ಡ್ರೋನ್ ಗಳ ಮೂಲಕ ರೋಗಿಗಳಿಗೆ ಔಷಧಿ ಮತ್ತು ಅಗತ್ಯ ವಸ್ತುಗಳ ರವಾನೆ : ಈ ಡ್ರೋನ್ ಗಳು ಎಷ್ಟು ಭಾರ ಹೊರುತ್ತವೆ, ಎಷ್ಟು ದೂರ ಸಾಗುತ್ತವೆ ಗೊತ್ತಾ?
ಕರೋನಾ ರೋಗಿಗಳಿಗೆ ಅಗತ್ಯ ಔಷಧಿಗಳನ್ನು ತಲುಪಿಸಲು ಚೆನ್ನೈ ಮೂಲದ ಗರುಡಾ ಏರೋಸ್ಪೇಸ್ ಹೆಸರಿನ ಸ್ಟಾರ್ಟ್ಅಪ್ ಡ್ರೋನ್ಗಳ ಸಹಾಯವನ್ನು ಪಡೆಯುತ್ತಿದೆ. ಇದು ಮಾತ್ರವಲ್ಲದೆ, ಸ್ಟಾರ್ಟ್ ಅಪ್ ನ ಡ್ರೋನ್ ಕರೋನಾ ರೋಗಿಗಳಿಗೆ ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಸಹ ಕಾರ್ಯನಿರ್ವಹಿಸುತ್ತಿದೆ.
ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯು ಇಡೀ ದೇಶವನ್ನು ತಲ್ಲಣಗೊಳಿಸಿದೆ. ದೇಶದಲ್ಲಿ ಪ್ರತಿದಿನ ಸುಮಾರು 4 ಲಕ್ಷ ಹೊಸ ಕರೋನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದರೆ, ಮತ್ತೊಂದೆಡೆ ಎಲ್ಲಾ ರಾಜ್ಯಗಳು ವೈರಸ್ ಲಿಂಕ್ ಕಟ್ ಮಾಡಲು ಲಾಕ್ ಡೌನ್ ಅನ್ನು ಆಶ್ರಯಿಸುತ್ತಿವೆ.
ಎರಡನೇ ಲಾಕ್ ಡೌನ್ ನ ಈ ಸಮಯದಲ್ಲಿ, ಪಡಿತರ – ಔಷಧಿಗಳು ಮತ್ತು ಅತ್ಯಗತ್ಯ ವಸ್ತುಗಳ ಲಭ್ಯತೆಗೆ ಸಂಬಂಧಿಸಿದ ತೊಂದರೆಗಳನ್ನು ಜನರು ಎದುರಿಸುತ್ತಿದ್ದಾರೆ. ಅಂತಹ ಸಮಯದಲ್ಲಿ ಚೆನ್ನೈ ಸ್ಟಾರ್ಟ್ ಅಪ್ ತಂತ್ರಜ್ಞಾನದ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.

ಡ್ರೋನ್ ಬೆಂಬಲ :
ಗರುಡ ಏರೋಸ್ಪೇಸ್ ಎಂದು ಕರೆಯಲ್ಪಡುವ ಈ ಚೆನ್ನೈ ಮೂಲದ ಸ್ಟಾರ್ಟ್ ಅಪ್ ಕರೋನಾ ರೋಗಿಗಳಿಗೆ ಅಗತ್ಯ ಔಷಧಿಗಳನ್ನು ತಲುಪಿಸಲು ಡ್ರೋನ್ ಗಳ ಸಹಾಯವನ್ನು ಪಡೆಯುತ್ತಿದೆ. ಇದು ಮಾತ್ರವಲ್ಲದೆ, ಸ್ಟಾರ್ಟ್ ಅಪ್ ನ ಡ್ರೋನ್ ಕರೋನಾ ರೋಗಿಗಳಿಗೆ ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಸಹ ಕಾರ್ಯನಿರ್ವಹಿಸುತ್ತಿದೆ.
ಡ್ರೋನ್ ಮನೆಯಲ್ಲಿ ಐಶೋಲೇಶನ್ ನಲ್ಲಿರುವ ರೋಗಿಗಳಿಗೆ ಔಷಧಿಗಳನ್ನು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸುವುದಲ್ಲದೆ, ಆಸ್ಪತ್ರೆಗಳು ವಾರ್ಡ್ ಗಳಲ್ಲಿಯೂ ಡ್ರೋನ್ ಸಹಾಯ ಮಾಡುತ್ತಿದೆ. ಹೆಚ್ಚು ಜನರನ್ನು ಬಳಸದೇ ಸಮಸ್ಯೆ ಎದುರಿಸಲು ಡ್ರೋನ್ ಈಗ ಪ್ರಮುಖ ಸಾಧನವಾಗಿದೆ.
ಎಷ್ಟು ತೂಕ ಹೊರಬಲ್ಲವು?
ಸ್ಟಾರ್ಟ್ ಅಪ್ ಪ್ರಕಾರ, ವಿತರಣೆಗೆ ಬಳಸುವ ‘ವೈಟ್ ನೈಟ್’ ಡ್ರೋನ್ಗಳು ತಾಪಮಾನ ನಿಯಂತ್ರಿತ ಮಾಡ್ಯೂಲ್ಗಳನ್ನು ಹೊಂದಿದ್ದು, ಒಂದು ಸಲಕ್ಕೆ 35-40 ಕೆ.ಜಿ ವರೆಗೆ ಪೇಲೋಡ್ ಅನ್ನು ಸಾಗಿಸಬಲ್ಲವು. ಅಂದರೆ ಔಷಧಿ ಅಷ್ಟೇ ಅಲ್ಲ, ಅಗತ್ಯ ಪಡಿತರ ಸಾಗಿಸಲು ಕೂಡ ಇವು ಯಶಸ್ವಿಯಾಗಿ ಬಳಕೆಯಾಗಲಿವೆ.

ಎಷ್ಟು ದೂರ ಹಾರಬಲ್ಲವು?
ಜನರಿಗೆ ಔಷಧಿ, ಆಹಾರ, ಪಡಿತರ, ಇತರೆ ಅಗತ್ಯ ವಸ್ತುಗಳನ್ನು ಹೊತ್ತು ಡ್ರೋನ್ ಗಳು ಎಷ್ಟು ದೂರ ಸಾಗಬಲ್ಲವು ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ವಾಸ್ತವದಲ್ಲಿ ಈ ಡ್ರೋನ್ಗಳು ಎರಡು ಗಂಟೆಗಳ ಹಾರಾಟದ ಸಾಮರ್ಥ್ಯದೊಂದಿಗೆ ಸುಮಾರು 50–60 ಕಿ.ಮೀ ಪ್ರಯಾಣಿಸಬಲ್ಲವು!
ಮೊದಲ ಅಲೆಯಿಂದಲೇ ಸಹಾಯ ಮುಂದುವರೆದಿದೆ :
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ ನೈರ್ಮಲ್ಯೀಕರಣವನ್ನು ನಿರ್ವಹಿಸಲು ಸ್ಟಾರ್ಟ್ ಅಪ್ ಅನೇಕ ರಾಜ್ಯಗಳಿಗೆ ತಮ್ಮ ಡ್ರೋನ್ಗಳ ಮೂಲಕ ಸಹಾಯ ಮಾಡಿದೆ. ಸ್ಟಾರ್ಟ್ ಅಪ್ ಪ್ರಕಾರ, ಕರೋನಾ ಸಾಂಕ್ರಾಮಿಕದ ಮೊದಲ ಅಲೆಯೊಂದಿಗೆ ಸ್ಟಾರ್ಟ್ ಅಪ್ ತನ್ನ ಡ್ರೋನ್ ಸೇವೆಯನ್ನು ದೇಶದ ವಿವಿಧ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜನರಿಗೆ ಸಹಾಯ ಮಾಡಲು ಪ್ರಾರಂಭಿಸಿತು.
ಉತ್ತರಾಖಂಡದಲ್ಲೂ ಬಳಕೆ :
ಇತ್ತೀಚಿನ ಉತ್ತರಾಖಂಡದ ದುರಂತದ ಸಮಯದಲ್ಲಿ ಪರಿಹಾರ ರಕ್ಷಣಾ ತಂಡಗಳಿಗೆ ಸಹಾಯ ಮಾಡಲು ಸ್ಟಾರ್ಟ್ ಅಪ್ ತನ್ನ ಡ್ರೋನ್ ಗಳನ್ನು ನಿಯೋಜಿಸಿತ್ತು. ರಕ್ಷಣಾ ಸಿಬ್ಬಂದಿಗೆ ಮಾರ್ಗದರ್ಶನ ನೀಡಲು ಈ ಡ್ರೋನ್ಗಳನ್ನು ಬಳಸಲಾಗುತ್ತಿತ್ತು. ಇದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ತುಂಬಾ ಅನುಕೂಲ ಆಯಿತು.

ಇಸ್ರೋ ಸಹಾಯ ಕೇಳಿದೆ :
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರಪ್ರದೇಶದ ಸುಲ್ಲೂರ್ ಪೇಟಾ ನಗರದಲ್ಲಿರುವ ಇಸ್ರೊದ ವಸತಿ ವಸಾಹತು ಪ್ರದೇಶದಲ್ಲಿ ಡ್ರೋನ್ ಗಳನ್ನು ಬಳಸಿ ಔಷಧ ಮತ್ತು ಆಹಾರವನ್ನು ವಿತರಿಸಲು ಮನಸ್ಸು ಮಾಡಿದೆ. ಬೆಂಗಳೂರಿನ ಆಸ್ಪತ್ರೆಗಳಿಗೆ ಔಷಧಿಗಳನ್ನು ತಲುಪಿಸಲು ಈ ಸ್ಟಾರ್ಟ್ ಅಪ್ ಡ್ರೋನ್ಗಳ ಬಳಕೆಯ ಬಗ್ಗೆ ಮಾಹಿತಿ ಪಡೆದ ನಂತರ ಇಸ್ರೋ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಸರ್ಕಾರ 15 ಮಿಲಿಯನ್ ಡಾಲರ್ ನೀಡಿತು :
ಅಗ್ನಿಶ್ವರ್ ಜಯಪ್ರಕಾಶ್ ಅವರು 2015 ರಲ್ಲಿ ಸ್ಥಾಪಿಸಿದ ಗರುಡ ಏರೋಸ್ಪೇಸ್ ಡ್ರೋನ್ ಗಳನ್ನು ದೇಶದ ಅನೇಕ ವಿಪತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಬಳಸಲಾಗಿದೆ. 2020 ರಲ್ಲಿ ಕಂಪನಿಯ ಡ್ರೋನ್ ಗಳನ್ನು ಪಿಎಂ ಮೋದಿಯವರ ಸ್ವಂತ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ನೈರ್ಮಲ್ಯೀಕರಣಕ್ಕಾಗಿ ಕೂಡ ಬಳಸಲಾಯಿತು.
ಇಂಕ್ 42 ವೆಬ್ಸೈಟ್ನ ಪ್ರಕಾರ, ಕೋವಿಡ್ -19 ರೊಂದಿಗೆ ಸ್ಪರ್ಧಿಸಲು ಕೇಂದ್ರ ಸರ್ಕಾರವು 15 ಮಿಲಿಯನ್ ಡಾಲರ್ ಮೊತ್ತವನ್ನು ನಿಗದಿಪಡಿಸಿದೆ. ಗಮನಾರ್ಹ ಅಂಶವೆಂದರೆ ಜೂನ್ 2020 ರಲ್ಲಿ ದೆಹಲಿಗೆ ಪ್ರವೇಶಿಸುತ್ತಿದ್ದ ಮಿಡತೆಗಳನ್ನು ತಡೆಯಲು ಸ್ಟಾರ್ಟ್ ಅಪ್ ಸರ್ಕಾರಕ್ಕೆ ಭಾರಿ ಸಹಾಯ ಮಾಡಿತು.
-Team Infotrend