ಕೊರೋನ ಲಸಿಕೆ ಹಾಕಲು ವೈದ್ಯಕೀಯ ತಂಡ ಊರಿಗೆ ಬಂದಾಗ ಈ ಜನ ಏನು ಮಾಡಿದರು ನೋಡಿ…

ಕೊರೊನೆರಡನೇ ಅಲೆ ಭಾರತವನ್ನು ಹಣಿದು ಹಾಕಿದೆ, ಆರ್ಥಿಕವಾಗಿ – ಸಾಮಾಜಿಕವಾಗಿ ಸಾಕಷ್ಟು ಏಟು ತಿಂದಿರುವ ನಮ್ಮ ದೇಶದಲ್ಲಿ ದಿನೇ ದಿನೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೆಡೆ ಬೆಡ್ ಸಮಸ್ಯೆ, ಇನ್ನೊಂದು ಕಡೆ ಆಕ್ಸಿಜನ್ ಇವೆಲ್ಲದರಿಂದ ಹಾಗೂ ಚಿಕಿತ್ಸೆ ಪಡೆಯಲು ತಡವಾಗುವುದರಿಂದ ಸಾವಿನ ಸಂಖ್ಯೆ ಹೆಚ್ಚಿದೆ. ಇದಕ್ಕೆಲ್ಲ ಒಂದೇ ಹಾಗೂ ಒಳ್ಳೆ ಪರಿಹಾರವೆಂದರೆ ಜನ ಲಸಿಕೆ ಹಾಕಿಸಿಕೊಳ್ಳಬೇಕು.

ಯಾವಾಗ ಎರಡನೇ ಅಲೆ ಅಪಾಯಕಾರಿ ಎಂದು ಅರಿವಾಯಿತೊ ಆಗ ಜನ ಎದ್ದೊ ಬಿದ್ದೊ ಅಂತ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಮುತ್ತಿಗೆ ಹಾಕಿದರು. ದೇಶದ ಹಲವು ಕಡೆ ಲಸಿಕೆಗಾಗಿ ಉದ್ದುದ್ದ ಕ್ಯೂ ನಿಂತರು. ಎಲ್ಲ ಕಡೆ ಲಸಿಕೆ ಖಾಲಿಯಾಗಿ ಲಸಿಕೆ ಅಭಿಯಾನ ಕೂಡ ನಿಂತಿತ್ತು. ಹೀಗಿರುವಾಗ ಇದೊಂದು ಊರಿನಲ್ಲಿ ಎಲ್ಲವೂ ಉಲ್ಟಾ!

ಉತ್ತರಪ್ರದೇಶದಲ್ಲಿ ಈ ವಿಚಿತ್ರ ಕಂಡುಬಂದಿದೆ. ಲಸಿಕೆ ಹಾಕಲು ಆರೋಗ್ಯ ಇಲಾಖೆ ತಂಡ ಗ್ರಾಮವೊಂದಕ್ಕೆ ಬಂದ ಕೂಡಲೇ ಅವರಿಂದ ತಪ್ಪಿಸಿಕೊಳ್ಳಲು ಕೆಲವರು ಸರಯು ನದಿಗೆ ಹಾರಿಬಿಟ್ಟಿದ್ದಾರೆ! ಅಚ್ಚರಿಯಾದರೂ ಸತ್ಯ, ಲಸಿಕೆ ಹಾಕಿಸಿಕೊಳ್ಳುವುದೆಂದರೆ ಅವರಿಗೆ ಅಷ್ಟು ಭಯ, ಇದರಲ್ಲಿಯೇ ಲಸಿಕೆ ಬಗ್ಗೆ ಅದ್ಯಾವ ಪರಿ ಅಪಪ್ರಚಾರ ಮಾಡಲಾಗಿದೆ ಎಂಬುದು ಗೊತ್ತಾಗುತ್ತದೆ.

ಯು.ಪಿ ಯ ರಾಮ್‌ ನಗರದ ಸಿಸೋಡಾ ಗ್ರಾಮದಲ್ಲಿ ಆರೋಗ್ಯ ಇಲಾಖೆ ತಂಡ ಶನಿವಾರ ಗ್ರಾಮಸ್ಥರಿಗೆ ಕರೋನಾ ಲಸಿಕೆ ನೀಡಲು ಹೋಗಿತ್ತು. ಲಸಿಕೆ ಹಾಕಿಸಿಕೊಳ್ಳುವ ಭಯದಿಂದ ಗ್ರಾಮದ ಹೆಚ್ಚಿನ ಗ್ರಾಮಸ್ಥರು ಗ್ರಾಮದ ಹೊರಗಿನ ಸರಯು ನದಿಯ ಬಳಿ ನಿಂತಿದ್ದರು. ಆಗ ರಾಮನಗರದ ಎಸ್‌ ಡಿ ಎಂ ರಾಜೀವ್ ಶುಕ್ಲಾ ಅವರು ಹಳ್ಳಿಯಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಪರಿಶೀಲಿಸಲು ಬಂದಾಗ ಅವರನ್ನು ನೋಡಿದ ಗ್ರಾಮಸ್ಥರು ಸರಯು ನದಿಗೆ ಹಾರಿಬಿಟ್ಟರು!

ಸ್ಥಳಕ್ಕೆ ತಲುಪಿದ ಎಸ್‌ಡಿಎಂ ನದಿಯಲ್ಲಿ ಹಾರಿದ ಜನರನ್ನು ಎಲ್ಲರ ಸಹಾಯದಿಂದ ರಕ್ಷಿಸಿ ಹೊರಕರೆತಂದು ವಿಚಾರಿಸದಾಗ ಅವರಿಗೆ ಲಸಿಕೆ ಹಾಕಿಸಿಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದರು. ಸಾಕಷ್ಟು ಮನವೊಲಿಸಿದರೂ ಅವರು ಕೇಳಲಿಲ್ಲ, ಕೊನೆಗೆ ಕೇವಲ 14 ಜನರಿಗೆ ಮಾತ್ರ ಲಸಿಕೆ ನೀಡಲಾಯಿತು. ಗ್ರಾಮದಲ್ಲಿ ವೇಗವಾಗಿ ಸೋಂಕು ಹರಡುತ್ತಿರುವುದರಿಂದ ಆರೋಗ್ಯ ಇಲಾಖೆಯ ತಂಡವು ಶನಿವಾರ ಲಸಿಕೆ ನೀಡಲು ಆಗಮಿಸಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಗ್ರಾಮಸ್ಥರನ್ನು ಮನವೊಲಿಸಲು ಹೋಗಿದ್ದೆ ಆದರೆ ಅವರು ನದಿಗೆ ಹಾರಿದರು ಎಂದು ಎಸ್‌ಡಿಎಂ ರಾಜೀವ್ ಶುಕ್ಲಾ ಹೇಳುತ್ತಾರೆ. ನಂತರ ಅವರಿಗೆ ವಿವರಿಸಲಾಯಿತು, ಆದರೂ ಅವರಲ್ಲಿ ಕೇವಲ 14 ಜನರು ಮಾತ್ರ ನಮ್ಮ ಮಾತಿಗೆ ಮಣಿದು ಲಸಿಕೆ ಪಡೆಯಲು ಒಪ್ಪಿದರು ಎಂದಿದ್ದಾರೆ.

ಇದುವರಗೆ ದೇಶಾದ್ಯಂತ ಲಸಿಕೆ ಹಾಕಿಸಿಕೊಂಡಿರುವ ಕೋಟ್ಯಾಂತರ ಜನ ಎದುರಿಗಿರುವಾಗಲೂ ಜನ ಇನ್ನೂ ಯಾಕೆ ಹೆದರುತ್ತಿದ್ದಾರೋ ಗೊತ್ತಿಲ್ಲ. ಲಸಿಕೆ ಹಾಕಿಸಿಕೊಂಡವರಿಗೆ ಕೊರೋನ ಬಂದಿಲ್ಲ ಅಂತಲ್ಲ, ಬಂದಿದೆಯಾದರೂ ಜೀವಹಾನಿ ಆಗಿಲ್ಲ, ಅಲ್ಲಿಗೆ ಜೀವ ಉಳಿಸುವ ಲಸಿಕೆಯ ಉದ್ದೇಶ ಈಡೇರಿದ ಹಾಗಾಯಿತಲ್ಲ.

ಲಸಿಕೆ ಹಾಕಿಸಿಕೊಂಡ ಕೆಲವು ಫ್ರಂಟ್ ಲೈನ ವಾರಿಯರ್ಸ್ ಗೆ ಮತ್ತೆ ಕೊರೋನ ಬಂದಿದೆಯಾದರೂ, ಹೆಚ್ಚು ತೊಂದರೆ ಕೊಟ್ಟಿಲ್ಲ, ಅಂದಮೇಲೆ ಲಸಿಕೆ ತನ್ನ ಕೆಲಸ ಮಾಡುತ್ತಿದೆ ಅಂತಾಯಿತು. ಈಗಲಾದರೂ ಜನ ಅಪಪ್ರಚಾರಕ್ಕೆ ಬಲಿಯಾಗದೇ ಆರೋಗ್ಯ ಇಲಾಖೆಯಿಂದ ಲಸಿಕೆ ಪಡೆದುಕೊಳ್ಳಬೇಕು. ಮುಂದೆ ಮೋರನೆ ಅಲೆ ಬಂದಾಗ ಮಕ್ಕಳಿಗೆ ಅಪಾಯವಾಗುವ ಸಂಭವವಿದೆ, ನಮ್ಮ ಮಕ್ಕಳ ರಕ್ಷಣೆಗಾಗಿಯಾದರೂ ನಾವು ವ್ಯಾಕ್ಸಿನ್ ಪಡೆಯಬೇಕು.

ಇತ್ತೀಚೆಗೆ ಲಸಿಕೆ ಬಗ್ಗೆ ಭಯ ಹಾಗೂ ಕೆಲವರು ಮಾಡಿದ ಅಪಪ್ರಚಾರವನ್ನು ಮರೆತು ಜನ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರಾದರೂ, ಮೊದಲು ತಲೆಗೆ ಹೊಕ್ಕಿರುವ ಭಯ ಎಲ್ಲ ಕಡೆ ಇನ್ನೂ ನಿವಾರಣೆ ಆಗಿಲ್ಲ. ಹಳ್ಳಿ ಹಳ್ಳಿಯಲ್ಲೂ ಸಾವಾಗುತ್ತಿದ್ದರೂ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ.
-Team Infotrend