Articles

ತಂದೆ-ಮಗನಿಗೆ ವಿದ್ಯುತ್ ಶಾಕ್ ತಗುಲಿದ್ದನ್ನು ಕಂಡು, ತಂತಿ ಎಳೆದು ಅವರನ್ನುಳಿಸುವ ಪ್ರಯತ್ನ ಮಾಡಿದ ಸಾಕು ನಾಯಿ.. ಆದರೆ..

ಸಾಕುಪ್ರಾಣಿಗಳು ಮಾಲೀಕರಿಗಾಗಿ ತಮ್ಮ ಜೀವ ನೀಡಲು ಸಹ ಹಿಂದೆ ಮುಂದೆ ನೋಡುವುದಿಲ್ಲ. ಅದರಲ್ಲಿಯೂ ನಾಯಿಯು ಸ್ವಾಮಿನಿಷ್ಠೆಗೆ ಹಾಗೂ ಪ್ರಾಮಾಣಿಕತನಕ್ಕೆ ಹೆಸರುವಾಸಿಯಾಗಿದೆ. ಯಾಕೆಂದರೆ ಈ ರೀತಿಯ ಘಟನೆಗಳು ನಾವು ಎಷ್ಟು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಇಂಥದ್ದೊಂದು ಘಟನೆ ನೆರೆಯ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನರ್ ತಾಲೂಕಿನಲ್ಲಿ ನಡೆದಿದೆ. ಇಲ್ಲಿ ಒಂದು ಸಾಕುನಾಯಿ ತನ್ನ ಮಾಲಿಕನ ಜೀವ ಉಳಿಸುವುದಕ್ಕಾಗಿ ತನ್ನ ಜೀವವನ್ನೇ ಬಲಿ ನೀಡಿದೆ.

ತೋಟದಲ್ಲಿ ಬೆಳೆಗಳ ಮೇಲೆ ಔಷಧಿ ಸಿಂಪಡಿಸುವ ಸಲುವಾಗಿ ರೈತ ತನ್ನ ಮಗನೊಂದಿಗೆ ತೋಟಕ್ಕೆ ಹೋಗಿದ್ದಾನೆ. ಅಲ್ಲಿ ಹೋದ ನಂತರ ಇಬ್ಬರಿಗೂ ದುರದೃಷ್ಟಕರದಿಂದ ವಿದ್ಯುತ್ ತಂತಿಯ ಶಾಕ್ ತಾಗಿದೆ. ಈ ದುರ್ಘಟನೆ ನಡೆಯುತ್ತಿರುವಾಗ ತಂದೆ-ಮಗನನ್ನು ಉಳಿಸುವ ಸಲುವಾಗಿ ನಾಯಿ ವಿದ್ಯುತ್ ತಂತಿಯನ್ನು ಬಾಯಿಯಲ್ಲಿ ಹಿಡಿದು ಸೆಳೆಯುವಾಗ ಅವರ ಜೊತೆಗೆ ನಾಯಿಯೂ ಸಹ ಮೃತಪಟ್ಟಿದೆ.

ಇಲ್ಲಿಯ ತೋಟದಲ್ಲಿ ಎರಡು ದಿವಸಗಳ ಹಿಂದೆ ಜೋರಾಗಿ ಬೀಸಿದ ಗಾಳಿಗೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ತೋಟದಲ್ಲಿ ಬಿದ್ದ ವಿದ್ಯುತ್ ಕಂಬಗಳ ತಂತಿಯಲ್ಲಿ ವಿದ್ಯುತ್ ಹರಿಯುತ್ತಿತ್ತು. ಇದೇ ತಂತಿಯಲ್ಲಿ ಹರಿಯುತ್ತಿದ್ದ ವಿದ್ಯುತ್ತಿನಿಂದ ತಂದೆ ಮತ್ತು ಮಗ ಇಬ್ಬರು ಅಸುನೀಗಿದ್ದಾರೆ. ಇವರ ಜೊತೆಗೆ ನಾಯಿಯು ಸಹ ತನ್ನ ಜೀವ ಕಳೆದುಕೊಂಡಿದೆ.

ಏತನ್ಮಧ್ಯೆ ಸಂಬಂಧಪಟ್ಟ ಇಲಾಖೆಯವರು ಸರಿಯಾದ ಸಮಯದಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡದ ಕಾರಣದಿಂದ ರೈತ ತಂದೆ ಮತ್ತು ಮಗನ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

Leave a Comment

Your email address will not be published. Required fields are marked *