ಓಲಾ ಕಂಪನಿಯ ಹೊಸ ಸ್ಕೂಟರ್ ಗಳು ಶೀಘ್ರದಲ್ಲೇ ಮಾರುಕಟ್ಟೆಗೆ: ಕೇವಲ 15 ಸಾವಿರ ಪಾವತಿಸಿ ಇಲೆಕ್ಟ್ರಿಕ್ ಸ್ಕೂಟರ್ ಮನೆಗೆ ತನ್ನಿ!
ಓಲಾ ಎಲೆಕ್ಟ್ರಿಕ್ ತನ್ನ ಮೊದಲ ದ್ವಿಚಕ್ರವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಕಂಪನಿಯು ಸ್ಕೂಟರ್ ನ ಜೊತೆಗೆ ವಿಶ್ವದ ಅತಿ ದೊಡ್ಡ ಚಾರ್ಜಿಂಗ್ ನೆಟ್ವರ್ಕ್ ಸ್ಥಾಪನೆಯನ್ನು ಮಾಡುವ ನಿರ್ಧಾರವನ್ನು ಕೂಡಾ ಮಾಡಿದೆ. ಓಲಾ ಕಂಪನಿಯು ಇದೇ ವರ್ಷದ ಜುಲೈನಲ್ಲಿ ತನ್ನ ದ್ವಿ ಚಕ್ರ ವಾಹನವನ್ನು ಮಾರುಕಟ್ಟೆಗೆ ತರಲಿದ್ದು, ಅತಿಶೀಘ್ರದಲ್ಲೇ ಹೊಸ ಸ್ಕೂಟರ್ ರಸ್ತೆಗಿಳಿಯಲಿದೆ ಎಂದು ತಿಳಿಸಿದೆ. ಓಲಾ ಕಳೆದ ವರ್ಷ ತಮಿಳುನಾಡಿನಲ್ಲಿ ತನ್ನ ಮೊದಲ ದ್ವಿಚಕ್ರ ವಾಹನ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸುವ ವಿಚಾರವನ್ನು ಘೋಷಣೆ ಮಾಡಿತ್ತು. ಓಲಾ ಸಮೂಹದ ಸಿಇಓ ಈ ವರ್ಷ ಜೂನ್ ಅಂತ್ಯದ ವೇಳೆಗೆ ತಮ್ಮ ಕಾರ್ಖಾನೆಯನ್ನು ಪ್ರಾರಂಭಿಸುವ ಎಲ್ಲಾ ಕೆಲಸಗಳನ್ನು ಸಂಪೂರ್ಣ ಮಾಡುವುದಾಗಿ ತಿಳಿಸಿದರು..
ಅವರು ತಿಳಿಸಿದಂತೆ ಈ ವರ್ಷ ಜೂನ್ ಕೊನೆಯ ವೇಳೆಗೆ ಫ್ಯಾಕ್ಟರಿ ಕೆಲಸಗಳಲ್ಲೆವೂ ಮುಗಿದಿದ್ದು ಜುಲೈನಲ್ಲಿ ಓಲಾ ದ್ವಿಚಕ್ರ ವಾಹನಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಇತ್ತೀಚಿಗಷ್ಟೇ ಓಲಾ ಕಂಪನಿಯ ಸಿಇಓ ಆಗಿರುವ ಭಾವೀಶ್ ಅಗರ್ವಾಲ್ ಅವರು ತಮ್ಮ ಕಾರ್ಖಾನೆಯಲ್ಲಿ ತಯಾರಾದಂತಹ ದ್ವಿಚಕ್ರ ವಾಹನದಲ್ಲಿ ಸವಾರಿಯನ್ನು ಮಾಡಿದ್ದರು. ಅವರು ಸ್ಕೂಟರ್ ರೈಡ್ ಮಾಡುವ ಜೊತೆಗೆ ಈ ಹೊಸ ಸ್ಕೂಟರ್ ಗುಣ ವಿಶೇಷಣಗಳ ಕುರಿತಾಗಿ ಒಂದಷ್ಟು ಮಾಹಿತಿಯನ್ನು ಸಹ ನೀಡಿದ್ದರು.

ಅವರು ಸ್ಕೂಟರ್ ಸವಾರಿ ಮಾಡುತ್ತಿದ್ದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡ ಮೇಲೆ ಆ ವಿಡಿಯೋ ಬಹಳಷ್ಟು ವೈರಲ್ ಆಗಿತ್ತು. ಈಗ ಅತಿ ಶೀಘ್ರದಲ್ಲೇ ಹೊಸ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಕಳೆದ ವರ್ಷ ಓಲಾ ಮಾಡಿದ ಘೋಷಣೆಯಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಯ ಕಾರ್ಖಾನೆಯ ಕೆಲಸ ಸಂಪೂರ್ಣವಾಗುತ್ತಲೇ 20 ಸ್ಕೂಟರ್ ಗಳ ತಯಾರಿಕೆಯನ್ನು ಮಾಡುವುದಾಗಿ ತಿಳಿಸಿತ್ತು. ಇದರ ಜೊತೆಗೆ ವರ್ಷವೊಂದಕ್ಕೆ 2000000 ಸ್ಕೂಟರ್ ಗಳನ್ನು ತಯಾರಿಸುವ ವಿಶ್ವದ ಮೊಟ್ಟ ಮೊದಲ ಕಂಪನಿಯಾಗುವುದಾಗಿ ಅದು ಹೇಳಿತ್ತು.
ಓಲಾ ಕಂಪನಿಯಲ್ಲಿ 10,000 ಜನರಿಗೆ ಉದ್ಯೋಗಾವಕಾಶಗಳು ದೊರೆಯುವುದು ಎಂದು ಹೇಳಿತ್ತು. ಓಲಾ ಇದೇ ವೇಳೆ ತಮ್ಮ ಚಾರ್ಜಿಂಗ್ ನೆಟ್ವರ್ಕ್ ವಿಶ್ವದಲ್ಲೇ ಅತಿ ದೊಡ್ಡ ನೆಟ್ವರ್ಕ್ ಆಗಲಿದೆ ಎಂದೂ, ಚಾರ್ಜಿಂಗ್ ನೆಟ್ವರ್ಕ್ ದೇಶದ 400 ನಗರಗಳಲ್ಲಿ ಸಕ್ರಿಯವಾಗಲಿದ್ದು, ಅವುಗಳಲ್ಲಿ 100000 ಚಾರ್ಜಿಂಗ್ ಪಾಯಿಂಟ್ ಗಳನ್ನು ಅಳವಡಿಸಲಾಗುವುದು ಎಂದು ಹೇಳಿತ್ತು. ಇನ್ನು ಕಂಪನಿಯು ತನ್ನ ಸ್ಕೂಟರ್ ನ ಬೆಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಆದರೆ ಬಲ್ಲಮೂಲಗಳ ವರದಿಯ ಪ್ರಕಾರ ಇ ಸ್ಕೂಟರ್ ಬಜಾಜ್ ಚೇತಕ್ ನೊಡನೆ ಸ್ಪರ್ಧೆಗೆ ಇಳಿಯಲಿದೆ ಎನ್ನಲಾಗಿದೆ. ಆದ ಕಾರಣ ಓಲಾದ ಸ್ಕೂಟರ್ ನ ಬೆಲೆಯನ್ನು ಚೇತಕ್ ಗೆ ಸಮನಾದ ಬೆಲೆಯನ್ನು ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ನಿರ್ಧರಿಸಿ ಮಾರಾಟ ಮಾಡಲಾಗುವುದು ಎಂದು ಊಹಿಸಲಾಗಿದೆ. ಕಂಪನಿಯು ಇದು ಭಾರತದ ಅತ್ಯುತ್ತಮ ಸ್ಕೂಟರ್ ಆಗಿಲಿದೆ ಎಂದು ಹೇಳಿದ್ದು, ಈ ಸ್ಕೂಟರ್ ಬೆಲೆ ಕನಿಷ್ಠ 1 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ