VIDEO : ಥೈಲ್ಯಾಂಡಿನ ಗುಹೆಯಲ್ಲಿ ಅವತ್ತು ನಡೆದ ಘಟನೆ ಜಗತ್ತಿನಾದ್ಯಂತ ಸುದ್ದಿಯಾಗಿತ್ತು! ಏನದು ರೋಚಕ ಘಟನೆ?

ಇದು 23 ಜೂನ್ 2018 ರ ಕಥೆ. 12 ಪುಟ್ಬಾಲ್ ಆಟಗಾರರು ಮತ್ತು ಅವರ ಕೋಚ್  ಜನ್ಮದಿನ ಆಚರಣೆಗೋಸ್ಕರ ಗುಹೆಯೊಂದರಲ್ಲಿ ಪ್ರವೇಶಿಸುವ ಮೂಲಕ ಇದು ಆರಂಭವಾಗುತ್ತದೆ. ಫುಟ್ಬಾಲ್ ಆಟಗಾರರೆಂದರೆ ಅವರು ದೊಡ್ಡವರಲ್ಲ, ಎಲ್ಲರೂ ಬಾಲಕರು. ಅವರಲ್ಲಿ ಕೋಚ್ ಮಾತ್ರ ಯುವಕನಾಗಿದ್ದು, ಆತನೂ ಸೇರಿದಂತೆ ಎಲ್ಲರೂ ಬರ್ಥ್ ಡೇ ಪಾರ್ಟಿ ಮಾಡಲು ಆ ಅಪಾಯಕಾರಿ ಗುಹೆ ಪ್ರವೇಶ ಮಾಡಿದ್ದರು.

ಅವರು ಒಳಗೆ ಹೋಗಿ ಅರ್ದ ಗಂಟೆ ಮೇಲಾಗಿತ್ತೆನೋ ಆಗ ಆಗಬಾರದ್ದು ಆಗತೊಡಗಿತು. ಹೊರಗೆ ಗುಡುಗು ಸಹಿತ ಭಾರಿ ಮಳೆ ಆಗತೊಡಗಿತು. ಆ ಗುಹೆಯ ರಚನೆ ಹೇಗಿತ್ತೆಂದರೆ, ಸುತ್ತಮುತ್ತಲ ಪ್ರದೇಶ, ಗುಡ್ಡದಲ್ಲಿ ಬಿದ್ದ ಮಳೆ ನೀರೆಲ್ಲ ಹರಿದು ಆ ಗುಹೆ ಸೇರಿಕೊಳ್ಳುತ್ತಿತ್ತು. ಗುಹೆ ಅಂದರೆ ಅದೇನು ಸಣ್ಣ ಗುಹೆ ಅಲ್ಲ, ಕಿ.ಮೀ ಗಟ್ಟಲೇ ಉದ್ದ ಹಾಗೂ ಭಾರಿ ಆಳದ ಗುಹೆ ಅದು.

ಒಂದು ಸಲ ಅದರೊಳಗೆ ಮಳೆ ನೀರು ಹೊಕ್ಕರೆ ಅಲ್ಲಿ ಸಣ್ಣದೊಂದು ಸಮುದ್ರವೇ ನಿರ್ಮಾಣವಾಗುತ್ತಿತ್ತು! ಅಷ್ಟೊಂದು ಗುಹೆ ಅದು. ಯಾವಾಗ ಮಳೆ ನೀರು ಒಳ ನುಗ್ಗತೊಡಗಿತೊ ಆಗ ಒಳಗಿದ್ದ ಹುಡುಗರಿಗೆ ಹೊರಬರಲು ದಾರಿ ಮುಚ್ಚಿದಂತಾಯಿತು. ಆಗ ಎಲ್ಲರೂ ಗುಹೆಯಲ್ಲಿ ಇದ್ದುದರಲ್ಲೇ ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆದರು.

ನೀರಿನ ಮಟ್ಟ ಏರುತ್ತಲೇ ಇತ್ತು. ಇತ್ತ ಮಕ್ಕಳು ಮನೆಗೆ ಬರಲಾರದ್ದರಿಂದ ಅವರ ಪಾಲಕರು ಫುಟ್ಬಾಲ್ ತರಬೇತಿ ನೀಡುವಲ್ಲಿಗೆ ಹೋಗಿ ವಿಚಾರಿಸಿದಾಗ, ಮಕ್ಕಳು ತರಬೇತಿ ಮುಗಿದಾದ ಮೇಲೆ  ಸೈಕಲ್ ತಗೆದುಕೊಂಡು ಥಾಮ್ ಲುಅಂಗ್ ಎಂಬ ಆ ಗುಹೆಯ ಕಡೆ ಹೋದರು ಎಂದು ತಿಳಿದು ಬರುತ್ತದೆ‌.

ತಕ್ಷಣ ಎಲ್ಲರೂ  ಗುಹೆಯ ಕಡೆ ಬಂದು ನೋಡಿದಾಗ ಗುಹೆಯಿಂದ ಸ್ವಲ್ಪ ದೂರದಲ್ಲಿ ಅವರ ಸೈಕಲ್ ಗಳು, ಬ್ಯಾಗ್ ಗಳು ಇರುವುದನ್ನು ನೋಡುತ್ತಾರೆ. ಅಲ್ಲಿಗೆ ಮಕ್ಕಳೆಲ್ಲ ಗುಹೆಯ ಒಳಗೆ ಹೋಗಿದ್ದಾರೆ ಎಂಬುದು ಕನ್ಫರ್ಮ್ ಆಗುತ್ತದೆ. ಆ ಪಾಲಕರಿಗೆ ಗುಹೆಯ ಅಪಾಯದ ಬಗ್ಗೆ ತಿಳಿದಿತ್ತು. ಹೀಗಾಗಿ ತಡಮಾಡದೇ ಸ್ಥಳಿಯ ಆಡಳಿತಕ್ಕೆ ವಿಷಯ ಮುಟ್ಟಿಸಿದರು.

ಅಲ್ಲಿಂದ ಸುರುವಾಯಿತು ರಕ್ಷಣಾ ಕಾರ್ಯಾಚರಣೆ. ಇದನ್ನು ಇದುವರೆಗಿನ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ ಎನ್ನಲಾಗಿದೆ. ಈ ಆಪರೇಶನ್ ಭರ್ತಿ 17 ದಿನಗಳ ನಡೆದಿದ್ದು, ಎಲ್ಲರನ್ನು ಸುರಕ್ಷಿತವಾಗಿ ಕರೆತಂದಿದ್ದು ಅತ್ಯಂತ ಯಶಸ್ವಿ ಕಾರ್ಯಾಚರಣೆ ಕೂಡ ಎನಿಸಿಕೊಂಡಿದೆ. ಅಷ್ಟು ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಹಾಗೂ ತಾಂತ್ರಿಕತೆ ಬಳಸಿದ ಕಾರ್ಯಾಚರಣೆ ಅದು.

ಇಡೀ ವಿಶ್ವದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾದ ಈ ರಕ್ಷಣಾ ಕಾರ್ಯಾಚರಣೆಯ ವರದಿ ಮಾಡಲೆಂದರೆ ವಿವಿಧ ದೇಶದ ಸಾವಿರಕ್ಕೂ ಹೆಚ್ಚು ಮಾಧ್ಯಮದವರು ಅಲ್ಲಿ ಸೇರಿದ್ದರೆಂದರೆ ಕಾರ್ಯಾಚರಣೆ ಅದ್ಯಾವ ಮಟ್ಟಿಗೆ ದೊಡ್ಡದಿತ್ತು ಎಂಬುದನ್ನು ಅಂದಾಜಿಸಿ. ಮಾಧ್ಯಮದವರು, ರಕ್ಷಣಾ ತಂಡದವರು, ಪಾಲಕರು ಎಲ್ಲರೂ ಟೆಂಟ್ ಹಾಕಿಕೊಂಡು ವಾಸವಿದ್ದರು!

ಭಾರತ, ಅಮೇರಿಕಾ, ಚೀನಾ, ಆಸ್ಟ್ರೇಲಿಯಾ, ಯುಕೆ ಸೇರಿದಂತೆ ವಿಶ್ವದ ಹಲವು ದೇಶಗಳು ಯಾವುದೇ ಸಹಾಯ ಬೇಕಿದ್ದರೂ ನಾವು ನೀಡಲು ಸಿದ್ದ ಎಂದು ಥೈಲಾಂಡ್ ಸರ್ಕಾರಕ್ಕೆ ಹೇಳಿದ್ದವು. ಅಮೆರಿಕಾ ತನ್ನ ಸೇನೆಯ ವಿಶೇಷ ತಜ್ಞರನ್ನು ಕೂಡ ಕಳಿಸಿಕೊಟ್ಟಿತ್ತು. ಸಾವಿರಾರು ಈಜುಗಾರರು, ದುಮುಕುಕೋರರು, ಸೀಲ್ ಕಮಾಂಡೋಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಆದರೆ ನಿರಂತರ ಮಳೆ ಹಾಗೂ ಹೆಚ್ಚುತ್ತಿರುವ ನೀರಿನ ಮಟ್ಟ ಅವರ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸುತ್ತಿತ್ತು. ನೀರು ಹೊಳೆ ಹರಿದಂತೆ ಗುಹೆಯೊಳಗೆ ಹರಿಯುತ್ತಿತ್ತು, ದೊಡ್ಡ ದೊಡ್ಡ ಜನರೇಟರ್ ಬಳಸಿ ತಾಸಿಗೆ ಲಕ್ಷಗಟ್ಟಲೆ ನೀರನ್ನು ಹೊರಹಾಕಲಾಯಿತಾದರೂ ಇಡೀ ದಿನ ಈ ಕೆಲಸ ಮಾಡಿದರು ನೀರು ಕಡಿಮೆಯಾಗಲಿಲ್ಲ‌.

ಕೊನೆಗೆ ಗುಹೆಗೆ ಬರುವ ನೀರಿನ ದಿಕ್ಕನು ಬದಲಿಸುವ ಸಲುವಾಗಿ ಮತ್ತೊಂದು ಕಾರ್ಯಾಚರಣೆ ಮಾಡಿ, ಅಷ್ಟು ಮಾರ್ಗಗಳನ್ನು ರೈತರ ಜಮೀನಿನ ಕಡೆ ಹೊರಳಿಸಿದರು. ಇದರಿಂದ ನೂರಾರು ಎಕರೆ ಭತ್ತದ ಗದ್ದೆ ಮುಳುಗಡೆಯಾದವು. ಹೀಗೆ ಪ್ರತಿದಿನ ಕಾರ್ಯಾಚರಣೆ ಪ್ರಗತಿಯಲ್ಲಿತ್ತು. ಆ ಬಗೆಗಿನ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ…

ಜೂನ್ 23 : ಮಕ್ಕಳು ರಾತ್ರಿ ಮನೆಗೆ ಮರಳದಿದ್ದಾಗ ಅವರ ಪೋಷಕರು ಹುಡುಕಾಟ ನಡೆಸಿದರು. ಗುಹೆಯ ಪ್ರವೇಶದ್ವಾರದಲ್ಲಿ ಬಾಲಕರ ಸೈಕಲ್‌ ಗಳು ಪತ್ತೆಯಾಗಿದ್ದು, ರಾತ್ರಿಯಲ್ಲಿಯೇ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.

ಜೂನ್ 24 : ಬೆಳಿಗ್ಗೆಯಿಂದ ಸ್ಥಳೀಯ ಆಡಳಿತ, ಪೊಲೀಸರು ಮತ್ತು ರಕ್ಷಕರ ತಂಡ ಗುಹೆಯಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಲು ಪ್ರಾರಂಭಿಸಿತು.

ಜೂನ್ 25 : ಹುಡುಗರ ಹೋದ ದಿಕ್ಕಲ್ಲೇ ಹೋಗಿ ಮಾರ್ಗ ಹೇಗಿದೆ ಎಂದು ಮತ್ತಷ್ಟು ಪರಿಶೀಲಿಸಲಾಯಿತು.

ಜೂನ್ 26 : ಥಾಯ್ ನೇವಿ ಸೀಲ್ ಸದಸ್ಯರು ಮತ್ತು ಇತರರು ರಕ್ಷಣಾ ಕಾರ್ಯದಲ್ಲಿ ಸೇರಿಕೊಂಡರು. ಗುಹೆಗೆ ಹೋಗುವ ದಾರಿಯಲ್ಲಿ ಪ್ರವಾಹ ಉಂಟಾಗಿದೆ ಎಂದು ಗೃಹ ಸಚಿವ ಅನುಪಾಂಗ್ ಪೋಜಿಂದಾ ಹೇಳಿದರು.

ಜೂನ್ 27 : ಭಾರಿ ಮಳೆಯಿಂದಾಗಿ ಅಭಿಯಾನಕ್ಕೆ ತೊಡಕಾದರೂ, ಯುಎಸ್ ಸೈನ್ಯ, ಯುಕೆ ಗುಹೆ ತಜ್ಞರು ಮತ್ತು ಗುಹೆಯ ಜ್ಞಾನವಿರುವ ಅನೇಕ ಜನರು ಈ ಆಪರೇಶನ್ ನಲ್ಲಿ ಭಾಗಿಯಾದರು.

ಜೂನ್ 28 : ಗುಹೆಯಿಂದ ನೀರನ್ನು ಹೊರತೆಗೆಯುವ ಪ್ರಯತ್ನ ಪರ್ವತದ ಹೊರಗಿನಿಂದ ಪ್ರಾರಂಭವಾಯಿತು. ಗುಹೆಯ ಇತರ ಪ್ರವೇಶದ್ವಾರಗಳ ಹುಡುಕಾಟ ಸುರುವಾಯಿತು.

ಜೂನ್ 29 : ಪ್ರಧಾನಿ ಪ್ರಯುತ್ ಚಾನ್-ಓಚಾ ಗುಹೆಗೆ ಬಂದು ಬಾಲಕರ ಸಂಬಂಧಿಕರನ್ನು ಭೇಟಿಯಾಗಿ ಧೈರ್ಯ ತುಂಬಿದರು.

ಜೂನ್ 30 : ಕಾಣೆಯಾದ ಹುಡುಗರನ್ನು ಪತ್ತೆ ಹಚ್ಚುವ ಪ್ರಯತ್ನ ಪುನರಾರಂಭ. ಆಸ್ಟ್ರೇಲಿಯಾ ಮತ್ತು ಚೀನಾ ಸೇರಿದಂತೆ ವಿಶ್ವದ ಹೆಚ್ಚಿನ ತಜ್ಞರು ರಕ್ಷಣಾ ತಂಡವನ್ನು ಸೇರಿಕೊಂಡರು.

ಜುಲೈ 1 : ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಡೈವರ್‌ ಗಳು ಗುಹೆಯೊಳಗೆ ಹೋಗುವಲ್ಲಿ ಯಶಸ್ವಿಯಾದರು.

ಜುಲೈ 2 : ಗುಹೆಯ ಬಗ್ಗೆ ತಿಳಿದಿರುವ ಇಬ್ಬರು ಬ್ರಿಟಿಷ್ ತಜ್ಞರು, ಕಾಣೆಯಾದ ಹುಡುಗರ ಸ್ಥಳ ಮತ್ತು ಅವರ ತರಬೇತುದಾರನನ್ನು ನೋಡುತ್ತಾರೆ. ಮಕ್ಕಳೊಂದಿಗೆ ಸಂಭಾಷಣೆಯ ವೀಡಿಯೊವನ್ನು ರೆಕಾರ್ಡ್ ಮಾಡಲಾಯಿತು.

ಜುಲೈ 3 : ವಿಡಿಯೋ ಬಿಡುಗಡೆ. ಮಕ್ಕಳು ತಮ್ಮ ನಡುವೆ ಮಾತನಾಡುತ್ತಿರುವುದು ಕಂಡುಬಂತು.

ಜುಲೈ 4 : ನೌಕಾಪಡೆಯ ಸೀಲ್‌ ನ ಏಳು ಸದಸ್ಯರು ಮತ್ತು ಮಕ್ಕಳಿಗೆ ಆಹಾರ ಮತ್ತು ಔಷಧಿಗಳನ್ನು ತಲುಪಿಸಲು ವೈದ್ಯರ ಅಭಿಯಾನ. ಮಕ್ಕಳನ್ನು ಹೊರತರಲು ವಿವಿಧ ಆಯ್ಕೆಗಳನ್ನು ಚರ್ಚಿಸಲಾಯಿತು.

ಜುಲೈ 5 : ಡೈವಿಂಗ್ ವಿಧಾನಗಳ ಬಗ್ಗೆ ಹುಡುಗರಿಗೆ ಹೇಳಲಾಗುತ್ತದೆ. ನೀರನ್ನು ಹೊರತೆಗೆಯುವ ಪ್ರಯತ್ನಗಳು ತೀವ್ರಗೊಂಡವು.

ಜುಲೈ 6 : ಹೆಚ್ಚಿನ ಅಪಾಯದ ಭೀತಿಯಿಂದ ಹುಡುಗರನ್ನು ಆದಷ್ಟು ಬೇಗ ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚಿಸಿದರು. ಗುಹೆಯೊಳಗೆ ಆಮ್ಲಜನಕದ ಮಟ್ಟ ಕಡಿಮೆಯಾದ ಬಗ್ಗೆ ಕಳವಳ ಹೆಚ್ಚಾಯಿತು. ಅಭಿಯಾನದ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸೀಲ್ ಸದಸ್ಯರೊಬ್ಬರು ಸಾವನ್ನಪ್ಪುತ್ತಾರೆ.

ಜುಲೈ 7 : ಹೆಚ್ಚಿನ ಮಳೆಯ ಸಾಧ್ಯತೆಯಿಂದಾಗಿ ಮುಂದಿನ ದಿನಗಳಲ್ಲಿ ಮಕ್ಕಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದರು.

ಜುಲೈ 8 : ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಡೈವರ್‌ ಗಳು ಕಿರಿದಾದ ಕಾಸ್‌ ವೇಯಿಂದ ನಾಲ್ಕು ಹುಡುಗರನ್ನು ಹೊರತಂದರು.

ಜುಲೈ 9 : ರಕ್ಷಣಾ ಕಾರ್ಯಾಚರಣೆಯ ಎರಡನೇ ದಿನ, ಇನ್ನೂ ನಾಲ್ಕು ಹುಡುಗರನ್ನು ಕರೆತರಲಾಯಿತು.

ಜುಲೈ 10 : ರಕ್ಷಣಾ ಕಾರ್ಯಾಚರಣೆಯ ಮೂರನೇ ದಿನ, ಡೈವರ್ಸ್ ಉಳಿದ ನಾಲ್ಕು ಹುಡುಗರನ್ನು ಮತ್ತು ಅವರ ತರಬೇತುದಾರರನ್ನು ಕರೆತಂದರು. ಈ ರೀತಿಯಾಗಿ ಎರಡು ವಾರಗಳಿಗಿಂತ ಹೆಚ್ಚು ಕಾಲ ನಡೆದ ಅಭಿಯಾನವು ಕೊನೆಗೊಂಡಿತು.

ಈ ಬಗ್ಗೆ ಕನ್ನಡ ಯೂಟ್ಯೂಬ್ ಚಾನೆಲ್ KANNADA TECH FOR YOU ಮಾಡಿರುವ ವಿಡಿಯೊ ಮೇಲೆ ಇದೆ, ಅಲ್ಲಿ ಇನ್ನೂ ರೋಚಕ ಮಾಹಿತಿ ಲಭ್ಯ ಇದ್ದು, ಆಸಕ್ತರು ನೋಡಬಹುದು.

-Team Infotrend