ಕದಿಯಲು ಹೋದ ಕಳ್ಳ ಮನೆ ಮಾಲಿಕರ ಮಗಳ ರೂಮ್ ನಲ್ಲಿ ಮಲಗಿ ನಿದ್ರೆಗೆ ಜಾರಿಬಿಟ್ಟ! ನಂತರ ಆಗಿದ್ದೆಲ್ಲ ತಮಾಷೆ
ನೀವು ಆಗಾಗ್ಗೆ ಕಳ್ಳತನದ ವಿವಿಧ ಪ್ರಕರಣಗಳನ್ನು ನೋಡುತ್ತೀರಿ. ಆದರೆ ಇಂದು ನಾವು ನಿಮಗೆ ಹೇಳಲಿರುವ ಪ್ರಕರಣ ನಿಮಗೆ ಆಶ್ಚರ್ಯ ಮತ್ತು ನಗು ತರಿಸುತ್ತದೆ. ಕಳ್ಳತನದ ವಿಚಿತ್ರ ಘಟನೆಯೊಂದು ಥೈಲ್ಯಾಂಡ್ನಲ್ಲಿ ಬೆಳಕಿಗೆ ಬಂದಿದೆ, ಇದರಲ್ಲಿ ಕಳ್ಳನು ಕದಿಯುವ ಉದ್ದೇಶದಿಂದ ಮನೆಯೊಂದನ್ನು ಪ್ರವೇಶಿಸಿದನು, ಆದರೆ ಎಸಿಯನ್ನು ನೋಡಿದ ನಂತರ ಅವನು ಮಲಗಿಕೊಂಡು ನಿದ್ರೆಗೆ ಜಾರಿಬಿಟ್ಟ! ಆ ಕೊಠಡಿ ಮನೆಯ ಮಾಲೀಕರ ಮಗಳದ್ದಾಗಿತ್ತು.
TheTiger ಡಾಟ್ com ನ ವರದಿಯ ಪ್ರಕಾರ, ಈ ಘಟನೆ ಥೈಲ್ಯಾಂಡ್ ನ ಮಧ್ಯ ಭಾಗದಲ್ಲಿ ಸಂಭವಿಸಿದೆ. 22 ವರ್ಷದ ಯುವಕನೊಬ್ಬ ರಾತ್ರಿ 2 ಗಂಟೆಗೆ ಕದಿಯುವ ಉದ್ದೇಶದಿಂದ ಮನೆಯೊಂದನ್ನು ಪ್ರವೇಶಿಸಿದನು, ಆದರೆ ಅಲ್ಲಿ ನಿದ್ರೆ ಬಂದಂತಾಯಿತು. ಸ್ವಲ್ಪ ಹೊತ್ತು ಮಲಗಿ ಏಳೋಣ ಅಂತ ಅವನು ಕೋಣೆಯ ಎಸಿಯನ್ನು ಆನ್ ಮಾಡಿ ಬೆಡ್ ಮೇಲೆ ಉರುಳಿದ.
ಮತ್ತೆ ಅವನಿಗೆ ಎಚ್ಚರವಾಗಿದ್ದು ಬೆಳಿಗ್ಗೆ ಸೂರ್ಯೋದಯವಾದ ಮೇಲೆ! ಮನೆಯ ಮಾಲೀಕರು ಕೋಣೆಯ ಎಸಿ ಆನ್ ಆಗಿರುವುದನ್ನು ನೋಡಿದರು. ಅದು ಅವರ ಮಗಳ ಕೋಣೆಯಾಗಿದ್ದು ಅವರ ಮಗಳು ಊರಲ್ಲಿರಲಿಲ್ಲ, ಆದರೂ ಅದರಲ್ಲಿ ಯಾರೋ ಮಲಗಿದ್ದನ್ನು ಕಿಟಕಿಯ ಮೂಲಕ ನೋಡಿದಾಗ ಆಶ್ಚರ್ಯವಾಯಿತು. ಅದು ಯಾರೋ ಅಪರಿಚಿತ ನಾಗಿದ್ದ. ತಕ್ಷಣ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಕೊಠಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಬಂದು ಎಬ್ಬಿಸಿದಾಗಲೇ ಆ ಕಳ್ಳನಿಗೆ ಎಚ್ಚರವಾಗಿದ್ದು! ಅವನು ಎಚ್ಚರಗೊಂಡಾಗ ಅವನ ಪ್ರತಿಕ್ರಿಯೆ ಹೇಗಿತ್ತು ಎಂಬುದು ಮಾತಲ್ಲಿ ಬಣ್ಣಿಸುವುದು ಆಗುವುದಿಲ್ಲ. ಮೊದಲು ತಾನು ಯಾರು – ತಾನರಲ್ಲಿ ಇದ್ದೇನೆ ಎಂದು ಬಡಬಡಿಸಿದ! ನಂತರ ತಾನು ಅಲ್ಲಿ ಹೇಗೆ ಬಂದೆ – ಯಾಕಾಗಿ ಬಂದೆ ಎಂದು ಗೊತ್ತಾಗುತ್ತಿಲ್ಲ ಅಂತ ನಾಟಕ ಮಾಡಿದ, ಕೊನೆಗೆ ಕಳ್ಳತನದ ಉದ್ದೇಶದಿಂದ ತಾನು ಅಲ್ಲಿಗೆ ಬಂದಿದ್ದು ಎಂದು ಒಪ್ಪಿಕೊಂಡ.
ರಾತ್ರಿಯೇ ಮನೆಯ ಬೆಲೆಬಾಳುವ ವಸ್ತುಗಳನ್ನೆಲ್ಲ ಕದ್ದು ಪ್ಯಾಕ್ ಮಾಡಿದ್ದ. ನಂತರ ಶರ್ಟ್ ಬಿಚ್ಚಿ ಎಸಿ ರೂಮ್ ನಲ್ಲಿ ಸ್ವಲ್ಪ ರೆಸ್ಟ್ ಮಾಡಿ ಎಸ್ಕೇಪ್ ಆಗುವ ಅಂದುಕೊಂಡಿದ್ದ, ಆದರೆ ಗಡದ್ದಾಗಿ ನಿದ್ದೆ ಮಾಡಿಬಿಟ್ಟ. ಸಧ್ಯ ಪೊಲೀಸರ ಅತಿಥಿಯಾಗಿದ್ದು, ಮನೆಕಳ್ಳತನದ ಕೇಸ್ ದಾಖಲಿಸಲಾಗಿದೆ.
-Team Infotrend