VIDEO : ಹಲವು ವಿಸ್ಮಯಗಳ ಗೂಡಾಗಿರುವ, ಬುನಾದಿಯೇ ಇಲ್ಲದ 13 ಅಂತಸ್ತಿನ ಈ ಮಂದಿರದ ನಿಗೂಢತೆ ನಿಮ್ಮನ್ನು ಅಚ್ಚರಿಗೆ ದೂಡುತ್ತದೆ, ವಿಡಿಯೊ ನೋಡಿ…

ಭಾರತವನ್ನು ದೇವಾಲಯಗಳು ಮತ್ತು ತೀರ್ಥಯಾತ್ರೆಗಳ ದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರತಿಯೊಂದು ಪ್ರದೇಶದಲ್ಲೂ ದೇವಾಲಯವಿದೆ. ಇದಕ್ಕೆ ಕಾರಣ ಭಾರತ ಮೊದಲಿನಿಂದಲೂ ಧಾರ್ಮಿಕ ಪ್ರಧಾನ ದೇಶ. ದೇವರಿಗಾಗಿ ಇಲ್ಲಿ ಎಂತೆಂಥ ದೊಡ್ಡ ದೇವಾಲಯವನ್ನು ಜನ ನಿರ್ಮಿಸಿ ಭಕ್ತಿ ಮೆರೆದಿದ್ದಾರೆ. ಇಂದು ನಿನ್ನೆಯಲ್ಲ, ಇದು ಶತಮಾನಗಳಿಂದ ನಡೆಯುತ್ತಿದೆ. ಅಂತಹ ಒಂದು ದೇವಾಲಯವು ತಮಿಳುನಾಡಿನ ತಂಜೂರಿನಲ್ಲಿದೆ.

ಈ ದೇವಾಲಯದ ಹೆಸರು ಬೃಹದೇಶ್ವರ ದೇವಸ್ಥಾನ. ತಮಿಳುನಾಡಿನ ತಂಜೂರಿನಲ್ಲಿರುವುದರಿಂದ ಇದನ್ನು ತಂಜೂರು ದೇವಾಲಯ ಎಂದೂ ಕರೆಯುತ್ತಾರೆ. ಇದನ್ನು ಕ್ರಿ.ಶ 1003-1010ರ ನಡುವೆ ಚೋಳ ದೊರೆ ರಾಜರಾಜ ಚೋಳರು ನಿರ್ಮಿಸಿದರು. ಇದನ್ನು ಅವರ ಹೆಸರಿನ ನಂತರ ‘ರಾಜರಾಜೇಶ್ವರ ದೇವಸ್ಥಾನ’ ಎಂದೂ ಕರೆಯುತ್ತಾರೆ.

ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾಗ ಈ ದೇವಾಲಯವನ್ನು ನಿರ್ಮಿಸುವ ಕನಸು ಕಂಡಿದ್ದರು ಎಂದು ಹೇಳಲಾಗುತ್ತದೆ. ಇದು ವಾಸ್ತುಶಿಲ್ಪ ಮತ್ತು ಕರಕುಶಲತೆಗೆ ವಿಶ್ವದಾದ್ಯಂತ ಪ್ರಸಿದ್ಧವಾದ ಮಂದಿರವಾಗಿದೆ. ಶಿವನಿಗೆ ಅರ್ಪಿತವಾದ ಈ ದೇವಾಲಯವು 13 ಅಂತಸ್ತಿನದ್ದಾಗಿದ್ದು, ಇದರ ಎತ್ತರ ಸುಮಾರು 66 ಮೀಟರ್! ಅಂದರೆ ಅಂದಾಜು 220 ಅಡಿ ಎತ್ತರ!

ಅಡಿಪಾಯವಿಲ್ಲದೆ ಮನೆ ನಿರ್ಮಿಸಲಾಗುವುದಿಲ್ಲ ಅಥವಾ ಯಾವುದೇ ರೀತಿಯ ಕಟ್ಟಡ ನಿರ್ಮಿಸುವುದಿಲ್ಲ. ಆದರೆ ಈ ಬೃಹತ್ ದೇವಾಲಯದ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅದು ಸಾವಿರಾರು ವರ್ಷಗಳಿಂದ ಅಡಿಪಾಯವಿಲ್ಲದೆ ನಿಂತಿದೆ! ಅಡಿಪಾಯವಿಲ್ಲದೆ ಇಷ್ಟು ವರ್ಷ ಅದು ಹೇಗೆ ಉಳಿದುಕೊಂಡಿದೆ ಎಂಬುದು ನಿಗೂಢವಾಗಿದೆ.

ಈ ದೇವಾಲಯವು ಸಂಪೂರ್ಣವಾಗಿ ಗ್ರಾನೈಟ್‌ನಿಂದ ನಿರ್ಮಿಸಲ್ಪಟ್ಟಿದೆ. ಇದು ಬಹುಶಃ ಗ್ರಾನೈಟ್‌ನಿಂದ ಮಾಡಲ್ಪಟ್ಟ ವಿಶ್ವದ ಮೊದಲ ಮತ್ತು ಏಕೈಕ ದೇವಾಲಯವಾಗಿದೆ. ಬೃಹದೇಶ್ವರ ದೇವಾಲಯದ ನಿರ್ಮಾಣದಲ್ಲಿ ಸುಮಾರು 1 ಲಕ್ಷ 30 ಸಾವಿರ ಟನ್ ಗ್ರಾನೈಟ್ ಕಲ್ಲುಗಳನ್ನು ಬಳಸಲಾಯಿತು.

ಈ ಕಲ್ಲುಗಳನ್ನು ವಿವಿಧ ಸ್ಥಳಗಳಿಂದ ತರಲು 3 ಸಾವಿರ ಆನೆಗಳ ಸಹಾಯವನ್ನು ತೆಗೆದುಕೊಳ್ಳಲಾಯಿತು. ಈ ದೇವಾಲಯವು ಭವ್ಯತೆ, ವಾಸ್ತುಶಿಲ್ಪ ಮತ್ತು ಗುಮ್ಮಟದಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೆಂದರೆ ಸ್ವರ್ಣ ಕಳಸ ಅದರ ಶಿಖರದಲ್ಲಿದೆ ಮತ್ತು ಈ ಸ್ವರ್ಣ ಕಳಸ ಇರುವ ಕಲ್ಲಿನ ತೂಕ ಸುಮಾರು 80 ಟನ್ ಎಂದು ಹೇಳಲಾಗುತ್ತದೆ, ಇದು ಒಂದೇ ಕಲ್ಲಿನಿಂದ ಮಾಡಲ್ಪಟ್ಟಿದೆ. ಅಂತಹ ಭಾರವಾದ ಕಲ್ಲನ್ನು ದೇವಾಲಯದ ಮೇಲ್ಭಾಗಕ್ಕೆ ಅಂದರೆ 200 ಅಡಿಗೂ ಹೆಚ್ಚು ಎತ್ತರ ಹೇಗೆ ಕೊಂಡೊಯ್ಯಲಾಗಿದೆ ಎಂಬುದು ಯಾರ ಊಹೆಗೂ ನಿಲುಕದ ಕೆಲಸ!

ಅಷ್ಟು ಎತ್ತರ ಆನೆ ತಲುಪಲಾರವು, ಆ ಸಮಯದಲ್ಲಿ ಯಾವುದೇ ಕ್ರೇನ್‌ ಗಳು ಇರಲಿಲ್ಲ. ಆದರೂ ಅದು ಹೇಗೆ ಅಲ್ಲಿಯವರೆಗೆ 80 ಟನ್ ತೂಕದ ಶಿಲೆಯನ್ನು ಒಯ್ದರೋ ಭಗವಂತನೇ ಬಲ್ಲ. ಇನ್ನು ಅದೆಲ್ಲದಕ್ಕಿಂತ ಅಚ್ಚರಿಯ ಸಂಗತಿಯೊಂದಿದೆ, ಅದೇನೆಂದರೆ, ಈ ಗುಮ್ಮಟದ ನೆರಳು ಭೂಮಿಯ ಮೇಲೆ ಬೀಳುವುದೇ ಇಲ್ಲ!

ಹೀಗೆ ಸಾಕಷ್ಟು ರಹಸ್ಯ – ನಿಗೂಡತೆಗಳನ್ನು ಮೈಗೂಡಿಸಿಕೊಂಡಿರುವ, ಬೃಹತ್ ಪ್ರಮಾಣದ ಇದು ಹೆಸರಿಗೆ ತಕ್ಕ ಹಾಗೆ ಬೃಹದೇಶ್ವರ ದೇವಸ್ಥಾನವೇ ಸರಿ. ಈ ಬಗ್ಗೆ ಇನ್ನೂ ಸಾಕಷ್ಟು ಮಾಹಿತಿ ನೀಡುವ ವಿಡಿಯೊ ಮೇಲಿದೆ. ಕನ್ನಡ ಯುಟ್ಯೂಬ್ ಚಾನೆಲ್ ಮೀಡಿಯಾ ಮಾಸ್ಟರ್ ನವರ ಆ ವಿಡಿಯೊದಲ್ಲಿ ಅಚ್ಚುಕಟ್ಟಾದ ಮಾಹಿತಿ ಇದೆ, ನೋಡಲು ಮರೆಯದಿರಿ…
-Team Infotrend