವ ಕೆಲಸ ಸುರುವಾಯಿತು.

ಸುದ್ದಿ ಸಂಸ್ಥೆ ಎಎನ್ಐ ಯೊಂದಿಗೆ ಮಾತನಾಡಿದ ಡಾ. ಮಾರ್ಕಸ್ ರಾನ್ನೆ, “ನಾವು ಈ ಕೆಲಸವನ್ನು 10 ದಿನಗಳ ಹಿಂದೆ ಪ್ರಾರಂಭಿಸಿದ್ದೇವೆ. ನಾವು ಹೌಸಿಂಗ್ ಸೊಸೈಟಿಗಳಿಂದ ಔಷಧಿಗಳನ್ನು ಸಂಗ್ರಹಿಸುತ್ತೇವೆ ಮತ್ತು ಅವುಗಳನ್ನು ಅವಶ್ಯಕತೆ ಇರುವ ಕೋವಿಡ್ ರೋಗಿಗಳಿಗೆ ಒದಗಿಸುತ್ತೇವೆ” ಎಂದು ಹೇಳಿದರು.
ಡಾ. ಮಾರ್ಕಸ್ ರಾನ್ನೆ ಮುಂದುವರಿಸುತ್ತಾ, “ನಮಗೆ ಈಗ 100 ಕಟ್ಟಡಗಳು ಔಷಧಿಗಳನ್ನು ಕಳುಹಿಸುತ್ತಿವೆ. ನಾವು ಎಂಟು ಜನರ ತಂಡವಿದ್ದು ಮತ್ತು ವಿವಿಧ ಕಟ್ಟಡಗಳಲ್ಲಿ ಸ್ವಯಂಸೇವಕರು ಇದ್ದಾರೆ. ಕಳೆದ ವಾರ ನಾವು 20 ಕಿಲೋಗ್ರಾಂಗಳಷ್ಟು ಔಷಧಿಗಳನ್ನು ಸಂಗ್ರಹಿಸಿದ್ದೇವೆ, ಅದನ್ನು ಪ್ಯಾಕ್ ಮಾಡಿ ನಮ್ಮ ಎನ್ಜಿಒಗೆ ನೀಡಲಾಗಿದೆ ಎಂದರು.
ಅವರ ಪತ್ನಿ ಡಾ.ರೈನಾ “ನಮ್ಮ ಉದ್ಯೋಗಿಯೊಬ್ಬರ ಕುಟುಂಬವು ಕೋವಿಡ್ ಸೋಂಕಿಗೆ ಒಳಗಾದಾಗ ಈ ಆಲೋಚನೆ ಬಂದಿತು. ನಿಮಗೆ ತಿಳಿದಿರುವಂತೆ ಈ ಔಷಧಿಗಳು ದುಬಾರಿಯಾಗಿವೆ ಹಾಗೂ ಕೊರತೆ ಕೂಡ ಇದೆ. ಆ ಸಮಯದಲ್ಲಿ ಕೋವಿಡ್ನಿಂದ ಚೇತರಿಸಿಕೊಂಡ ಕೆಲವರು ಇದ್ದರು, ಆದ್ದರಿಂದ ನಾವು ಅವರಿಂದ ಔಷಧಿಗಳನ್ನು ತೆಗೆದುಕೊಂಡು ಅಗತ್ಯವಿರುವವರಿಗೆ ವಿತರಿಸಲು ನಿರ್ಧರಿಸಿದೆವು” ಎಂದರು.

ಮೆಡ್ಸ್ ಫಾರ್ ಮೋರ್ ಎಲ್ಲಾ ರೀತಿಯ ಬಳಕೆಯಾಗದ ಔಷಧಿಗಳಾದ ಆ್ಯಂಟಿಬಯಾಟಿಕ್, ಫ್ಯಾಬಿಫ್ಲು, ಪೇನ್ ರಿಲೀಫ್, ಸ್ಟೀರಾಯ್ಡ್ಗಳು, ಇನ್ಹೇಲರ್ಗಳು, ವಿಟಮಿನ್ಗಳು, ಆಂಟಾಸಿಡ್ಗಳು ಇತ್ಯಾದಿಗಳನ್ನು ಸಂಗ್ರಹಿಸಿದೆ, ಇವುಗಳನ್ನು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಹೆಚ್ಚುವರಿಯಾಗಿ ಅವರು ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್ಗಳಂತಹ ಮೂಲ ವೈದ್ಯಕೀಯ ಸಾಧನಗಳನ್ನು ಸಹ ಸಂಗ್ರಹಿಸುತ್ತಿದ್ದಾರೆ. ಈ ವೈದ್ಯ ದಂಪತಿಗಳು ಚೇತರಿಸಿಕೊಂಡ ರೋಗಿಗಳಿಂದ ಕೇವಲ 10 ದಿನಗಳಲ್ಲಿ 20 ಕೆಜಿ ಬಳಕೆಯಾಗದ ಕೋವಿಡ್ -19 ಔಷಧಿಗಳನ್ನು ಸಂಗ್ರಹಿಸಿದ್ದಾರೆ.
ಈ ಔಷಧಿಗಳನ್ನು ಕೋವಿಡ್ ಸೋಂಕಿಗೆ ಒಳಗಾದ ಭಾರತದಾದ್ಯಂತದ ಗ್ರಾಮೀಣ ಜಿಲ್ಲೆಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಾನ ಮಾಡಲಾಗುವುದು. ಇವರಿಗೆ ಸಾಥ್ ಕೊಡಲು ನೆರೆಹೊರೆಯ ಕಟ್ಟಡಗಳ ನಿವಾಸಿಗಳು ಸ್ವಯಂಪ್ರೇರಣೆಯಿಂದ ಔಷಧಿಗಳನ್ನು ಸಂಗ್ರಹಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ.
-Team Infotrend