ದೇಶದಲ್ಲಿರುವ ಎಲ್ಲರಿಗೂ ಲಸಿಕೆ ಕೊಟ್ಟು ಮುಗಿಸಲು ಎಷ್ಟು ದಿನ ಬೇಕು ಗೊತ್ತಾ? ವಿವರ ಇಲ್ಲಿದೆ…

ಕೊರೋನ ಹಾವಳಿ ಮಿತಿಮೀರಿದ ಈ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವುದು ಲಸಿಕೆ ವಿಚಾರ. ಮೊದಮೊದಲು ವಿರೋಧ ಪಕ್ಷಗಳ ಟೀಕೆಗೆ ಕಿವಿಗೊಟ್ಟು ಲಸಿಕೆ ಹಾಕಿಸಿಕೊಳ್ಳದೇ ತಿರುಗಾಡಿದ ಜನರು, ಎರಡನೇ ಅಲೆ ಅಪ್ಪಳಿಸುತ್ತಲೇ ಲಸಿಕೆಗೆ ಓಡಾಡುತ್ತಿದ್ದಾರೆ. ಮೊದಲು ಲಸಿಕೆಯಿಂದ ಹಾಗಾಗುತ್ತೆ – ಹೀಗಾಗುತ್ತೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದವರು ಈಗ ಲಸಿಕೆನೇ ಸಿಗ್ತಿಲ್ಲ ಅಂತ ಪೋಸ್ಟ್ ಹಾಕಿ ಗೋಳಾಡುತ್ತಿದ್ದಾರೆ.

ಅವರ ಕಥೆ ಬಿಡಿ, ಇಂಥ ಯಾವುದೇ ವಿಷಯಗಳ ಬಗ್ಗ ತಲೆ ಕೆಡಿಸಿಕೊಳ್ಳದ ಸಾಮಾನ್ಯ ಜನರು ಇತ್ತೀಚೆಗೆ ಆಸ್ಪತ್ರೆ ಎದುರು ಲಸಿಕೆಗಾಗಿ ಕ್ಯೂ ನಿಲ್ಲುವುದು ಸಾಮಾನ್ಯವಾಗಿದೆ. ಇಷ್ಟಕ್ಕೂ ಎಲ್ಲರಿಗೂ ಲಸಿಕೆ ಯಾವಾಗ ಸಿಗುತ್ತದೆ? ಈ ಅಭಿಯಾನ ಯಾವಾಗ ಮುಗಿಯುತ್ತದೆ? ಎಂಬ ಪ್ರಶ್ನೆಗೆ ಇಲ್ಲಿವೆ ಉತ್ತರಗಳು.

ಬೃಹತ್ ಜನಂಖ್ಯೆ :
ನಮ್ಮ ದೇಶದಲ್ಲಿ ಅಂದಾಜು 138 ಕೋಟಿ ಜನಸಂಖ್ಯೆ ಇದೆ. ಅವರಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟಿವರಿಗಷ್ಟೇ ಲಸಿಕೆ ಹಾಕುತ್ತೇವೆ ಅಂದರೂ ಸುಮಾರು 100 ಕೋಟಿ ಲಸಿಕೆ ಹಾಕಬೇಕು. ಅಷ್ಟೇ ಅಲ್ಲ, ಒಬ್ಬರಿಗೆ ಎರಡು ಡೋಸ್ ಲಸಿಕೆ ಅಂದರೆ ಒಟ್ಟು 200 ಲಸಿಕೆ ಬೇಕು. ಈಗಾಗಲೇ ಕೊಟ್ಟಿರುವ ಲಸಿಕೆ ಕಳೆದು ಲೆಕ್ಕ ಮಾಡಿದರೆ, ಇದೇ ವೇಗದಲ್ಲಿ ಲಸಿಕೆ ಹಾಕಿದರೆ, ಎಲ್ಲರಿಗೂ ಲಸಿಕೆ ತಲುಪಲು ಅಂದಾಜು 3.2 ವರ್ಷಗಳು ಬೇಕು! ಅಲ್ಲಿಯವರೆಗೆ ಕೊರೋನ ಕೂಡ ಇರಲ್ಲ ಅನಿಸುತ್ತೆ!

ವೇಗ ಹೆಚ್ಚಿಸಿದರೆ :
ಇನ್ನು ಲಸಿಕೆ ನೀಡುವ ವೇಗವನ್ನು ಈಗಿರುವುದಕ್ಕಿಂತ ಹೆಚ್ಚಿಸಿದರೆ, ಅಂದರೆ ದಿನಕ್ಕೆ ಸುಮಾರು 40 ಲಕ್ಷದಷ್ಟು ಲಸಿಕೆ ನೀಡಿದರೆ ಅಂದಾಜು 468 ದಿನ ಬೇಕಾಗುತ್ತದೆ. ಅಂದರೆ ವೇಗ ಹೆಚ್ಚಿಸಿದರೂ ಎಲ್ಲರಿಗೂ ಲಸಿಕೆ ಹಾಕಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಅದಕ್ಕೆ ಕಾರಣ ನಮ್ಮ ಬೃಹತ್ ಜನಸಂಖ್ಯೆ.

ಹಾಗೆಯೇ ಪ್ರತಿನಿತ್ಯ 60 ಲಕ್ಷ ಲಸಿಕೆ ಹಾಕಿದರೆ ಸುಮಾರು 312 ದಿನ ಬೇಕು, ದಿನಕ್ಕೆ 80 ಲಕ್ಷ ಲಸಿಕೆ ಹಾಕಿದರೆ ಸುಮಾರು 234 ದಿನಗಳ ಸಮಯ ಬೇಕು. ಇನ್ನು ಪ್ರತಿದಿನ ಒಂದು ಕೋಟಿ ಡೋಸ್ ಲಸಿಕೆ ಹಾಕುವುದಾದರೆ 187 ದಿನಗಳು ಬೇಕಾಗುತ್ತವೆ‌. ಅಂದರೆ ಆರು ತಿಂಗಳ ಮೇಲೆ ಸಮಯ ಬೇಕು. ಆದರೆ ದಿನಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಲಸಿಕೆ ಹಾಕಲು ಸಾಧ್ಯವಾ, ಅದೆಲ್ಲ ಆಗುವಾ ಮಾತಾ ಅನ್ನುವುದಕ್ಕೆ ಕಾಲವೇ ಉತ್ತರಿಸಬೇಕು.

ಲಸಿಕೆ ಉತ್ಪಾದನೆ :
ಲಸಿಕೆ ಹಾಕುವ ವೇಗ ತಗ್ಗಲು ಮುಖ್ಯವಾಗಿ ಲಸಿಕೆ ಅಲಭ್ಯತೆ ಕಾರಣವಾಗಿದೆ. ಸರ್ಕಾರ ಮುಕ್ತವಾಗಿ ಉತ್ಪಾದನೆಗೆ ಇನ್ನು ಅವಕಾಶ ನೀಡಿಲ್ಲ‌. ನಮ್ಮ ದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ಲಸಿಕಾ ತಯಾರಿಕಾ ಕಂಪನಿಗಳಿವೆ, ಆದರೆ ಸದ್ಯ ಅವುಗಳಲ್ಲಿ ಐದಾರು ಕಂಪನಿಗಳು ಮಾತ್ರ ಲಸಿಕೆ ತಯಾರಿಸುತ್ತಿವೆ.

ಸರ್ಕಾರ ಲಸಿಕೆ ಉತ್ಪಾದನೆಗೆ ಮೊದಲು ಒತ್ತು ಕೊಟ್ಟು ಲಸಿಕೆ ಹಾಕುವ ಅಭಿಯಾನಕ್ಕೂ ವೇಗ ಕಲ್ಪಿಸಬೇಕು. ಇದೆಲ್ಲ ಸರ್ಕಾರ ನೀರ್ಧಾರದ ಮೇಲೆ ನಿಂತಿರುವುದರಿಂದ ನಿರ್ಧಿಷ್ಟವಾಗಿ ಇಷ್ಟೇ ದಿನದಲ್ಲಿ ಈ ಅಭಿಯಾನ ಮುಗಿಯುತ್ತದೆ ಎಂದು ಹೇಳಲಾಗುವುದಿಲ್ಲ.
-Team Infotrend