Viral Video: ಮಿತಿಮೀರಿ ಲೋಡ್ ಮಾಡಿದ ಟ್ರಕ್; ಮತ್ತೊಂದು ಟ್ರಕ್ ಹತ್ತಿರ ಬರುತ್ತಲೇ…

ರಸ್ತೆಗಳಲ್ಲಿ ಸಂಚಾರ ಮಾಡುವಾಗ ನಮಗೆ ನೋಡೋಕೆ ಏನು ಕಾಣುತ್ತೆ? ಏನು ಇಂತ ಸಿಲ್ಲಿ ಪ್ರಶ್ನೆ ಅನ್ಕೊಳ್ತೀರಾ. ನಿಜವಾಗಲೂ ಇದು ಸಿಲ್ಲಿ ಅಲ್ಲ. ಸ್ವಲ್ಪ ಯೋಚನೆ ಮಾಡಿ ನೋಡಿ, ಸಾಮಾನ್ಯವಾಗಿ ನಾವು ನಗರ ವಾಸಿಗಳಾದರೆ ನಮ್ಮ ಕಣ್ಣಿಗೆ ಕಾಣೋದು ಟ್ರಾಫಿಕ್ ಜಾಮ್ ಗಳು, ಬಸ್ ನಿಲ್ದಾಣಗಳಲ್ಲಿ ನಿಂತಿರುವ ಜನರು, ಫುಟ್ ಪಾತ್ ಗಳಲ್ಲಿ ಓಡಾಡ್ತಾ ಇರೋ ಜನರು, ರಂಗು ರಂಗಾದ ಬಟ್ಟೆಗಳನ್ನು ಧರಿಸಿರುವ ಜನರು ಹಾಗೂ ಆಧುನಿಕ ವಾಹನಗಳು ಮಾತ್ರವೇ ಅಲ್ಲದೇ ಕಸ, ಧೂಳು, ರಸ್ತೆ ಬದಿಯಲ್ಲಿನ ಭಿಕ್ಷುಕರು ಹೀಗೆ ಮನಕ್ಕೆ ಬೇಸರ ಮೂಡಿಸುವ ದೃಶ್ಯಗಳು , ಕೆಲವೊಮ್ಮೆ ಅಪಘಾತಗಳು ಕೂಡಾ ಕಾಣುತ್ತವೆ. ಇವು ಬಿಟ್ಟು ಇನ್ನೇನು ನೋಡಲು ಸಾಧ್ಯ ಅಲ್ಲವೇ?

ಇನ್ನು ನಗರಗಳಿಂದ ಹೊರ ವಲಯಗಳಲ್ಲಿ ಗ್ರಾಮಗಳು ಅಥವಾ ಗುಡ್ಡ ಗಾಡು, ಮಲೆನಾಡು ವಲಯ ಗಳ ಕಡೆ ಬಂದರೆ ತಂಪಾದ ಹಸಿರು ಪ್ರಕೃತಿಯು ನಮ್ಮ ಮೈಮನ ಸೆಳೆದು, ಮನಸ್ಸಿಗೆ ಒಂದು ಮುದವನ್ನು ನೀಡುವುದರ ಜೊತೆಗೆ ಒಂದು ಆಹ್ಲಾದಕರವಾದ ಅನುಭೂತಿ ನೀಡುತ್ತದೆ. ಆದರೆ ನೀವು ನಂಬುವಿರೋ ಬಿಡುವಿರೋ ಕೆಲವೊಮ್ಮೆ‌ ನಗರಗಳ ರಸ್ತೆ ಗಳಲ್ಲಿ ಕೂಡಾ ಕೆಲವೊಂದು ವಿಶೇಷ ಎನಿಸುವ ದೃಶ್ಯಗಳು ನೋಡಲು ಸಿಗುತ್ತವೆ. ವಿಚಿತ್ರವಾದ ಆ ದೃಶ್ಯಗಳು ನೋಡಲು ಖುಷಿ ಕೊಟ್ಟರೂ ಕೂಡಾ‌ ಅದೇ ಸಮಯದಲ್ಲಿ ಅದು ಭಯವನ್ನು ಕೂಡಾ ಹುಟ್ಟಿಸುತ್ತದೆ.‌

ಸಾಮಾಜಿಕ ಜಾಲತಾಣಗಳಲ್ಲಿ ಅಂತಹುದೇ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೀಡಿಯೋ ಹಳೆಯದಾಗಿರಬಹುದು ಅಥವಾ ಹೆಚ್ಚಿನ ಜನರಿಗೆ ಇದರಲ್ಲೇನಿದೆ ವಿಶೇಷ ಎನಿಸಬಹುದು. ಆದರೆ ಅದು ವಾಸ್ತವವಾಗಿ ಸಾಮಾನ್ಯದಲ್ಲೊಂದು ವಿಶೇಷವಾದ ವೀಡಿಯೋ ಎಂಬುದಕ್ಕೆ ಸಾಕ್ಷಿಯಾಗಿರುವುದು ಅದನ್ನು ನೋಡಿದವರ ಸಂಖ್ಯೆ ಮತ್ತು ಪ್ರತಿಕ್ರಿಯೆಗಳನ್ನು ನೀಡಿರುವವರ ಸಂಖ್ಯೆ. ಹಾಗಾದರೆ ಈ ವೀಡಿಯೋದಲ್ಲಿ ಏನಿದೆ? ಅಂತೀರಾ. ವೀಡಿಯೋದಲ್ಲಿ ಟ್ರಕ್ ಒಂದು ನಗರದ ರಸ್ತೆಯಲ್ಲಿ ಸಂಚರಿಸುತ್ತಿದೆ. ಈ ಟ್ರಕ್ ಸಾಮಾನ್ಯ ಎನಿಸಿದರೂ ಅದರ ಮೇಲಿನ ಲೋಡ್ ನೋಡಿದರೆ ಅಬ್ಬಾ!!! ಏನಿದು? ಅನಿಸದೇ ಇರಲಾರದು.

ವಿಡಿಯೋ ನೋಡಿ……

ಅದು ಓವರ್ ಲೋಡ್ ಎನ್ನುವುದರಕ್ಕಿಂತ ಅತಿ ತೀವ್ರವಾದ ಲೋಡ್ ಎನ್ನಬಹುದು. ಟ್ರಕ್ ಮೇಲೆ ಹೆಚ್ಚಿನ ಲೋಡ್ ನಿಂದಾಗಿ ಒಂದು ಕಡೆಗೆ ಲೋಡ್ ಹಾಕಿರುವ ಮೂಟೆಗಳು ವಾಲಿಕೊಂಡಿವೆ. ಸಾಲದಕ್ಕೆ ಮೂಟೆಗಳು ಒಡೆದು ಅದರೊಳಗಿಂದ ಧೂಳಿನಂತ ವಸ್ತು ಹೊರಕ್ಕೆ ಸುರಿಯುತ್ತಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಮಂದಿ ಈ ವೀಡಿಯೋ ವೀಕ್ಷಣೆ ಮಾಡಿದ್ದು, ಸಾವಿರದ ಐನೂರಕ್ಕಿಂತ ಅಧಿಕ ಕಾಮೆಂಟ್ ಗಳು ಬಂದಿವೆ. ವೀಡಿಯೋ ನೋಡಿದವರು ಯಾರ್ಯಾರು ಟ್ರಕ್ ಉರುಳುವುದಕ್ಕೆ ಕಾಯುತ್ತಿರುವಿರಿ? ಅಪಾಯಕಾರಿ ಇದು, ಪೋಲಿಸರು ಏಕೆ ಕ್ರಮ ಕೈಗೊಂಡಿಲ್ಲ, ಇದು ಭಾರತ, ಈ ಟ್ರಕ್ ಅನ್ನು ಓವರ್ ಟೇಕ್ ಮಾಡೋಕೆ ಧೈರ್ಯ ಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.