Articles

ಅಪರೂಪದ ಪ್ರಕರಣ : ತಾಯಿ ಕರೋನಾ ನಿಯಮಗಳನ್ನು ಉಲ್ಲಂಘಿಸಿದಳು, ಮಗ ತರಕಾರಿಗಳನ್ನು ಮುಟ್ಟುಗೋಲು ಹಾಕಿಕೊಂಡ!

ಮಹಾರಾಷ್ಟ್ರದ ಅಹ್ಮದ್‌ ನಗರ ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಗಮನ ಸೆಳೆದಿದೆ, ಸ್ಥಳೀಯ ಸಂಸ್ಥೆಗಳ ಇಲಾಖೆಯ ಉದ್ಯೋಗಿಯೊಬ್ಬರು ಸಾಂಕ್ರಾಮಿಕ ನಿಯಮಗಳನ್ನು ಉಲ್ಲಂಘಿಸಿ ಕೈಗಾಡಿಯಲ್ಲಿ ಮಾರಾಟ ಮಾಡುತ್ತಿದ್ದ ತನ್ನ ತಾಯಿಯ ತರಕಾರಿಗಳನ್ನು ವಶಪಡಿಸಿಕೊಂಡಿದ್ದಾರೆ! ಈಗಿನ ಕಾಲದಲ್ಲಿ ಹೀಗೂ ಉಂಟೆ ಎಂದು ಜನ ಹುಬ್ಬೇರಿಸಿದ್ದಾರೆ. ಇದೊಂಥರ ಸಿನಿಮೀಯ ಘಟನೆಯ ಹಾಗಿದೆ.

ಉದ್ಯೋಗಿ ರಶೀದ್ ಶೇಖ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರು ಪಥಾರ್ಡಿ ಪಟ್ಟಣದ ತಮ್ಮ ಮನೆಯ ಬಳಿ ನಿಲ್ಲಿಸಿದ್ದ ಕೈಗಾಡಿಯಲ್ಲಿನ ತರಕಾರಿ ವಶಪಡಿಸಿಕೊಂಡು ಪುರಸಭೆಯ ವಾಹನಕ್ಕೆ ಹಾಕಿದರು. ಶೇಖ್ ಪಥಾರ್ಡಿ ಮುನ್ಸಿಪಲ್ ಕೌನ್ಸಿಲ್ನ ಉದ್ಯೋಗಿಯಾಗಿದ್ದಾರೆ.

ಕೊರೋನ ಕಾರಣದಿಂದಾಗಿ ಇಂಥ ವ್ಯಾಪಾರಕ್ಕೆ ನಿಷೇಧವನ್ನು ವಿಧಿಸಲಾಗಿದೆ. ತರಕಾರಿ ಮಾರುವವರು ಅಲೆದಾಡುತ್ತಾ ಮಾರಬೇಕೇ ಹೊರತು ಒಂದೇ ಕಡೆ ನಿಲ್ಲಿಸಿಕೊಂಡು ಮಾರುವ ಹಾಗಿಲ್ಲ, ಅಂದರೆ ಅಂಗಡಿ ಹಾಕುವಂತಿಲ್ಲ. ಇದರಿಂದ ಒಂದೇ ಕಡೆ ಹೆಚ್ಚು ಜನ ಸೇರುತ್ತಾರೆ, ಇದನ್ನು ತಪ್ಪಿಸಬೇಕು ಎಂಬುದು ಮುನ್ಸಿಪಲ್ ಉದ್ದೇಶ.

ಆದರೆ ಶೇಖ್ ತಾಯಿ ಮನೆ ಬಳಿಯೇ ಒಂದೇ ಸ್ಥಳದಲ್ಲಿ ಅಂಗಡಿ ಸ್ಥಾಪಿಸಿದ್ದರು. ಅವರು ತಮ್ಮ ತಾಯಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ ಎನ್ನಲಾಗಿದೆ. ನಾನು ನನ್ನ ತಾಯಿಗೆ ಎಚ್ಚರಿಕೆ ನೀಡಿದ್ದೇನೆ ಮತ್ತು ತರಕಾರಿಗಳನ್ನು ಸುತ್ತಲೂ ಅಡ್ಡಾಡಿ ಮಾರಾಟ ಮಾಡಬೇಕೆಂದು ಹೇಳಿದ್ದೇನೆ ಎಂದು ಶೇಖ್ ಅವರು ಹೇಳಿದರು.

ನಮ್ಮ ಅಭಿಯಾನದ ಸಮಯದಲ್ಲಿ, ನನ್ನ ತಾಯಿ ನಮ್ಮ ಮನೆಯ ಹೊರಗೆ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಬಂಡಿಯನ್ನು ನಿಲ್ಲಿಸಿ ಅಲ್ಲಿಯೇ ಮಾರುತ್ತಿದ್ದುದನ್ನು ನಾನು ನೋಡಿದೆ. ನಿಯಮಗಳನ್ನು ಉಲ್ಲಂಘಿಸಿದವರನ್ನು ಬಿಡಲಾಗುವುದಿಲ್ಲ, ಈ ಬಗ್ಗೆ ಬಲವಾದ ಸಂದೇಶವನ್ನು ನೀಡಲು ನಾನು ಕ್ರಮ ಕೈಗೊಂಡು ತರಕಾರಿಗಳನ್ನು ಮುಟ್ಟುಗೋಲು ಹಾಕಿಕೊಂಡೆ ಎಂದಿದ್ದಾರೆ.

ಈ ಅಭಿಯಾನದಲ್ಲಿ ಶೇಖ್ (36) ರನ್ನು ಸೇರಿಸಲಾಗಿದ್ದು, ಕರೋನಾ ನಿಯಮಗಳನ್ನು ಉಲ್ಲಂಘಿಸುವ ಉದ್ಯಮಿಗಳು ಮತ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಈ ಕ್ರಮವನ್ನು ಪಥಾರ್ಡಿ ಮುನ್ಸಿಪಲ್ ಕೌನ್ಸಿಲ್ ಮುಖ್ಯ ಅಧಿಕಾರಿ ಧನಂಜಯ್ ಕೋಲೆಕರ್ ಶ್ಲಾಘಿಸಿದ್ದಾರೆ. ಕೆಲವರು ಇದನ್ನು ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಎನ್ನುತ್ತಿದ್ದಾರೆ.
-Team Infotrend

Leave a Comment

Your email address will not be published. Required fields are marked *